ನಾವು ಯಾವುದನ್ನೂ ಮುಚ್ಚಿಟ್ಟಿಲ್ಲ, ಎಲ್ಲ ಪಾರದರ್ಶಕವಾಗಿದೆ | ಆದಿತ್ಯನಾಥ್ ಸ್ಪಷ್ಟನೆ
ಲಕ್ನೋ: ಉತ್ತರಪ್ರದೇಶದಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ನಿಯಂತ್ರಣ ತಪ್ಪಿಲ್ಲ, ನಾವು ಯಾವುದನ್ನೂ ಕೂಡ ಮುಚ್ಚಿಡುವುದಿಲ್ಲ, ಎಲ್ಲವೂ ಪಾರದರ್ಶಕವಾಗಿದೆ,ಕೊರೊನಾ ವೈರಸ್ ನ ಮೂರನೇ ಅಲೆ ಎದುರಿಸಲು ಸರ್ಕಾರ ಸಜ್ಜಾಗಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ವ್ಯಕ್ತವಾಗಿರುವ ಆತಂಕಗಳ ಬಗ್ಗೆ ಮಾತನಾಡುತ್ತಾ ಅವರು ಈ ಸಮರ್ಥನೆ ನೀಡಿದರು. ಪರೀಕ್ಷೆಯ ಮಾಹಿತಿಗಳು, ಚೇತರಿಕೆ ಕಂಡವರು, ಮೃತಪಟ್ಟವರ ಮಾಹಿತಿಯನ್ನು ಸರ್ಕಾರಿ ವೆಬ್ ಸೈಟ್ ನಲ್ಲಿ ದಾಖಲಿಸಲಾಗುತ್ತಿದೆ ಎಂದು ಅವರು ನೋಯ್ಡಾದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತಾ ಹೇಳಿದರು.
ಕೊರೊನಾ ವೈರಸ್ ನಿಯಂತ್ರಣಕ್ಕೆ ಗ್ರಾಮೀಣ ಭಾಗದಲ್ಲಿ ಕೊರೊನಾ ಹರಡುವಿಕೆ ಪತ್ತೆ ಹಚ್ಚಲು ಹೆಚ್ಚುವರಿ ಪರೀಕ್ಷಾ ಕಿಟ್ ಗಳು, ವೈದ್ಯಕೀಯ ಸಲಕರಣೆಗಳು ಹಾಗೂ ತರಬೇತಿ ತಂಡ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಉತ್ತರಪ್ರದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿಲ್ಲ. ಸರ್ಕಾರ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಮಾಧ್ಯಮಗಳು ಕೂಡ ಇಲ್ಲಿ ಸ್ವತಂತ್ರವಾಗಿ ವರದಿ ಮಾಡಲು ಸಾಧ್ಯವಾಗದ ಸ್ಥಿತಿ ಸರ್ಕಾರ ನಿರ್ಮಾಣ ಮಾಡುತ್ತಿದೆ. ಭಾರೀ ಸಂಖ್ಯೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಏರಿಕೆಯಾಗಿದ್ದು, ಸಾವಿನ ಸಂಖ್ಯೆಯನ್ನು ಕೂಡ ಸರ್ಕಾರ ಸರಿಯಾಗಿ ನೀಡುತ್ತಿಲ್ಲ ಎನ್ನುವ ಹಲವು ಆರೋಪಗಳು ಕೇಳಿ ಬಂದಿರುವ ಬೆನ್ನಲ್ಲೇ ಸಿಎಂ ಆದಿತ್ಯನಾಥ್ ಈ ಸ್ಪಷ್ಟನೆ ನೀಡಿದ್ದಾರೆ.