‘ಭಗವಾನ್ ಜಗನ್ನಾಥನು ಮೋದಿಯ ಭಕ್ತ’ ಎಂಬ ಹೇಳಿಕೆ ನೀಡಿ ಯಡವಟ್ಟು ಮಾಡಿದ ಬಿಜೆಪಿ ಅಭ್ಯರ್ಥಿ; ಕಮಲ ಪಾಳಯಕ್ಕೆ ಕ್ಲಾಸ್ ತೆಗೆದುಕೊಂಡ ರಾಹುಲ್ ಗಾಂಧಿ

ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ ಅವರು, ‘ಜಗನ್ನಾಥ ಸ್ವಾಮಿಯು ನರೇಂದ್ರ ಮೋದಿಯವರ ಭಕ್ತ’ ಎಂದು ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ಈ ಹೇಳಿಕೆಯು ಬಿಜೆಪಿ ಪಕ್ಷಕ್ಕೆ ಮುಜುಗರ ತಂದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೋಟ್ಯಂತರ ಜನರ ಭಾವನೆಗಳನ್ನು ನೋಯಿಸುವ ಹಕ್ಕನ್ನು ಬಿಜೆಪಿಗೆ ಯಾರು ನೀಡಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಬಿಜೆಪಿಯು ಲಂಕಾದ ಪತನ ಹತ್ತಿರದಲ್ಲಿದೆ ಎಂದು ವಯನಾಡ್ ಸಂಸದ ಹೇಳಿದ್ದಾರೆ.
ತಮ್ಮ ‘ಎಕ್ಸ್’ ಖಾತೆಯ ಪೋಸ್ಟ್ ನಲ್ಲಿ ರಾಹುಲ್ ಗಾಂಧಿ, “ಪ್ರಧಾನಿ ತಮ್ಮನ್ನು ಚಕ್ರವರ್ತಿ ಎಂದು ಪರಿಗಣಿಸಲು ಪ್ರಾರಂಭಿಸಿದಾಗ ಮತ್ತು ಆಸ್ಥಾನಿಕರು ಅವರನ್ನು ದೇವರೆಂದು ಪರಿಗಣಿಸಲು ಪ್ರಾರಂಭಿಸಿದಾಗ ಲಂಕಾದ ಅವನತಿ ಹತ್ತಿರದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ. ಕೋಟ್ಯಂತರ ಜನರ ಭಾವನೆಗಳನ್ನು ನೋಯಿಸುವ ಹಕ್ಕನ್ನು ಬೆರಳೆಣಿಕೆಯಷ್ಟು ಬಿಜೆಪಿ ಜನರಿಗೆ ಯಾರು ನೀಡಿದರು? ಈ ಅಹಂ ಅವರ ವಿನಾಶಕ್ಕೆ ಕಾರಣವಾಗುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕ ಪಾತ್ರಾ ಈ ಕುರಿತು ವಿಷಾದ ವ್ಯಕ್ತಪಡಿಸಿದ್ದು, ತಮ್ಮ ಹೇಳಿಕೆ ತಪ್ಪಾಗಿ ಬಂದಿದೆ ಎಂದಿದ್ದಾರೆ. ಇದಕ್ಕೆ ಕ್ಷಮೆಯಾಚಿಸಲು ಭಗವಾನ್ ಜಗನ್ನಾಥನ ಹೆಸರಿನಲ್ಲಿ ತಪಸ್ಸು ಮಾಡುವುದಾಗಿ ಹೇಳಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐಗೆ ಈ ಕುರಿತು ಸ್ಪಷ್ಟನೆ ನೀಡಿರುವ ಪಾತ್ರಾ, ಪ್ರಧಾನಿ ಮೋದಿ ಅವರು ಮಹಾ ಪ್ರಭು ಜಗನ್ನಾಥ್ ಜಿ ಅವರ ನಿಷ್ಠಾವಂತ ಅನುಯಾಯಿ ಎಂದು ನಿರಂತರವಾಗಿ ಹೇಳುತ್ತಾ ಸುಮಾರು 15-16 ಚಾನೆಲ್ ಗಳೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು. ವಿವಿಧ ಚಾನೆಲ್‌ಗಳಲ್ಲಿ ಇದನ್ನು ಹೇಳಿರುವಾಗ ಉಂಟಾದ ಗೊಂದಲದಿಂದಾಗಿ ಕೊನೆಗೆ ನನ್ನ ಹೇಳಿಕೆಯು ‘ಭಗವಾನ್ ಜಗನ್ನಾಥನೇ ಮೋದಿಯವರ ಭಕ್ತ’ ಎಂದು ಆಗಿದೆ ಎಂದು ಉಲ್ಟಾ ಹೊಡೆದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth