ಯುವತಿಯ ಮೇಲೆ ವೈದ್ಯನಿಂದ ಅತ್ಯಾಚಾರ: ದೆಹಲಿಯ ಏಮ್ಸ್ ನ ವೈದ್ಯ ಅರೆಸ್ಟ್

ಗಾಜಿಯಾಬಾದ್: 25 ವರ್ಷ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಏಮ್ಸ್ ನ ವೈದ್ಯನೊಬ್ಬನನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ಹರ್ಯಾಣದ ಮಹೇಂದ್ರ ಗಢ್ ನಿವಾಸಿ ಆರೋಪಿ ವೈದ್ಯ ಹಾಗೂ ನೊಂದ ಯುವತಿಗೆ ಕುಟುಂಬದವರು ನಿಶ್ಚಿತಾರ್ಥ ನಡೆಸಿದ್ದರು. ಯುವತಿಯ ಕುಟುಂಬಸ್ಥರು ವರನ ಕಡೆಯವರಿಗೆ 5 ಲಕ್ಷ ರೂಪಾಯಿ ವರದಕ್ಷಿಣೆ ನೀಡಿದ್ದರು. ಆದ್ರೆ ಇಷ್ಟು ಸಾಲದು, 25 ಲಕ್ಷ ರೂಪಾಯಿ ಮತ್ತು ಸ್ಕಾರ್ಫಿಯೋ ಕಾರು ನೀಡಬೇಕು ಎಂದು ವರ(ವೈದ್ಯ)ನ ಕುಟುಂಬಸ್ಥರು ಬೇಡಿಕೆಯಿಟ್ಟಿದ್ದರು. ಅಷ್ಟೊಂದು ಹಣ ನೀಡಲು ಸಾಧ್ಯವಾಗದ ಕಾರಣ ಮದುವೆಯನ್ನು ರದ್ದುಪಡಿಸಲಾಗಿತ್ತು.
ಈ ನಡುವೆ ಯುವತಿಯನ್ನು ಭೇಟಿಯಾದ ವೈದ್ಯ ಹಾಗೂ ಆತನ ಸೋದರ ಮಾವ, ಅಮಲು ಬೆರೆಸಿದ ಪಾನೀಯ ಕುಡಿಸಿದ್ದಾರೆ. ಬಳಿಕ ವೈದ್ಯ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದು, ಆತನ ಸೋದರ ಮಾವ ವಿಡಿಯೋ ಚಿತ್ರೀಕರಿಸಿದ್ದಾನೆ. ಈ ವಿಡಿಯೋವನ್ನು ಬಳಸಿಕೊಂಡು ಸಂತ್ರಸ್ಥ ಯುವತಿಯನ್ನು ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡಿ, ಲೈಂಗಿಕ ಕಿರುಕುಳ ಎಸಗಿರುವುದಾಗಿ ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ವೈದ್ಯನ ನಿರಂತರ ಅತ್ಯಾಚಾರದಿಂದಾಗಿ ಯುವತಿ ಗರ್ಭಿಣಿಯಾಗಿದ್ದಾಳೆ. ಈ ನಡುವೆ ಆಕೆಗೆ ಅನಾರೋಗ್ಯ ಕಾಣಿಸಿಕೊಂಡಾಗ ಜ್ವರದ ಮಾತ್ರೆ ಎಂದು ತಿಳಿಸಿ, ಗರ್ಭಪಾತಕ್ಕೆ ವೈದ್ಯ ಮಾತ್ರೆ ನೀಡಿದ್ದಾನೆ ಎಂದು ದೂರಿನಲ್ಲಿ ನೊಂದ ಯುವತಿ ತಿಳಿಸಿದ್ದಾಳೆ.
ಯುವತಿಯ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಸದ್ಯ ವೈದ್ಯನ ತಾಯಿ, ಸಹೋದರಿ, ಸೋದರ ಮಾವ ಸೇರಿದಂತೆ 11 ಮಂದಿಯ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದು, ದೆಹಲಿಯ ಪೊಲೀಸರ ಸಹಕಾರದದೊಂದಿಗೆ ಗಾಜಿಯಾಬಾದ್ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ.