ಧಾರಾಕಾರ ಮಳೆ: ಮದುವೆ, ಬೀಗರೂಟ ಕಾರ್ಯಕ್ರಮಗಳಿಗೆ ಮಳೆ ಅಡ್ಡಿ!

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಧ್ಯರಾತ್ರಿಯಿಂದಲೇ ಜೋರು ಮಳೆ ಆರಂಭವಾಗಿದ್ದು, ಎಡಬಿಡದೆ ಸುರಿಯುತ್ತಿದೆ. ಕುದುರೆಮುಖ, ಕಳಸ, ಶೃಂಗೇರಿ, ಕೆರೆಕಟ್ಟೆ, ಬಾಳೆಹೊನ್ನೂರು, ಜಯಪುರ, ಕೊಪ್ಪ, ಕೊಟ್ಟಿಗೆಹಾರ, ಬಣಕಲ್, ಮೂಡಿಗೆರೆ, ಆಲ್ದೂರು, ಎನ್.ಆರ್.ಪುರ, ಚಿಕ್ಕಮಗಳೂರು ನಗರ, ಮುಳ್ಳಯ್ಯನಗಿರಿ, ಬಾಬಾಬಡುನ್ಗಿರಿ, ಅತ್ತಿಗುಂಡಿ, ಕೆಮ್ಮಣ್ಣುಗುಂಡಿ, ಕಡೂರು, ತರೀಕೆರೆ, ಲಿಂಗದಹಳ್ಳಿ ಸುತ್ತಮುತ್ತ ಮಳೆ ಸುರಿಯುತ್ತಿದೆ.
ಮನೆಯಿಂದ ಹೊರಗೆ ಬರಲು ಸಾಧ್ಯವಾಗದೆ ಜನ ಪರದಾಡುತ್ತಿದ್ದಾರೆ. ಬಾಳೆಹೊನ್ನೂರು ಸುತ್ತಮುತ್ತ ಮಧ್ಯರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಆರತಕ್ಷತೆಗೆ ಅಡ್ಡಿ: ಹಲವೆಡೆ ಮದುವೆ ಆರತಕ್ಷತೆ(ಬೀಗರೂಟ) ಕಾರ್ಯಕ್ರಮಗಳಿಗೆ ಮಳೆ ಅಡ್ಡಿಯಾಗಿದೆ. ಭಾನುವಾರ ನಡೆದಿದ್ದ ಮದುವೆಗಳ ಮುಂದುವರಿದ ಆರತಕ್ಷತೆ ಕಾರ್ಯಕ್ರಮಗಳು ಬಹುತೇಕ ಮಂಗಳವಾರ ಆಯೋಜನೆಗೊಂಡಿದ್ದವು. ಹಾಕಿದ್ದ ಶಾಮಿಯಾನ, ಕುರ್ಚಿಗಳು ನೀರಿನಲ್ಲಿ ತೇಲುವಂತಾಗಿದೆ. ಕೊಟ್ಟಿಗೆಹಾರದ ತರುವೆ ಗ್ರಾಮದಲ್ಲಿ ಸಾಗರ-–ಚಂದನ ಅವರ ಆರತಕ್ಷತೆಗೆ ಹಾಕಿದ್ದ ಶಾಮಿಯಾನ ಸಂಪೂರ್ಣ ಹಾಳಾಗಿದ್ದು, ಬಣಕಲ್ ಝಡ್ ಟವರ್ ಬಳಿಯ ಸಮುದಾಯಭವನಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.
‘ನಿರಂತರ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಎಲ್ಲೆಡೆ ಕಟ್ಟೆಚ್ಚರ ವಹಿಸಬೇಕು. ಯಾವುದೇ ಅಧಿಕಾರಿಗಳು ಕೇಂದ್ರ ಸ್ಥಾನ ತೊರೆಯ ಬಾರದು. ಭೂಕುಸಿತ, ಪ್ರವಾಹ ರೀತಿಯ ಸಂದರ್ಭ ಬಂದರೆ ತ್ವರಿತವಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ರಕ್ಷಣಾ ತಂಡ ಸನ್ನದ್ಧವಾಗಿರಬೇಕು’ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD