ಮಾಸ್ಕ್ ಧರಿಸಿಲ್ಲ ಎಂದು ನಡುರಸ್ತೆಯಲ್ಲಿ ಆಟೋ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು - Mahanayaka

ಮಾಸ್ಕ್ ಧರಿಸಿಲ್ಲ ಎಂದು ನಡುರಸ್ತೆಯಲ್ಲಿ ಆಟೋ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು

policemen
07/04/2021

ಇಂದೂರ್: ಮಾಸ್ಕ್ ಧರಿಸಿಲ್ಲ ಎಂದು ವ್ಯಕ್ತಿಯೋರ್ವನ ಮೇಲೆ ಇಬ್ಬರು ಪೊಲೀಸರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದ್ದು, ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

35 ವರ್ಷ ವಯಸ್ಸಿನ ಕೃಷ್ಣ ಕೀಯರ್ ಎಂದು ಗುರುತಿಸಲಾಗಿದೆ. ಆಟೋ ರಿಕ್ಷಾ ಚಾಲಕ, ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಂದೆಯನ್ನು ಕಾಣಲು ಬಂದಿದ್ದು, ಈ ವೇಳೆ ತನ್ನ ಮಾಸ್ಕ್ ಕಳೆದುಹೋಗಿದೆ ಎಂದು ಖಾಸಗಿ ಚಾನೆಲ್ ವೊಂದು ವರದಿ ಮಾಡಿದೆ.

ಆದರೆ ಪೊಲೀಸರು ಹೇಳುವ ಪ್ರಕಾರ, ಪೊಲೀಸರು ಆಟೋ ಚಾಲಕನ ಬಳಿಯಲ್ಲಿ ಮಾಸ್ಕ್ ಹಾಕಲು ಹೇಳಿದ್ದಾರೆ. ಆದರೆ ಆತ ಪೊಲೀಸರಿಗೆ ಎದುರುತ್ತರ ನೀಡಿರುವುದೇ ಅಲ್ಲದೇ, ಪೊಲೀಸರನ್ನ ನಿಂದಿಸಿ, ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ.

ವಿಡಿಯೋದಲ್ಲಿ ಪೊಲೀಸರು ವ್ಯಕ್ತಿಯ ಜೊತೆಗೆ ನಿರ್ದಯವಾಗಿ ನಡೆದುಕೊಂಡಿರುವುದು ಕಂಡು ಬಂದಿದೆ. ಆಟೋ ಚಾಲಕನಿಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸುತ್ತಿದ್ದರೆ, ಆಟೋ ಚಾಲಕನ ಮಗ, ಬಾಲಕ ತಂದೆಗೆ ಹೊಡೆಯಬೇಡಿ ಎಂದು ಪೊಲೀಸರ ಬಳಿ ಪರಿಪರಿಯಾಗಿ ಬೇಡುತ್ತಿರುವ ದೃಶ್ಯಕಂಡು ಬಂದಿದೆ.

ಇನ್ನೂ ಘಟನೆ ಸಂಬಂಧ ಹೇಳಿಕೆ ನೀಡಿರುವ ಎಸ್ ಪಿ ಅಶುತೋಷ್ ಬಾಗ್ರಿ, ಪೊಲೀಸರ ಗೌರವವನ್ನು ಕೆಡಿಸಲು ಪ್ರಯತ್ನ ನಡೆಸಲಾಗಿದೆ. ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಪೊಲೀಸರು ಆಟೋ ಚಾಲಕನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಈ ವೇಳೆ ಆಟೋ ಚಾಲಕ ಕೂಡ ತಪ್ಪು ಮಾಡಿದ್ದಾನೆ. ಈ ವಿಡಿಯೋದಲ್ಲಿ ಪೊಲೀಸರ ಜೊತೆಗೆ ಆಟೋ ಚಾಲಕ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿ, ಉದ್ದೇಶ ಪೂರ್ವಕವಾಗಿ ಕೆರಳಿಸಿದ್ದಾನೆ. ಆದರೆ ಈ ವಿಚಾರದಲ್ಲಿ ಪೊಲೀಸರದ್ದೂ ತಪ್ಪು ಇರುವ ಕಾರಣ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ