ನೇಜಾರು ನಾಲ್ವರ ಭೀಕರ ಹತ್ಯೆ ಪ್ರಕರಣ: ಆಟೋದಲ್ಲೇ ಹೋಗಿ 15 ನಿಮಿಷದಲ್ಲೇ ವಾಪಸ್‌ ಬಂದಿದ್ದ ಹಂತಕ: ನಾಲ್ವರನ್ನು ಕೊಂದಿದ್ದೇಕೆ? - Mahanayaka
12:28 AM Saturday 23 - August 2025

ನೇಜಾರು ನಾಲ್ವರ ಭೀಕರ ಹತ್ಯೆ ಪ್ರಕರಣ: ಆಟೋದಲ್ಲೇ ಹೋಗಿ 15 ನಿಮಿಷದಲ್ಲೇ ವಾಪಸ್‌ ಬಂದಿದ್ದ ಹಂತಕ: ನಾಲ್ವರನ್ನು ಕೊಂದಿದ್ದೇಕೆ?

nejaru
13/11/2023


Provided by

ಉಡುಪಿ: ದುಷ್ಕರ್ಮಿಯೋರ್ವ ಮನೆಗೆ ನುಗ್ಗಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಉಡುಪಿಯ ಇತಿಹಾಸದಲ್ಲೇ ಇದೊಂದು ಅತ್ಯಂತ ಭಯಾನಕವಾದ ಹತ್ಯೆಯಾಗಿದೆ.

ಹಂತಕ ಉಡುಪಿಯ ಸಂತೆಕಟ್ಟೆಯಿಂದ ತೃಪ್ತಿ ಲೇಔಟ್‌ ಗೆ ಆಟೋದಲ್ಲಿ ಆಗಮಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಿದ್ದ ಎಂದು  ಹಂತಕ ಬಂದಿದ್ದ ಆಟೋ ಚಾಲಕ ಶ್ಯಾಮ್‌ ಎಂಬವರು ತಿಳಿಸಿದ್ದಾರೆ.  ಬೆಳಗ್ಗೆ 8:30ರಿಂದ 9 ಗಂಟೆಯ ಮಧ್ಯೆ ದ್ವಿಚಕ್ರವಾಹನದಲ್ಲಿ ಬಂದಿದ್ದ ಹಂತಕ ಕ್ವೀನ್ಸ್‌ ರಸ್ತೆಯಲ್ಲಿ  ಆಟೋ ಏರಿದ್ದ. ತೃಪ್ತಿ ಲೇಔಟ್‌ ನ ಮನೆಯ ಮುಂಭಾಗದ ಗೇಟ್‌ ನ ಬಳಿ ಹಂತಕ ಇಳಿದಿದ್ದ ಎಂದು ಆಟೋ ಚಾಲಕ ತಿಳಿಸಿದ್ದಾರೆ.

ಕೊಲೆಯ ನಂತರ 15 ನಿಮಿಷದ ಬಳಿಕ ಹಂತಕ ಮತ್ತೆ ಅದೇ ಆಟೋ ಸ್ಟ್ಯಾಂಡ್‌ ಗೆ ಮರಳಿದ್ದಾನೆ. ಕ್ಯೂನಲ್ಲಿದ್ದ ಬೇರೊಂದು ಆಟೋವನ್ನು ಏರಿದ್ದ. ಈ ವೇಳೆ ಶ್ಯಾಮ್‌ ಅವರು, ಇಷ್ಟು ಬೇಗ ಬರ್ತೀರಾದರೇ ನಾನೇ ಕಾಯುತ್ತಿದ್ದೆ ಎಂದಿದ್ದಾರೆ. ಈ ವೇಳೆ ಆತ ಪರವಾಗಿಲ್ಲ ಎಂದಿದ್ದನಂತೆ. ಅಲ್ಲಿಂದ ಬೇರೊಂಧು ಆಟೋದಲ್ಲಿ ಆತ ತೆರಳಿದ್ದಾನೆ. ಈ ವೇಳೆ ವೇಗವಾಗಿ ಹೋಗುವಂತೆ ಆಟೋ ಚಾಲಕನನ್ನು ಒತ್ತಾಯಿಸಿದ್ದ ಎಂದು ಅವರು ತಿಳಿಸಿದ್ದಾರೆ.

ಹಂತಕನ ದಾಳಿಗೆ  ನೇಜಾರು ತೃಪ್ತಿ ಲೇಔಟ್‌ ನಿವಾಸಿಗಳಾದ ಹಸೀನಾ(42), ಅವರ ಪುತ್ರಿಯರಾದ ಅಫ್ನಾನ್(22)‌ ಮತ್ತು ಅಯ್ನಾಝ್(20)‌ ಪುತ್ರ ಅಸೀಮ್(12)‌ ಬಲಿಯಾಗಿದ್ದಾರೆ.

ಶೌಚಾಲಯದಲ್ಲಿ ಅಡಗಿ ಜೀವ ಉಳಿಸಿಕೊಂಡ ವೃದ್ಧೆ:

ನೇಜಾರಿನಲ್ಲಿ ನಡೆದ ಭೀಕರ ಹತ್ಯೆಯ ವೇಳೆ ಸುಮಾರು 70 ವರ್ಷ ವಯಸ್ಸಿನ ಮಹಿಳೆ ಹಂತಕನಿಂದ ತಪ್ಪಿಸಿಕೊಂಡಿದ್ದಾರೆ. ಹಂತಕ ಮನೆಯಲ್ಲಿದ್ದ ನಾಲ್ವರನ್ನು ಹರಿತವಾದ ಆಯುಧದಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ವೇಳೆ ಮನೆಯಲ್ಲಿದ್ದ  ವೃದ್ಧೆ ಹಾಜಿರಾ ಅವರ ಹೊಟ್ಟೆಯ ಭಾಗಕ್ಕೆ ದುಷ್ಕರ್ಮಿ ಚೂರಿಯಿಂದ ಇರಿದಿದ್ದಾನೆ. ಇದರಿಂದಾಗಿ ಅವರು ಗಾಯಗೊಂಡಿದ್ದಾರೆ. ಆದರೆ ಮನೆಯ ಶೌಚಾಲಯದೊಳಗೆ ಹೋಗಿ ಬಾಗಿಲು ಹಾಕಿ ಚಿಲಕ ಹಾಕಿಕೊಂಡಿದ್ದಾರೆ. ಹೀಗಾಗಿ ಹಂತಕನಿಂದ ಅವರು ತಪ್ಪಿಸಿಕೊಂಡಿದ್ದಾರೆ.

ಇನ್ನೂ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ತೆರಳಿದ್ದು, ಶೌಚಾಲಯದ ಬಾಗಿಲು ಮುಚ್ಚಿಕೊಂಡಿರುವುದರಿಂದ ಅನುಮಾನ ಬಂದು ಬಾಗಿಲು ತೆರೆಯುವಂತೆ ಹೇಳಿದರೂ ಹಾಜಿರಾ ಅವರು ಭಯದಿಂದ ಬಾಗಿಲು ತೆರೆದಿರಲಿಲ್ಲ. ಬಳಿಕ ಪೊಲೀಸರು ಬಾಗಿಲು ಮುರಿದು ಹಾಜಿರಾ ಅವರನ್ನು ರಕ್ಷಿಸಿದ್ದಾರೆ. ಆದ್ರೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಪೊಲೀಸರಿಂದ ತನಿಖೆಗೆ ಚುರುಕು:

ಉಡುಪಿಯ ನೇಜಾರು ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಈ ಸಂಬಂಧ ರಚಿಸಲಾದ ಐದು ಪೊಲೀಸ್ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.

ಈಗಾಗಲೇ ಹಂತಕ ಹೋಗಿರುವ ಮಾರ್ಗದಲ್ಲಿರುವ ಸಿಸಿಟಿವಿ ಫುಟೇಜ್ ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಆತ ಕೊಲೆಗೈದು ನೇಜಾರಿನಿಂದ ಸಂತೆಕಟ್ಟೆಗೆ, ಸಂತೆಕಟ್ಟೆಯಿಂದ ಉಡುಪಿಗೆ, ಉಡುಪಿಯಿಂದ ಉದ್ಯಾವರದವರೆಗೆ ಹೋಗಿರುವ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಕಳೆಹಾಕಿದ್ದಾರೆ.

ಹಣಕಾಸು ವ್ಯವಹಾರದ ಹಿನ್ನೆಲೆಯಲ್ಲಿ ಈ ಕೊಲೆ ನಡೆಸಿರುವ ಬಗ್ಗೆ ಶಂಕೆ ಇದ್ದು, ಆರೋಪಿ ಸುಪಾರಿ ಕಿಲ್ಲರ್ ಎಂಬ ಅನುಮಾನ ವ್ಯಕ್ತವಾಗಿದೆ. ಆ ದಿಕ್ಕಿನಲ್ಲಿ ಪೊಲೀಸ್ ತಂಡ ತನಿಖೆ ಮುಂದುವರೆಸಿದೆ. ಈವರೆಗೆ ಯಾರನ್ನು ಕೂಡ ಬಂಧಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇತ್ತೀಚಿನ ಸುದ್ದಿ