ಗುಡುಗು, ಮಿಂಚು, ಗಾಳಿ ಮಳೆಗೆ ಅನಾಹುತ: 3 ದಿನಗಳಲ್ಲಿ ರಾಜ್ಯದಲ್ಲಿ ಪ್ರಾಣ ಕಳೆದುಕೊಂಡವರೆಷ್ಟು ಗೊತ್ತಾ? - Mahanayaka

ಗುಡುಗು, ಮಿಂಚು, ಗಾಳಿ ಮಳೆಗೆ ಅನಾಹುತ: 3 ದಿನಗಳಲ್ಲಿ ರಾಜ್ಯದಲ್ಲಿ ಪ್ರಾಣ ಕಳೆದುಕೊಂಡವರೆಷ್ಟು ಗೊತ್ತಾ?

rain
14/04/2024


Provided by

ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಬೇಗೆಯ ನಡುವೆ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಸುರಿದಿದ್ದು, ಕೆಲವೆಡೆಗಳಲ್ಲಿ ಅನಾಹುತವನ್ನೇ ಸೃಷ್ಟಿಸಿದೆ.

ಕಳೆದ ಮೂರು ದಿನಗಳ ಅಂತರದಲ್ಲಿ ರಾಜ್ಯದ ನಾನಾ ಕಡೆಗಳಲ್ಲಿ ಮಳೆಗೆ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಮೂವರು, ಚಿಕ್ಕಮಗಳೂರು, ರಾಯಚೂರು, ಯಾದಗಿರಿ ಹಾಗೂ ಬೀದರ್‌ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ.

ವಿಜಯಪುರ ಜಿಲ್ಲೆಯ ಗಡಿ ತಾಲ್ಲೂಕು ಇಂಡಿ ತಾಲ್ಲೂಕಿನಲ್ಲಿಯೇ ಭಾರೀ ಮಳೆಯಿಂದಾಗಿ ಮೂವರು  ಸಿಡಿಲು  ಬಡಿದು ಮಹಿಳೆ, ಬಾಲಕ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ. ಇಂಡಿ, ತಿಕೋಟಾ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿರುವ ವರದಿಯಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸಿಡಿಲ ಅಬ್ಬರ ಜೋರಾಗಿದ್ದು, ಸಿಡಿಲ ಬಡಿತಕ್ಕೆ ಲಾಳಸಂಗಿ ಗ್ರಾಮದ ರೈತ ಕಾಸಿಮ್ ಬಾಗವಾನ್ ಎಂಬುವವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲೂ ಹಲವು ಕಡೆ ಭಾರೀ ಸುರಿದಿದೆ. ಮಲೆನಾಡು ಹಾಗೂ ಬಯಲು ಭಾಗದ ಹಲವೆಡೆ ಮಳೆಯಾಗಿದೆ. ತರೀಕೆರೆ ಪಟ್ಟಣದಲ್ಲಿ ಉತ್ತಮ ಮಳೆಯಾಗಿ ರಸ್ತೆಗಳ ಮೇಲೆ ಸಾಕಷ್ಟು ನೀರು ಹರಿದು ಸಂಚಾರಕ್ಕೆ ಅಡಚಣೆಯಾಗಿತ್ತು. ಗುಡುಗು–ಸಿಡಿಲಿನಿಂದಾಗಿ ನರಸಿಂಹರಾಜಪುರ ತಾಲ್ಲೂಕಿನ ಅರಳಿಕೊಪ್ಪದಲ್ಲಿ ರೈತ ಶಂಕರ್​ ಜೀವ ಕಳೆದುಕೊಂಡಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದ್ದು ಶಂಕರ್‌ ಮೃತಪಟ್ಟಿರುವುದಾಗಿ ತಾಲ್ಲೂಕು ಆಡಳಿತ ಮಾಹಿತಿ ನೀಡಿದೆ.

ರಾಯಚೂರು ಜಿಲ್ಲೆ ಸಿಂಧನೂರ ತಾಲ್ಲೂಕಿನಲ್ಲೂ ಮಳೆಯಿಂದ ಭಾರೀ ಅನಾಹುತ ವರದಿಯಾಗಿದೆ. ತಾಲ್ಲೂಕಿನ ವೆಂಕಟೇಶ್ವರ ಕ್ಯಾಂಪ್‌ ನಲ್ಲಿ ಸಿಡಿಲು ಬಡಿದು ಕುರಿಗಾಹಿ ಅಮರಾಪುರದ ಶಾಂತಪ್ಪ ಮಾವಿನಮಡು ಜೀವ ಕಳೆದುಕೊಂಡಿದ್ದಾರೆ. ಕುರಿಗಳನ್ನು ಮೇಯಿಸಲು ತೆರಳಿದ್ದಾಗ ಸಿಡಿಲು ಅಪ್ಪಳಿಸಿದ್ದು, ಅವರ ಜೀವ ಹೋಗಿದೆ. ಸಮೀಪದ ಆಲ್ಕೋಡ್ ಗ್ರಾಮದಲ್ಲಿ ಸಿಡಿಲು ಬಡಿದು ಸತ್ಯಪ್ಪ ಕುರುಬರ ಎಂಬುವವರು ಎರಡು ಎತ್ತುಗಳು ಜೀವ ಕಳೆದುಕೊಂಡಿವೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆ ಸುರಿದೆ. ಇದೇ ವೇಳೆ ಸಿಡಿಲು ಬಡಿದು ಗ್ರಾಮದ ಮಂಜುನಾಥ್ ಎನ್ನುವ ಯುವಕ ಮೃತಪಟ್ಟಿರುವ ವರದಿಯಾಗಿದೆ.

ಬೀದರ್‌ ಜಿಲ್ಲೆಯಲ್ಲೂ ಭಾರೀ ಮಳೆ ಸುರಿದಿದೆ. ಔರಾದ್ ತಾಲ್ಲೂಕಿನಲ್ಲಿ ಶುಕ್ರವಾರ ತಡ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿ ರಾಯಪಳ್ಳಿ ಗ್ರಾಮದ ಶೈಲು ರಾಮಲು (36) ಬಿರುಗಾಳಿಗೆ ಮಾಳಿಗೆ ಮೇಲಿಂದ ಬಿದ್ದು ಮೃತಪಟ್ಟಿರುವುದಾಗಿ ವರದಿಯಾಗಿದೆ. ಸಿಡಿಲಿಗೆ ರಾಮಣ್ಣಕಾಳೆ ಎಂಬುವವರ ಎತ್ತುಮೃತಪಟ್ಟಿದೆ. ಇನ್ನೊಂದು ಎತ್ತು ಗಾಯಗೊಂಡಿದೆ. ಧುಪತಮಹಾಗಾಂವ್‌ ನಲ್ಲಿ ಘಟನೆ ನಡೆದಿದೆ. ಬೀದರ್‌ ಜಿಲ್ಲೆಯ ಬಸವಕಲ್ಯಾಣ, ಹುಮ್ನಾಬಾದ್‌, ಹುಲಸೂರ ತಾಲ್ಲೂಕುಗಳಲ್ಲೂ ಮಳೆಯಾಗಿದೆ. ಬೀದರ್‌ ನಗರದಲ್ಲೂ ಮಳೆಯಿಂದ ತಂಪಿನ ವಾತಾವರಣ ನಿರ್ಮಾಣವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ