ಅತ್ಯಾಚಾರ ಆರೋಪಿಗೆ 21 ದಿನಗಳ ಪೆರೋಲ್: ಜೈಲಿನಿಂದ ಹೊರಬಂದ ರಾಮ್ ರಹೀಮ್
ಸಿರ್ಸಾದಲ್ಲಿರುವ ತನ್ನ ಆಶ್ರಮದಲ್ಲಿ ಇಬ್ಬರು ಮಹಿಳಾ ಶಿಷ್ಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಮಂಗಳವಾರ 21 ದಿನಗಳ ಪೆರೋಲ್ ನೀಡಲಾಗಿದೆ.
ಸ್ವಯಂಘೋಷಿತ ದೇವಮಾನವ ಮಂಗಳವಾರ ಬೆಳಿಗ್ಗೆ 6:30 ಕ್ಕೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಮೂಲಗಳ ಪ್ರಕಾರ, ಆತ ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಡೇರಾದ ಆಶ್ರಮದಲ್ಲಿ ತಂಗಲಿದ್ದಾರೆ.
ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಅನುಯಾಯಿಗಳನ್ನು ಹೊಂದಿರುವ 56 ವರ್ಷದ ರಾಮ್ ರಹೀಮ್, ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ಭೇಟಿಯಾಗಬೇಕೆಂಬ ಮನವಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಎಂಟು ಪ್ರತ್ಯೇಕ ಸಂದರ್ಭಗಳಲ್ಲಿ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದ ನಿಯಮಗಳ ಪ್ರಕಾರ, ಪೆರೋಲ್ ಎಂದರೆ ಶಿಕ್ಷೆಯ ನಿಗದಿತ ಭಾಗವನ್ನು ಪೂರ್ಣಗೊಳಿಸಿದ ನಂತರ ಕೈದಿಯನ್ನು ಅಲ್ಪಾವಧಿಗೆ ಬಿಡುಗಡೆ ಮಾಡುವುದು.
ಸಿಂಗ್ ಅವರಿಗೆ ತಾತ್ಕಾಲಿಕ ಬಿಡುಗಡೆಯ ಮಂಜೂರಾತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಿಲೇವಾರಿ ಮಾಡಿದ ಕೆಲವು ದಿನಗಳ ನಂತರ ಅವರ ಇತ್ತೀಚಿನ ಪೆರೋಲ್ ಬಿಡುಗಡೆಯಾಗಿದೆ.
ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (ಎಸ್ಜಿಪಿಸಿ) ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯವು, ಇದನ್ನು ಯಾವುದೇ “ನಿರಂಕುಶತೆ ಅಥವಾ ಪಕ್ಷಪಾತ” ಇಲ್ಲದೆ ಸಮರ್ಥ ಪ್ರಾಧಿಕಾರವು ಪರಿಗಣಿಸಬೇಕು ಎಂದು ಹೇಳಿದೆ.
ಇದಕ್ಕೂ ಮೊದಲು ಫೆಬ್ರವರಿ 29 ರಂದು, ಡೇರಾ ಸಚ್ಚಾ ಸೌದಾ ಮುಖ್ಯಸ್ಥನಿಗೆ ತನ್ನ ಅನುಮತಿಯಿಲ್ಲದೆ ಪೆರೋಲ್ ನೀಡದಂತೆ ಹೈಕೋರ್ಟ್ ಹರಿಯಾಣ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಜೂನ್‌ನಲ್ಲಿ, ಸಿಂಗ್ ಹೈಕೋರ್ಟ್ ಗೆ ಮೊರೆ ಹೋಗಿ, ತನಗೆ 21 ದಿನಗಳ ಪೆರೋಲ್ ನೀಡುವಂತೆ ನಿರ್ದೇಶನಗಳನ್ನು ಕೋರಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth