ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ: ನಾಲ್ವರು ಶಂಕಿತರ ಬಂಧನ?: ಏನು ಹೇಳ್ತಿದೆ ಸರ್ಕಾರ? - Mahanayaka

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ: ನಾಲ್ವರು ಶಂಕಿತರ ಬಂಧನ?: ಏನು ಹೇಳ್ತಿದೆ ಸರ್ಕಾರ?

rameshwaram cafe
02/03/2024

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಶಂಕಿತ ವಸ್ತು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ವಶಕ್ಕೆ ಪಡೆದುಕೊಂಡಿರುವ ಶಂಕಿತರನ್ನು ಅಜ್ಞಾತ ಸ್ಥಳದಲ್ಲಿ  ಗುಪ್ತಚರ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಫೆಬ್ರವರಿ 1ರ ಮಧ್ಯಾಹ್ನ ಊಟದ ಸಮಯಕ್ಕೆ ಸರಿಯಾಗಿ ಬಾಂಬ್ ಬ್ಲಾಸ್ಟ್ ಆಗಿದೆ. ವಿವಿಧ ತನಿಖಾ ತಂಡಗಳು ರಾತ್ರಿಯೆಲ್ಲಾ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಸದ್ಯ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇನ್ನೂ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.  ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ. ಮಾಹಿತಿಗಳ ಪ್ರಕಾರ ಇಂದು ಮಧ್ಯಾಹ್ನ 1 ಗಂಟೆಗೆ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಈ ಘಟನೆ ನಡೆದಿರೋದು ಹಲವು ಅನುಮಾನಗಳಿಗೂ ಕಾರಣವಾಗಿದೆ. ಇನ್ನೊಂದೆಡೆ ಈ ಪ್ರಕರಣವನ್ನು ಮುಂದಿಟ್ಟು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

g parameshwar

ಇನ್ನೂ ಗೃಹ ಸಚಿವ ಪರಮೇಶ್ವರ್ ಅವರು ಈ ಘಟನೆಯ ಬಗ್ಗೆ ಮಾತನಾಡಿ, ಈಗ ಸ್ಯಾಂಪಲ್ ಕಲೆಕ್ಟ್ ಮಾಡಿಕೊಂಡಿದ್ದಾರೆ. ಪರಿಶೀಲನೆ ಆಗ್ತಿದೆ. ಒಂದು ವೇಳೆ ಕುರುಹುಗಳು ಸಿಕ್ಕಲ್ಲಿ ಮುಂದಿನ ತನಿಖೆ ಮಾಡಲಾಗುತ್ತದೆ ಎಂದಿದ್ದರು.

ಹೇಳಿಕೆಗಳು ಬಂದಿವೆ ಅಷ್ಟೇ ಅವರಿವರು ಹೇಳುತ್ತಿದ್ದಾರೆ. ಐಇಡಿ ಅಂತಾ ಹೇಳ್ತಿದ್ದಾರೆ,ಆದರೆ ಖಚಿತತೆ ಇಲ್ಲ. ಬ್ಯಾಗ್ ಇತ್ತು ಅಂತಿದ್ದಾರೆ. ನಿರ್ದಿಷ್ಟ ಮಾಹಿತಿ ಇನ್ನೂ ಬರಬೇಕಿದೆ ಎಂದು ನಿನ್ನೆ ಹೇಳಿಕೆ ನೀಡಿದ್ದರು.

ನಿರ್ದಿಷ್ಟ ಮಾಹಿತಿ ನಮ್ಮ ಇಲಾಖೆಯಿಂದ ಬರಬೇಕಿದೆ. ಇಂತಹ ವಿಚಾರದಲ್ಲಿ ಸ್ಪೆಕ್ಯುಲೆಟ್ ಮಾಡುವುದು ಸರಿಯಲ್ಲ. ನಮ್ಮ‌ ಇಲಾಖೆ ವರದಿ ಬರೋವರೆಗೂ ನಾನು ಏನು ಹೇಳಲು ಆಗಲ್ಲ  ಎಂದಿದ್ದರು.

c.m siddarmaya

ಇನ್ನೂ ಈ ಬಗ್ಗೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಪ್ರಾಥಮಿಕ ತನಿಖೆಯ ಪ್ರಕಾರ ಅದು ಸಣ್ಣ ಪ್ರಮಾಣದ ಸುಧಾರಿತ ಸ್ಪೋಟಕವಾಗಿತ್ತು ಎಂದು ತಿಳಿದುಬಂದಿದೆ, ಪೂರ್ಣ ವರದಿಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಕ್ಯಾಶಿಯರ್ ಬಳಿ ಟೋಕನ್ ಪಡೆದು ಅಲ್ಲಿ ತಿಂಡಿ ತಿಂದಿರುವ ವ್ಯಕ್ತಿ, ಬ್ಯಾಗ್ ಇಟ್ಟು ಬಂದಿದ್ದಾನೆ ಎಂಬ ಮಾಹಿತಿ ದೊರೆತಿದೆ ಎಂದರು. ಸುಮಾರು ಎಂಟು ಜನರಿಗೆ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಸಿ ಟಿವಿ ಕ್ಯಾಮರಾ ಪರೀಕ್ಷಿಸಲಾಗುತ್ತಿದೆ.    ಈ ಬಗ್ಗೆ ತನಿಖೆ ನಡೆಯುತ್ತಿದ್ದು  ಗೃಹ ಸಚಿವರಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ತಿಳಿಸಲಾಗಿದೆ. ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದರು.

ಇತ್ತೀಚಿನ ಸುದ್ದಿ