ಬಿಜೆಪಿಯ ದೇಗುಲ ರಾಜಕೀಯಕ್ಕೆ ಅಯೋಧ್ಯೆ ಜನರು ತಕ್ಕ ಉತ್ತರ ನೀಡಿದ್ದಾರೆ: ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿಕೆ

ಬಿಜೆಪಿಯ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ದೇವಾಲಯದ ರಾಜಕೀಯವನ್ನು ಹೇಗೆ ಸರಿಪಡಿಸಬಹುದು ಎಂದು ಅಯೋಧ್ಯೆಯ ಜನರು ಸಂದೇಶ ಕಳುಹಿಸಿದ್ದಾರೆ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ. ಬಿಜೆಪಿಗೆ ಉತ್ತರಪ್ರದೇಶದ ಜನರು ದೊಡ್ಡ ಹೊಡೆತ ನೀಡಿದ್ದಾರೆ. ಅಲ್ಲಿನ ಜನರು ವಿಭಿನ್ನ ರೀತಿಯ ತೀರ್ಪು ನೀಡಿದ್ದಾರೆ ಎಂದು ಪವಾರ್ ಅಭಿಪ್ರಾಯ ನೀಡಿದ್ದಾರೆ.
ಬಾರಾಮತಿಯಲ್ಲಿ ನಡೆದ ವರ್ತಕರ ಸಮಾವೇಶದಲ್ಲಿ ಮಾತನಾಡಿದ ಶರತ್ ಪವಾರ್, ಐದು ವರ್ಷಗಳ ಹಿಂದೆ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿದ್ದರೆ, ಈ ಬಾರಿ ಅವರ ಸಂಖ್ಯೆ 240ಕ್ಕೆ ಇಳಿದಿದೆ, ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆಯಿದೆ. ಚುನಾವಣಾ ಫಲಿತಾಂಶವು ಬಿಜೆಪಿಗೆ 60 ಸ್ಥಾನಗಳು ಕಡಿಮೆಯಾಗಿರುವುದನ್ನು ಸೂಚಿಸುತ್ತದೆ.
ರಾಮಮಂದಿರ ಚುನಾವಣಾ ಅಜೆಂಡಾ ಆಗಿರುತ್ತದೆ ಮತ್ತು ಆಡಳಿತ ಪಕ್ಷವು ಮತಗಳನ್ನು ಪಡೆಯುತ್ತದೆ ಎಂದು ಅವರು ನಿರೀಕ್ಷಿಸಿದ್ದರು, ಆದರೆ ನಮ್ಮ ದೇಶದ ಜನರು ಸಾಕಷ್ಟು ಬುದ್ಧಿವಂತರಾಗಿದ್ದಾರೆ. ದೇವಸ್ಥಾನದ ಹೆಸರಿನಲ್ಲಿ ಮತ ಕೇಳಲಾಗುತ್ತಿದೆ ಎಂದು ಅವರು ಅರಿತುಕೊಂಡಾಗ ಅವರು ವಿಭಿನ್ನ ನಿಲುವು ತೆಗೆದುಕೊಳ್ಳಲು ನಿರ್ಧರಿಸಿದರು ಮತ್ತು ಬಿಜೆಪಿ ಸೋಲನ್ನು ಎದುರಿಸಬೇಕಾಯಿತು ಎಂದು ಶರದ್ ಪವಾರ್ ಹೇಳಿದ್ದಾರೆ.
ಅಯೋಧ್ಯೆ ದೇವಾಲಯವಿರುವ ಫೈಜಾಬಾದ್ ಸಂಸದೀಯ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್ ಹಾಲಿ ಬಿಜೆಪಿ ಸಂಸದ ಲಲ್ಲು ಸಿಂಗ್ ರನ್ನು 54,567 ಮತಗಳ ಅಂತರದಿಂದ ಸೋಲಿಸಿದ್ದಾರೆ.. ದೇವಸ್ಥಾನವನ್ನು ಚುನಾವಣಾ ಅಜೆಂಡಾವಾಗಿ ಬಳಸಿಕೊಳ್ಳುವ ಬಗ್ಗೆ ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸುತ್ತಿರುವಾಗ ಜನರು ವಿಭಿನ್ನ ನಿಲುವು ತಳೆದಿದ್ದಾರೆ ಎಂದು ಶರದ್ ಪವಾರ್ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth