ಭಕ್ತರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ: 7 ಮಕ್ಕಳು ಸಹಿತ 15 ಮಂದಿ ಸಾವು

24/02/2024
ಲಕ್ನೋ: ಭಕ್ತರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ವೊಂದು ಮಗುಚಿ ಬಿದ್ದ ಪರಿಣಾಮ 7 ಮಕ್ಕಳ ಸಹಿತ 15 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಕಾಸ್ಗಂಜ್ ನಲ್ಲಿ ನಡೆದಿದೆ.
ಮಾಘ ಪೂರ್ಣಿಮೆಯ ಪ್ರಯುಕ್ತ ಗಂಗಾ ನದಿಯಲ್ಲಿ ಸ್ನಾನ ಮಾಡಲು ಭಕ್ತರು ಟ್ರ್ಯಾಕ್ಟರ್ ಮೂಲಕ ತೆರಳುತ್ತಿದ್ದರು. ಘಟನೆಯಲ್ಲಿ ಹಲವಾರಿಗೆ ಗಾಯಗಳಾಗಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಕುರಿತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.
ಇನ್ನು ಘಟನೆಯಲ್ಲಿ ಗಾಯಗೊಂಡ ಯಾತ್ರಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.