ಶಮಿ ಸುನಾಮಿ‌ ಬೌಲಿಂಗ್: ಕಿವೀಸ್ ಉಡೀಸ್; ವಿಶ್ವಕಪ್ ಫೈನಲ್ ಗೇರಿದ ಟೀಂ ಇಂಡಿಯಾ - Mahanayaka

ಶಮಿ ಸುನಾಮಿ‌ ಬೌಲಿಂಗ್: ಕಿವೀಸ್ ಉಡೀಸ್; ವಿಶ್ವಕಪ್ ಫೈನಲ್ ಗೇರಿದ ಟೀಂ ಇಂಡಿಯಾ

16/11/2023

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ಪಡೆಯನ್ನು 70 ರನ್​ಗಳಿಂದ ಮಣಿಸಿದ ಟೀಂ ಇಂಡಿಯಾ 2023 ರ ಏಕದಿನ ವಿಶ್ವಕಪ್​ನ ಫೈನಲ್​ಗೇರಿದೆ. ಈ ಮೂಲಕ 2019ರ ವಿಶ್ವಕಪ್​ನಲ್ಲಿ ಟೀಂ ಇಂಡಿಯಾವನ್ನು ಸೆಮಿಫೈನಲ್​ನಲ್ಲಿ ಸೋಲಿಸಿ ಟೂರ್ನಿಯಿಂದ ಹೊರಹಾಕಿದ್ದ ನ್ಯೂಝಿಲೆಂಡ್​ಗೆ ರೋಹಿತ್​ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರ ಶತಕದ ನೆರವಿನಿಂದ 50 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 398 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನ್ಯೂಝಿಲೆಂಡ್ ತಂಡ ಡೇರೆಲ್ ಮಿಚೆಲ್ ಅವರ ಏಕಾಂಗಿ ಹೋರಾಟದ ಶತಕದ ಹೊರತಾಗಿಯೂ 48.5 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 327 ರನ್​ಗಳಿಸಲಷ್ಟೇ ಶಕ್ತವಾಯಿತು.

ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಅರ್ಧಶತಕದ ಜೊತೆಯಾಟದೊಂದಿಗೆ ಉತ್ತಮ ಆರಂಭ ನೀಡಿದರು. ಈ ವೇಳೆ ಎಂದಿನಂತೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ 47 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ವಿರಾಟ್ ಕೊಹ್ಲಿ ಜೊತೆಯಾದ ಶುಭ್​ಮನ್ ಗಿಲ್ ಶತಕದ ಜೊತೆಯಾಟವನ್ನು ನಡೆಸಿದರು. ಈ ಹಂತದಲ್ಲಿ ಗಾಯಗೊಂಡ ಗಿಲ್ ಆಟದ ಮಧ್ಯದಲ್ಲೇ ಮೈದಾನ ತೊರೆದರು. ಅಂತಿಮವಾಗಿ ಅವರು ಅಜೇಯ 80 ರನ್ ಸಿಡಿದರು.

ಶುಭ್​ಮನ್ ಗಿಲ್ ನಂತರ ಕಿಂಗ್ ಕೊಹ್ಲಿ ಜೊತೆಯಾದ ಲೋಕಲ್ ಬಾಯ್ ಶ್ರೇಯಸ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇಬ್ಬರು ಶತಕದ ಜೊತೆಯಾಟ ನಡೆಸಿದಲ್ಲದೆ, ವೈಯಕ್ತಿಕವಾಗಿ ಶತಕ ಸಿಡಿಸಿ ಮಿಂಚಿದರು. ಈ ವೇಳೆ ವಿರಾಟ್ ಕೊಹ್ಲಿ 113 ಎಸೆತಗಳಲ್ಲಿ 117 ರನ್ ಸಿಡಿಸಿ ಏಕದಿನ ಕ್ರಿಕೆಟ್​ನಲ್ಲಿ 50ನೇ ಶತಕವನ್ನು ಪೂರ್ಣಗೊಳಿಸಿದರು. ಶ್ರೇಯಸ್ ಅಯ್ಯರ್ 105 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ ಅಜೇಯ 39 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 1 ರನ್ ಗಳಿಸಿ ಔಟಾದರು. ನ್ಯೂಜಿಲೆಂಡ್ ಪರ ಟಿಮ್ ಸೌಥಿ 3 ವಿಕೆಟ್ ಪಡೆದರು. ಟ್ರೆಂಟ್ ಬೌಲ್ಟ್ 1 ವಿಕೆಟ್ ಪಡೆದರು.

ಭಾರತ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ನ್ಯೂಝಿಲೆಂಡ್​ಗೆ ಉತ್ತಮ ಆರಂಭ ಸಿಗಲಿಲ್ಲ. ತಂಡ 40 ರನ್​ ದಾಖಲಿಸುವಷ್ಟರಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡಿತು. ಆರಂಭಿಕ ಆಘಾತದ ಬಳಿಕ ಜೊತೆಯಾದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡ್ಯಾರೆಲ್ ಮಿಚೆಲ್ ಶತಕದ ಜೊತೆಯಾಟ ಹಂಚಿಕೊಂಡರು. ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಮಿಚೆಲ್ 134 ರನ್ ಸಿಡಿಸಿದರೆ, ನಾಯಕ ಕೇನ್ ವಿಲಿಯಮ್ಸನ್ 69 ರನ್​ಗಳ ಕೊಡುಗೆ ನೀಡಿದರು. ಗ್ಲೆನ್ ಫಿಲಿಪ್ಸ್ 41 ರನ್ ಗಳಿಸಿ ಔಟಾದರೆ, ಆರಂಭಿಕ ಜೋಡಿ ಡೆವೊನ್ ಕಾನ್ವೆ ಮತ್ತು ರಚಿನ್ ರವೀಂದ್ರ ಇಬ್ಬರೂ ತಲಾ 13 ರನ್ ಗಳಿಸಿದರು. ಟಾಮ್ ಲಾಥ್‌ಮನ್‌ಗೆ ಖಾತೆ ಕೂಡ ತೆರೆಯಲು ಸಾಧ್ಯವಾಗಲಿಲ್ಲ. ಕಿವೀಸ್ ಬಾಲಂಗೋಚಿಗಳು ಭಾರತದ ದಾಳಿಯ ಮುಂದೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಮೊಹಮ್ಮದ್ ಶಮಿ ಟೀಂ ಇಂಡಿಯಾ ಪರ ಅತಿ ಹೆಚ್ಚು 7 ವಿಕೆಟ್ ಗಳಿಸಿದರು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಕುಲ್ದೀಪ್ ಯಾದವ್, ಜಡೇಜಾ ತಲಾ 1 ವಿಕೆಟ್ ಪಡೆದರು. ಮೊಹಮ್ಮದ್ ಶಮಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಇತ್ತೀಚಿನ ಸುದ್ದಿ