ಗಣೇಶೋತ್ಸವದಲ್ಲಿ ಪ್ರಸಾದ ಹಂಚಬೇಕಿದ್ರೆ ಈ ನಿಯಮ ಕಡ್ಡಾಯ: ಸರ್ಕಾರದ ನಿಯಮಕ್ಕೆ ಬಿಜೆಪಿ ಕೆಂಡಾಮಂಡಲ!
ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರಸಾದ ಹಂಚ ಬೇಕಾದ್ರೆ ಕಾರ್ಯಕ್ರಮ ಆಯೋಜಕರು ಈ ನಿಯಮವನ್ನು ಪಾಲಿಸಲೇ ಬೇಕಂತೆ. ಹೀಗಂತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಖಡಕ್ ನಿಯಮ ಜಾರಿಗೊಳಿಸಿದೆ.
ಗಣೇಶ ಪೆಂಡಾಲ್ ಗಳಲ್ಲಿ ಪ್ರಸಾದ ತಯಾರಿಸೋ ವ್ಯಕ್ತಿ ಅಥವಾ ಸಂಸ್ಥೆಗಳು FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ದಿಂದ ಪರವಾನಗಿ ಪಡೆದಿರಬೇಕು ಅಂತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಎಫ್ ಎಸ್ ಎಸ್ ಎಐನಿಂದ ಅನುಮತಿ ಪಡೆಯದೇ ಇದ್ದವರು ಆಹಾರ ನೀಡಿದರೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಪಾಲಿಕೆಯಿಂದ ಎಚ್ಚರಿಕೆ ನೀಡಲಾಗಿದೆ.
ಗಣೇಶೋತ್ಸವ ವೇಳೆ ಪ್ರಸಾದ ವಿನಿಯೋಗ ಇದ್ದರೆ ಅಲ್ಲಿ ಶುಚಿತ್ವ ಮತ್ತು ಗುಣಮಟ್ಟ ಸುರಕ್ಷತೆ ಪತ್ರ ಕಡ್ಡಾಯವಾಗಿದೆ. ಬಿಬಿಎಂಪಿ ಅನುಮತಿ ಜೊತೆಗೆ ಆಹಾರ ವಿತರಣೆಗೂ ಅನುಮತಿ ಪತ್ರ ಇರಲೇಬೇಕಿದೆ ಅಂತ ಸೂಚನೆಯಲ್ಲಿ ತಿಳಿಸಲಾಗಿದೆ.
ಭಕ್ತರ ಸುರಕ್ಷತೆಗೆ ಪ್ರಾಮುಖ್ಯತೆ:
ಇತ್ತೀಚೆಗೆ ದೇವಸ್ಥಾನ, ಜಾತ್ರೆಗಳಲ್ಲಿ ಪ್ರಸಾದ ಸೇವಿಸಿ ಜನರು ಅಸ್ವಸ್ಥರಾಗುವುದು, ಸಾವಿಗೀಡಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಪ್ರಸಾದ ಸೇವಿಸಿ ಅಮಾಯಕ ಜನರು ಪ್ರಾಣ ಕಳೆದುಕೊಂಡರೆ, ಅದಕ್ಕೆ ಜವಾಬ್ದಾರಿ ಯಾರು ಅನ್ನೋದೇ ದೊಡ್ಡ ಪ್ರಶ್ನೆಯಾಗಿತ್ತು. ಹೀಗಾಗಿ ಪ್ರಸಾದ ವಿನಿಯೋಗ ಮಾಡುವವರು FSSAI ನಿಂದ ಅನುಮತಿ ಪಡೆಯಬೇಕು ಎನ್ನುವ ಸರ್ಕಾರದ ನಿಯಮ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಉತ್ತಮವಾಗಿದೆ ಎಂದು ಹೇಳಲಾಗಿದೆ.
ಬಿಜೆಪಿ ಆಕ್ರೋಶ:
ಪ್ರಸಾದ ತಯಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಯಮದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದೆ. ಇದು ಸಮಸ್ತ ಹಿಂದೂಗಳ ಮನಸ್ಸಿಗೆ ಮಾಡಿದ ಘಾಸಿ ಎಂದಿದೆ.
ಸ್ಕ್ಯಾಮ್ ಸಿದ್ದರಾಮಯ್ಯನವರ ಓಲೈಕೆ ರಾಜಕಾರಣ ಪರಾಕಾಷ್ಠೆ ಮುಟ್ಟಿದೆ. ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್ ಗಳಲ್ಲಿ ದೇವರ ಪ್ರಸಾದವನ್ನು FSSAI ಪರವಾನಗಿ ಪಡೆದಿರುವ ವ್ಯಕ್ತಿ, ಸಂಸ್ಥೆಗಳಿಂದ ಮಾತ್ರ ತಯಾರಿಸುವಂತೆ ವಿಘ್ನ ಆದೇಶವನ್ನು ಹೊರಡಿಸಿ ಸಮಸ್ತ ಹಿಂದೂಗಳ ಮನಸ್ಸನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅನ್ಯಮತೀಯರ ಹಬ್ಬಗಳಲ್ಲಿ ಬೀದಿ ಬೀದಿಗಳಲ್ಲಿ ಆಹಾರ ಬೇಯಿಸುವಾಗ ಕೈ ಕಟ್ಟಿಕೊಂಡಿದ್ದ ಸಿದ್ದರಾಮಯ್ಯನವರು, ಈಗ ಹಿಂದೂಗಳ ಆರಾಧ್ಯ ದೈವ ಗಣಪತಿ ಹಬ್ಬದ ಆಚರಣೆಗೆ ಇಂಥ ವಿಘ್ನಾದೇಶಗಳನ್ನು ಹೊರಡಿಸುವ ಹಕೀಕತ್ತು ಏನಿದೆ? ಮುಖ್ಯಮಂತ್ರಿಗಳೇ, ನಿಮ್ಮ ಓಲೈಕೆಗೂ ಒಂದು ಮಿತಿ ಇರಲಿ ಎಂದು ಹರಿಹಾಯ್ದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj




























