ದೇಗುಲದಲ್ಲಿ ಅನ್ಯಧರ್ಮೀಯರಿಗೆ ಉದ್ಯೋಗ ಇಲ್ಲ: ಆಂಧ‍್ರಪ್ರದೇಶ ಹೈಕೋರ್ಟ್ ಹೇಳಿಕೆ - Mahanayaka
12:33 AM Thursday 18 - December 2025

ದೇಗುಲದಲ್ಲಿ ಅನ್ಯಧರ್ಮೀಯರಿಗೆ ಉದ್ಯೋಗ ಇಲ್ಲ: ಆಂಧ‍್ರಪ್ರದೇಶ ಹೈಕೋರ್ಟ್ ಹೇಳಿಕೆ

22/11/2023

ದೇಗುಲಗಳಲ್ಲಿ ಇತರೆ ಧರ್ಮದವರಿಗೆ ಉದ್ಯೋಗ ಮಾಡಲು ಅವಕಾಶವಿಲ್ಲ. ಹಿಂದೂ ಧರ್ಮವನ್ನು ಪಾಲಿಸುವವರು ಮಾತ್ರ ದೇಗುಲಗಳಲ್ಲಿ ಉದ್ಯೋಗ ನಿರ್ವಹಿಸಲು ಅರ್ಹರು ಎಂದು ಆಂಧ‍್ರಪ್ರದೇಶ ಹೈಕೋರ್ಟ್ ಹೇಳಿದೆ.

ತಮ್ಮನ್ನು ಶ್ರೀಶೈಲಂ ದೇವಸ್ಥಾನಂನ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಿಂದ ವಜಾಗೊಳಿಸಿರುವುದನ್ನು ಪ್ರಶ್ನಿಸಿ ಪಿ.ಸುದರ್ಶನ್ ಬಾಬು ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಹರಿನಾಥ್ ನುನೆಪಲ್ಲಿ ಅವರ ನ್ಯಾಯಪೀಠವು, ಅರ್ಜಿದಾರರು ತಾವು ಕ್ರಿಶ್ಚಿಯನ್ ಧರ್ಮದವರು ಎಂಬ ಸಂಗತಿಯನ್ನು ಬಚ್ಚಿಟ್ಟು ಹುದ್ದೆ ಪಡೆದುಕೊಂಡಿದ್ದಾರೆ ಎಂದು ಹೇಳಿದೆ.

ತಾವು ಪರಿಶಿಷ್ಟ ಜಾತಿ (ಮಾಲ) ಜಾತಿಗೆ ಸೇರಿದವರಾಗಿದ್ದು, 2002ರಲ್ಲಿ ಅನುಕಂಪಾಧಾರಿತ ಹುದ್ದೆಯನ್ನು ಪಡೆದಿದ್ದೇನೆ ಎಂದು ಅರ್ಜಿದಾರ ಸುದರ್ಶನ್ ಬಾಬು ಹೇಳಿದ್ದರು.
2010ರಲ್ಲಿ ಹೋಲಿ ಕ್ರಾಸ್ ಚರ್ಚ್ ನಲ್ಲಿ ಕ್ರಿಶ‍್ಚಿಯನ್ ಮಹಿಳೆಯನ್ನು ಸುದರ್ಶನ್‌ ಬಾಬು ಅವರು ವಿವಾಹವಾಗಿದ್ದರೂ, ತಾನು ಹಿಂದೂ ಧರ್ಮಕ್ಕೆ ಸೇರಿದ್ದೇನೆ ಎಂದು ಸುಳ್ಳು ಹೇಳಿ ದೇವಾಲಯದಲ್ಲಿ ಹುದ್ದೆ ಪಡೆದಿದ್ದಾರೆ ಎಂದು ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು.

ತಮ್ಮ ಧರ್ಮವನ್ನು ಮುಚ್ಚಿಟ್ಟಿದ್ದಾರೆ ಎಂದು ಶ್ರೀಶೈಲಂ ದೇವಾಲಯವು ಅವರನ್ನು ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಿಂದ ತೆಗೆದು ಹಾಕಿತ್ತು. 2012ರಲ್ಲಿ ತಮ್ಮನ್ನು ಹುದ್ದೆಯಿಂದ ವಜಾಗೊಳಿಸಿರುವ ನಿರ್ಧಾರವನ್ನು ಪ್ರಶ್ನಿಸಿ ಸುದರ್ಶನ್ ಬಾಬು ಹೈಕೋರ್ಟ್ ಮೊರೆ ಹೋಗಿದ್ದರು.

ಇತ್ತೀಚಿನ ಸುದ್ದಿ