ಇಸ್ರೇಲ್- ಹಮಾಸ್ ಯುದ್ಧ ವಿರಾಮಕ್ಕೆ ನಿರ್ಣಯ: ಗಾಝಾ ಪರ ಮಾತನಾಡದ ಭಾರತದ ನಿಲುವು ಆಘಾತ ತಂದಿದೆ ಎಂದ ಪ್ರಿಯಾಂಕಾ ಗಾಂಧಿ

ಇಸ್ರೇಲ್- ಹಮಾಸ್ ನಡುವಿನ ಯುದ್ಧ ವಿರಾಮಕ್ಕೆ ಜೋರ್ಡಾನ್ ದೇಶವು ವಿಶ್ವಸಂಸ್ಥೆಯಲ್ಲಿ ಗಾಝಾದ ಬಗ್ಗೆ ಮಂಡಿಸಿದ ನಿರ್ಣಯ ಸಭೆಯಲ್ಲಿ ಭಾರತ ಪಾಲ್ಗೊಳ್ಳದೆ ಇರುವುದು ನನಗೆ ಆಘಾತ ತಂದಿದೆ ಮತ್ತು ನಾಚಿಕೆ ಉಂಟು ಮಾಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಯುದ್ಧದಲ್ಲಿ ಫೆಲೆಸ್ತೀನ್ ನ ಸಾವಿರಾರು ಮಂದಿ ನಾಗರಿಕರು ಜೀವ ಕಳೆದುಕೊಳ್ಳುತ್ತಿರುವುದನ್ನು ಮೌನವಾಗಿ ನೋಡುವುದು ಭಾರತದ ಆಶಯಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಒಂದು ಕಣ್ಣು ಇಡೀ ಜಗತ್ತನ್ನು ಕುರುಡನನ್ನಾಗಿಸುತ್ತದೆ ಎಂಬ ಮಹಾತ್ಮ ಗಾಂಧಿಯವರ ಹೇಳಿಕೆಯನ್ನು ಉಲ್ಲೇಖ ಮಾಡಿರುವ ಅವರು, ನಮ್ಮ ದೇಶವು ಅಹಿಂಸೆ ಮತ್ತು ಸತ್ಯದ ತತ್ವಗಳ ಮೇಲೆ ನಿಂತಿದೆ. ಇದು ನಮ್ಮ ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸುವ ಸಂವಿಧಾನದ ಆಧಾರವಾಗಿದೆ. ಫೆಲೆಸ್ತೀನ್ ಜನರು ಸಂಕಟ ಅನುಭವಿಸುತ್ತಿದ್ದರೆ ಅದನ್ನು ಮೌನವಾಗಿ ನೋಡುವುದು ನಮ್ಮ ಸಂವಿಧಾನದ ನಿಲುವಿಗೆ ವಿರುದ್ಧವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.