ಪ್ರೀತಿಗೆ ಒಪ್ಪದ ಪೋಷಕರು: ಬಾಡಿಗೆ ಮನೆಗೆ ತೆರಳಿದ ಪ್ರೇಮಿಗಳ ದುರಂತ ಅಂತ್ಯ - Mahanayaka
12:34 AM Friday 12 - December 2025

ಪ್ರೀತಿಗೆ ಒಪ್ಪದ ಪೋಷಕರು: ಬಾಡಿಗೆ ಮನೆಗೆ ತೆರಳಿದ ಪ್ರೇಮಿಗಳ ದುರಂತ ಅಂತ್ಯ

24/02/2021

ಕಾಸರಗೋಡು: ಅದೇನೋ ಸಂಪ್ರದಾಯ, ಸಂಸ್ಕೃತಿ ಎಂದೆಲ್ಲ ಸಮಾಜದಲ್ಲಿ ಮಾತನಾಡುತ್ತಾರೆ. ಆದರೆ ಪ್ರೀತಿಸಿ ಮದುವೆಯಾಗುವುದನ್ನೂ ಒಪ್ಪದ ಮನಸ್ಥಿತಿಗಳು ಬೇಕಾದಷ್ಟು ನಮ್ಮಲ್ಲಿವೆ. ದ್ವೇಷಿಸುವವರನ್ನಾದರೂ ನಮ್ಮಲ್ಲಿ ಒಪ್ಪಿಕೊಳ್ಳುತ್ತಾರೆ. ಆದರೆ ಪ್ರೀತಿಯನ್ನು ಒಪ್ಪುವ ಮನಸ್ಥಿತಿಗಳೇ ಕಡಿಮೆಯಾಗುತ್ತಿದೆ. ಇಂತಹದ್ದೇ ಘಟನೆಯೊಂದು  ಕಾಸರಗೋಡಿನ ಪಯ್ಯನ್ನೂರಿನಲ್ಲಿ ನಡೆದಿದ್ದು, ಅಸಹಾಯಕ ಯುವ ಪ್ರೇಮಿಗಳಿಬ್ಬರು ತಮ್ಮ ಕುಟುಂಬಸ್ಥರ ದ್ವೇಷ ಮನಸ್ಥಿತಿಗೆ ಬಲಿಯಾಗಿದ್ದಾರೆ.

ವೆಸ್ಟ್ ಎಳೇರಿತಟ್ಟ್ ನ ಟಿ.ರವಿ ಅವರ 28 ವರ್ಷದ  ಪುತ್ರ ಶಿವಪ್ರಾದ್ ಹಾಗೂ ಏಯಿಲೋಟ್ ಮರಂಜೇರಿ ರಾಜನ್ ಅವರ 21 ವರ್ಷದ ಪುತ್ರಿ ಆರ್ಯ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಯ ಮನೆಯವರ ನಿರ್ಧಾರವೇ ಬೇರೆಯಾಗಿತ್ತು. ಅವರು ಬೇರೊಬ್ಬ ಯುವಕನ ಜೊತೆಗೆ ಆರ್ಯಳಿಗೆ ಮದುವೆ ಮಾಡಲು ನಿಶ್ಚಿತಾರ್ಥಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ.

ಪರಸ್ಪರ ಬಿಟ್ಟಿರಲೂ ಸಾಧ್ಯವಾಗದಷ್ಟು ಗಾಢ ಪ್ರೀತಿಯಲ್ಲಿದ್ದ ಶಿವಪ್ರಸಾದ್ ಹಾಗೂ ಆರ್ಯ ತಮ್ಮ ಜೀವನವನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ. ಅಂತೆಯೇ ಫೆ.19ರಂದು  ಹಿಂದಿ ಪರೀಕ್ಷೆಗೆಂದು ಹೊರಟ ಆರ್ಯ, ಶಿವಪ್ರಸಾದ್ ಜೊತೆಗೆ ಬಾಡಿಗೆ ಮನೆಯೊಂದಕ್ಕೆ ತೆರಳಿ, ಅಲ್ಲಿ ಇಬ್ಬರು ಕೂಡ ಸೀಮೆ ಎಣ್ಣೆ ಮೈಗೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.

ತೀವ್ರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರ್ಯ ಫೆ.22ರಂದು ರಾತ್ರಿ ಸಾವನ್ನಪ್ಪಿದ್ದು, ಶಿವ ಪ್ರಸಾದ್ ಫೆ.23ರಂದು ಸಾವನ್ನಪ್ಪಿದ್ದಾರೆ. ಅಂತೂ ಪ್ರೀತಿಗೆ ಬೆಲೆ ಇಲ್ಲದ ಜಗತ್ತಿಗೆ ಪ್ರೇಮಿಗಳು ವಿದಾಯ ಹೇಳಿದ್ದಾರೆ.

ಇತ್ತೀಚಿನ ಸುದ್ದಿ