ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಚಾಮರಾಜನಗರದಲ್ಲಿ ಆಕ್ರೋಶ

ಚಾಮರಾಜನಗರ: ರಾಜ್ಯ ಸರ್ಕಾರ ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಪ್ರತಿಭಟನೆ ಹೊರಟು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆದು ಕೇಂದ್ರ ಹಾಗೂ ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರಗಳ ವಿರುದ್ಧದ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕೋಶ ವ್ಯಕ್ತಪಡಿಸಿದರು.
ತಮಿಳುನಾಡಿಗೆ ನಿರಂತರವಾಗಿ ನೀರು ಬಿಡುತ್ತಿದ್ದರು. ಕರ್ನಾಟಕದ ಸಂಸದರು, ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯರು ಮೌನವಾಗಿದ್ದು ಇವರೆಲ್ಲರೂ ಕೂಡಲೇ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕೆಂದು ಕಿಡಿಕಾರಿದರು.
ಕಾವೇರಿ ನಿರ್ವಹಣಾ ಮಂಡಳಿ ಮಲತಾಯಿ ಧೋರಣೆ ಅನುಸರಿಸುತ್ತಿದೆ, ರಾಜ್ಯ ಸರ್ಕಾರ ತಕ್ಷಣವೇ ನೀರು ನಿಲ್ಲಿಸಿ ರಾಜ್ಯದ ಜನರ ಹಿತ ಕಾಪಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ರಾಜ್ಯದ ರೈತರಿಹೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದ್ರೋಹ ಎಸಗುತ್ತಿವೆ, ರಾಜ್ಯ ಸರ್ಕಾರ ತಮಿಳುನಾಡಿನ ಗುಲಾಮಗಿರಿ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ರಸ್ತೆ ತಡೆ ನಡೆಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.