ಅರುಣ್ ಪುತ್ತಿಲಗೆ ಮುಖಭಂಗ: ಬಿಜೆಪಿ ಕಾರ್ಯಕರ್ತರ ವಿರೋಧದ ಹಿನ್ನೆಲೆ ಪಕ್ಷ ಸೇರ್ಪಡೆ ಮುಂದೂಡಿಕೆ! - Mahanayaka

ಅರುಣ್ ಪುತ್ತಿಲಗೆ ಮುಖಭಂಗ: ಬಿಜೆಪಿ ಕಾರ್ಯಕರ್ತರ ವಿರೋಧದ ಹಿನ್ನೆಲೆ ಪಕ್ಷ ಸೇರ್ಪಡೆ ಮುಂದೂಡಿಕೆ!

arun puthilla
16/03/2024


Provided by

ಪುತ್ತೂರು: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧವೇ ಬಂಡಾಯವೆದ್ದು, ಬಿಜೆಪಿಯನ್ನು 3ನೇ ಸ್ಥಾನಕ್ಕೆ ತಳ್ಳಿ ಹಾಕಿದ್ದ ಅರುಣ್ ಕುಮಾರ್ ಪುತ್ತಿಲ, ರಾಜ್ಯಾದ್ಯಂತ ಸುದ್ದಿಯಾಗಿದ್ದರು.

ಇದೀಗ ಅವರು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಲು ವೇದಿಕೆ ಸಜ್ಜಾಗಿತ್ತು. ಆದರೆ, ಪಕ್ಷವನ್ನೇ ಸೋಲಿಸಿದ ವ್ಯಕ್ತಿಯನ್ನು ಬಿಜೆಪಿಗೆ ಸೇರ್ಪಡೆಗೊಳಿಸಬಾರದು ಎಂಬ ಬಿಜೆಪಿ ನಾಯಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ವಿರುದ್ಧ ಬಂಡಾಯವೆದ್ದು, ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಜೊತೆಗೆ ಪುತ್ತಿಲ ಪರಿವಾರ ಸ್ಥಾಪಿಸಿ, ಜಿಲ್ಲಾಮಟ್ಟಕ್ಕೆ ತಮ್ಮ ಸಂಘಟನೆಯನ್ನು ವ್ಯಾಪಿಸಲು ಮುಂದಾಗಿದ್ದರು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷಕ್ಕೆ ಆಗುವ ಡ್ಯಾಮೇಜ್ ಅರಿತು ಪಕ್ಷದ ನಾಯಕರು ಅವರನ್ನು ಮತ್ತೆ ಬಿಜೆಪಿಗೆ ಸೇರ್ಪಡೆಗೊಳಿಸಲು ಮುಂದಾಗಿದ್ದರು.

ಈ ನಡುವೆ ಅರುಣ್ ಕುಮಾರ್ ಪುತ್ತಿಲ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಅವರ ಕಾರ್ಯಕರ್ತರು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಪುತ್ತಿಲ ಪರಿವಾರ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವುದು ಫಿಕ್ಸ್ ಆಗಿತ್ತು. ಇದೀಗ ಅರುಣ್ ಪುತ್ತಿಲ ಬಿಜೆಪಿಗೆ ಸೇರ್ಪಡೆಯಾಗುವ ವಿಚಾರಕ್ಕೆ ಪಕ್ಷದ ಕಾರ್ಯಕರ್ತರು ಮುಖಂಡರಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಮುಂದೂಡಲಾಗಿದೆ.

ಅರುಣ್ ಪುತ್ತಿಲಗೆ ಈಗಲೇ ಮಂಡಲ ಅಧ್ಯಕ್ಷತೆ ಸೇರಿದಂತೆ ಯಾವುದೇ ಸ್ಥಾನಮಾನ ನೀಡಬಾರದು, ಜೊತೆಗೆ ಪುತ್ತಿಲ ಪರಿವಾರದಿಂದ ಬಿಜೆಪಿ ವಿರುದ್ಧ ಇರುವ ಪೋಸ್ಟರ್ ಗಳು, ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪುತ್ತಿಲ ಪರಿವಾರದಿಂದ ಬಿಜೆಪಿಗೆ ಅವಮಾನವಾಗಿದೆ. ಅದನ್ನು ಸರಿಪಡಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

 

ಇತ್ತೀಚಿನ ಸುದ್ದಿ