RBI ಸ್ಥಾಪನೆಗೆ ಕಾರಣಕರ್ತರಾದ ಡಾ.ಅಂಬೇಡ್ಕರ್-ರಘೋತ್ತಮ ಹೊ.ಬ - Mahanayaka

RBI ಸ್ಥಾಪನೆಗೆ ಕಾರಣಕರ್ತರಾದ ಡಾ.ಅಂಬೇಡ್ಕರ್-ರಘೋತ್ತಮ ಹೊ.ಬ

raghottama hoba
01/04/2021

ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಆರ್ ಬಿ ಐ ಅಕ್ಷರಶಃ ಬಾಬಾಸಾಹೇಬ್ ಅಂಬೇಡ್ಕರರ ಮೆದುಳಿನ ಕೂಸು Brain child of Babasaheb. ಹೇಗೆಂದಿರಾ? ಇಲ್ಲಿ ನೋಡಿ. ರಿಸರ್ವ್ ಬ್ಯಾಂಕ್ ಅಂದರೆ ಅರ್ಥಶಾಸ್ತ್ರ ಅಥವಾ ಎಕನಾಮಿಕ್ಸ್ ತಾನೇ? RBI ನ ಅರ್ಥಶಾಸ್ತ್ರಕ್ಕೂ ಅಥವಾ ಅರ್ಥಶಾಸ್ತ್ರದ ಹಿನ್ನೆಲೆಯ RBIಗೂ ಅಂಬೇಡ್ಕರ್ ಗೂ ಎತ್ತಣದಿಂದೆತ್ತಣ ಸಂಬಂಧ ಎಂದು ಕೇಳುವುದಾದರೆ…

ಓರ್ವ ಸಾಮಾನ್ಯ ವಿದ್ಯಾರ್ಥಿಯಾಗಿ 1913ರಲ್ಲಿ ಅಂಬೇಡ್ಕರರು ಮುಂಬಯಿನ ಎಲ್ಫಿನ್ ಸ್ಟೋನ್ ಕಾಲೇಜ್ ನಲ್ಲಿ ಬಿ.ಎ ಪದವಿ ಪಡೆದರು. ವಿಷಯ: ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ. ಮುಂದುವರೆದು ಅರ್ಥಶಾಸ್ತ್ರವನ್ನು ಪ್ರಮುಖ ವಿಷಯವಾಗಿ ತೆಗೆದುಕೊಂಡು ಅದೇ ಎಲ್ಫಿನ್ ಸ್ಟೋನ್ ಕಾಲೇಜಿನಲ್ಲಿ ಎಂ.ಎ ಪದವಿ ಪಡೆದರು. ತದನಂತರ 1917ರಲ್ಲಿ ಅಂಬೇಡ್ಕರರು ಅಮೆರಿಕದ ನ್ಯೂಯಾರ್ಕ್ ನಗರದ ಕೊಲಂಬಿಯಾ ವಿವಿಯಿಂದ ಪಿಹೆಚ್‌ಡಿ ಪದವಿ ಪಡೆದರಾದರೂ ಅರ್ಥಶಾಸ್ತ್ರದ ಮೇಲಿನ ತಮ್ಮ ಅಭಿಮಾನವನ್ನು ಬಿಟ್ಟು ಕೊಡಲಿಲ್ಲ. ಈ ಹಿನ್ನೆಲೆಯಲ್ಲಿ ಅವರು 1921ರಲ್ಲಿ “ಬ್ರಿಟಿಷ್ ಭಾರತದಲ್ಲಿ ಸಾಮ್ರಾಜ್ಯಶಾಹಿ ಹಣಕಾಸಿನ ಪ್ರಾಂತೀಯ ವಿಕೇಂದ್ರಿಕರಣ” ಎಂಬ ಪ್ರೌಢ ಪ್ರಬಂಧ (thesis) ಮಂಡಿಸಿ ಅರ್ಥಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದರು. ಗಮನಿಸಿ, ಅಂಬೇಡ್ಕರರ ಪ್ರಬಂಧದ ಈ ವಿಷಯವನ್ನು ಆ ಮೂಲಕ ಭಾರತೀಯ ಹಣಕಾಸು ವ್ಯವಸ್ಥೆಗೆ ಒಂದು ರೂಪ ಕೊಡುವಲ್ಲಿ ಅವರ ಮೆದುಳಿನಲ್ಲಿ ಹುಟ್ಟಿದ ಆ ವಿಷಯವನ್ನು. ಅಂದರೆ “ಹಣಕಾಸಿನ ಪ್ರಾಂತೀಯ ವಿಕೇಂದ್ರಿಕರಣ”, ಅರ್ಥಾತ್ ಹಣಕಾಸಿನ ಚಲಾವಣೆಯನ್ನು ವಿಕೇಂದ್ರೀಕರಿಸುವುದು.

ಮುಂದುವರೆದು ಇದೇ ವಿಷಯದ ಸಂಶೋಧನೆ ಮುಂದುವರೆಸಿದ ಅಂಬೇಡ್ಕರರು 1923ರಲ್ಲಿ ” ರೂಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ. ಭಾರತೀಯ ಕರೆನ್ಸಿ ಮತ್ತು ಬ್ಯಾಂಕಿಂಗ್ ನ ಇತಿಹಾಸ ” ಎಂಬ ಮತ್ತೊಂದು ಪ್ರೌಢ ಪ್ರಬಂಧ ಮಂಡಿಸಿದರು. ಅಂದಹಾಗೆ ಇಂಗ್ಲೆಂಡಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಬೇಡ್ಕರರ ಈ ಅದ್ಭುತ ಕೃತಿಗೆ “ಡಾಕ್ಟರ್ ಆಫ್ ಸೈನ್ಸ್ (D.Sc)” ಪದವಿ ಇತ್ತು ಗೌರವಿಸಿತು ಮತ್ತು ಅಂಬೇಡ್ಕರರ ಈ D.Sc ಪದವಿ ಪುರಸ್ಕೃತ ಈ ಕೃತಿಯನ್ನು ಲಂಡನ್ ನ “ಪಿ.ಎಸ್.ಕಿಂಗ್ ಅಂಡ್ ಕಂಪನಿ” ಪ್ರಕಾಶನ ಸಂಸ್ಥೆಯು “Problem of Rupee” ಎಂಬ ಶೀರ್ಷಿಕೆಯಲ್ಲಿ ಪುಸ್ತಕವಾಗಿ ಅದೇ ವರ್ಷ ಅಂದರೆ 1923 ರಲ್ಲಿ ಪ್ರಕಟಿಸಿತು.

ಹೀಗೆ ಅಂಬೇಡ್ಕರರ ಅರ್ಥಶಾಸ್ತ್ರದ ಚಿಂತನೆ, ಭಾರತದ ಹಣಕಾಸು ವ್ಯವಸ್ಥೆಯ ಸಮಸ್ಯೆ ಕುರಿತ ಈ ಸಂಶೋಧನೆ ಲಂಡನ್ ನಲ್ಲೇ ಬ್ರಿಟಿಷ್ ಆಡಳಿತಗಾರರ ಕೈಸೇರುತ್ತಲೇ ಅಂಬೇಡ್ಕರರು “ರೂಪಾಯಿಯ ಸಮಸ್ಯೆ , ಅದರ ಮೂಲ ಮತ್ತು ಪರಿಹಾರ” ಎಂದು ಹೇಳಿದ್ದರಲ್ಲ, ಅದರ ಪರಿಹಾರಾರ್ಥವಾಗಿ ಬ್ರಿಟಿಷ್ ಸರ್ಕಾರ 1926ರಲ್ಲಿ ಹಿಲ್ಟನ್ ಯಂಗ್ ರವರ ನೇತೃತ್ವದಲ್ಲಿ Royal Commission on Indian Currency and Finance ಎಂಬ ಆಯೋಗ ನೇಮಿಸಿತು. ಈ ವಿಷಯ ದಾಖಲಿಸುತ್ತ ಅಂಬೇಡ್ಕರ್ ವಾದಿ ಲೇಖಕ ಕ್ರಿಸ್ಟೋಫರ್ ಜೆಫರ್ಲೆಟ್

“ಹಾಗೆ ಭೇಟಿಕೊಟ್ಟ ಆಯೋಗದ ಪ್ರತಿಯೊಬ್ಬ ಸದಸ್ಯನ ಕೈಯಲ್ಲೂ ಕೂಡ ಆಕರ ಗ್ರಂಥವಾಗಿ (reference book) ಅಂಬೇಡ್ಕರರು ಪ್ರಕಟಿಸಿದ್ದ “ಪ್ರಾಬ್ಲಂ ಆಫ್ ರುಪೀ” ಎಂಬ ಆ ಕೃತಿ ಇತ್ತು” ಎನ್ನುತ್ತಾರೆ.

ಈ ಹಿನ್ನೆಲೆಯಲ್ಲಿ ಆ ಆಯೋಗ ಅಂಬೇಡ್ಕರರು ಎತ್ತಿದ್ದ ಸಮಸ್ಯೆಯ ಈ ಎಳೆ ಹಿಡಿದು ಭಾರತದಲ್ಲಿ ದೇಶದಾದ್ಯಂತ ಸಂಚರಿಸಿ ಅನೇಕರಿಂದ ಮಾಹಿತಿ ಮತ್ತು ಅಭಿಪ್ರಾಯ ಸಂಗ್ರಹಿಸಿತು. ಸ್ವತಃ ಬಾಬಾಸಾಹೇಬ್ ಅಂಬೇಡ್ಕರರು ಕೂಡ ಆ ಆಯೋಗದ ಮುಂದೆ ಖುದ್ದು ಹಾಜರಾಗಿ ಸಾಕ್ಷಿ ನುಡಿದರು, ತಮ್ಮ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಮಂಡಿಸಿದರು. (ಅಂಬೇಡ್ಕರರ ಆ ಲಿಖಿತ ಸಾಕ್ಷಿ ಕೂಡ ಭಾರತ ಸರ್ಕಾರ ಪ್ರಕಟಿಸಿರುವ ಅಂಬೇಡ್ಕರರ ಬರಹಗಳು ಭಾಷಣಗಳು ಸಂಪುಟಗಳ ಸರಣಿಯಲ್ಲಿದೆ.)

ಹಾಗಿದ್ದರೆ ಕರೆನ್ಸಿ ಕುರಿತು ಅಂಬೇಡ್ಕರ್ ಏನು ಪ್ರತಿಪಾದಿಸಿದರು? ಈ ಬಗ್ಗೆ ಹೇಳುವ ಅವರ “ಕರೆನ್ಸಿ ನಿಯಂತ್ರಣ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವುದು ಅಪಾಯಕಾರಿ. ಯಾಕೆಂದರೆ ಕರೆನ್ಸಿ ಪೂರೈಕೆಯನ್ನು ವಾಣಿಜ್ಯದ ಅಗತ್ಯಕ್ಕೆ ತಕ್ಕಂತೆ

ಹೆಚ್ಚಿಸಬೇಕು ಅಥವಾ ಕಡಿಮೆಗೊಳಿಸಬೇಕು. ಆದರೆ ಆತಂಕದ ವಿಷಯವೆಂದರೆ ಸರ್ಕಾರ ಕೆಲವೊಮ್ಮೆ ಯಾವುದೇ ಪಶ್ಚಾತ್ತಾಪ ಪಡದೆ ಅನಿಯಂತ್ರಿತವಾಗಿ ಕರೆನ್ಸಿ ಉತ್ಪಾದಿಸಬಹುದು. ಇದು ಇಡೀ ಕರೆನ್ಸಿ ವ್ಯವಸ್ಥೆಯನ್ನೇ ನಾಶಗೊಳಿಸಲಿದೆ. ಈ ನಿಟ್ಟಿನಲ್ಲಿ ಇಂತಹ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ದಾಖಲಾಗಿವೆ” ಆದ್ದರಿಂದ ಹಿಲ್ಟನ್ ಯಂಗ್ ಆಯೋಗದ ಮುಂದೆ ಅಂಬೇಡ್ಕರರು ಹೇಳುವುದು ಕರೆನ್ಸಿ ಪೂರೈಕೆ ಮತ್ತು ನಿಯಂತ್ರಣವನ್ನು ಸರ್ಕಾರಕ್ಕೆ ವಹಿಸುವ ಬದಲು ಕೇಂದ್ರೀಯ ಬ್ಯಾಂಕ್ ಒಂದನ್ನು ಸ್ಥಾಪಿಸಿ ಅದಕ್ಕೆ ವಹಿಸಬೇಕು ಎಂದು.

ಅಂದಹಾಗೆ ಇಂತಹ ಸಾಕ್ಷಿ ಮತ್ತು ಅಭಿಪ್ರಾಯಗಳ ಆಧಾರದ ಮೇಲೆ ಹಿಲ್ಟನ್ ಯಂಗ್ ಆಯೋಗ ತನ್ನ ಅಂತಿಮ ವರದಿ ಸಲ್ಲಿಸುತ್ತಲೇ ಕೇಂದ್ರೀಯ ಅಸೆಂಬ್ಲಿಯು 1934ರಲ್ಲಿ RBI ಕಾಯಿದೆಯನ್ನು ಅಂಗೀಕರಿಸಿತು. ಪರಿಣಾಮ 1935 ಏಪ್ರಿಲ್ 1 ರಂದು RBI ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಯಿತು. ಈ ಕುರಿತು ಮಾಹಿತಿ ದಾಖಲಿಸುವ ವಿಕಿಪೀಡಿಯ RBI was conceptualized as per the guidelines, working style and outlook presented by Bhimrao Ramji Ambedkar ಎನ್ನುತ್ತದೆ.

ಪ್ರಶ್ನೆ ಎಂದರೆ ಈ ಮಾಹಿತಿ ಭಾರತೀಯರಿಗೆ ಎಷ್ಟು ತಿಳಿದಿದೆ? ಎಂಬುದು. ಏಕೆಂದರೆ ಜನಸಾಮಾನ್ಯರು ಸುಮ್ಮನೆ ನೋಟು ಎಣಿಸಿಕೊಳ್ಳುತ್ತಾರೆ, ಅಲ್ಲಿ ಕಾಣುವ Reserve Bank of India ಎಂಬ ಮುದ್ರಣ ಕಣ್ತುಂಬಿಕೊಳ್ಳುತ್ತಾರೆ. ಆದರೆ ಅದರ ಸ್ಥಾಪನೆ ಹಿಂದಿರುವ ಚಿಂತನೆ? ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಓರ್ವ ವಿದ್ಯಾರ್ಥಿ ತನ್ನ ಬಿಎ ಪದವಿಯಿಂದ ಹಿಡಿದು ಡಿಎಸ್ಸಿ ಪದವಿವರೆಗೆ ಅದನ್ನು ಪ್ರತಿಪಾದಿಸಿದ ರೀತಿ? ಪ್ರತಿಪಾದಿಸಿ ಸ್ವತಃ ಅದರ ಸ್ಥಾಪನೆಗೆ ಸಾಕ್ಷಿ ನುಡಿದ ರೀತಿ? ನಿಜ, ಬಾಬಾಸಾಹೇಬ್ ಅಂಬೇಡ್ಕರರೇನು ತನ್ನನ್ನು RBI ಸ್ಥಾಪಕ ಎಂದು ಹೇಳಲಿ ಅಥವಾ ಜನಸಾಮಾನ್ಯರು ಹಾಗೆ ಗುರುತಿಸಲಿ ಎಂದು ಈ ಸಾಧನೆ ಮಾಡಿರಲಿಕ್ಕಿಲ್ಲ. ಅರ್ಥಶಾಸ್ತ್ರದ ಓರ್ವ ಸಂಶೋಧನಾರ್ಥಿಯಾಗಿ ತಮ್ಮ ಸಂಶೋಧನೆ ಮೂಲಕ ಆ ಕಾಲದಲ್ಲಿ ರೂಪಾಯಿ ಎದುರಿಸುತ್ತಿದ್ದ ಸಮಸ್ಯೆ ಮತ್ತು ಅದಕ್ಕೆ ಪರಿಹಾರವನ್ನು ಅವರು ಕಂಡುಹಿಡಿದರು. ಈ ನಿಟ್ಟಿನಲ್ಲಿ ಅಂಬೇಡ್ಕರರ ಅಂತಹ RBI ಸ್ಥಾಪನೆಯ ಸಾಧನೆಯನ್ನು ನಾವು ಅಂದರೆ ಜನಸಾಮಾನ್ಯರು ಗುರುತಿಸಬೇಕು, ಇತಿಹಾಸದಲ್ಲಿ ದಾಖಲಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ನಾವು ಬಳಸುವ ಹಣಕ್ಕೆ ಮೌಲ್ಯ ಇರುವುದಿಲ್ಲ. ಏಕೆಂದರೆ ಅಂಬೇಡ್ಕರರು ಅದಕ್ಕೊಂದು ರೂಪ ಕೊಟ್ಟು ಇಂದು ನಮ್ಮ ಕೈಗೆ ಅದು ಸಿಗುವಂತೆ ಮಾಡದಿದ್ದರೆ ಅದು ಅದ್ಯಾವ ಶ್ರೀಮಂತನ ತಿಜೋರಿ ಸೇರುತ್ತಿತ್ತೋ! ಹಣ ಎಂದರೆ ಹೆಣವಿರಲಿ ನಾವೇ ಬಾಯಿ ಬಾಯಿ ಬಿಡಬೇಕಿತ್ತಷ್ಟೆ!!

ಇದನ್ನೂ ಓದಿ:

ಡಾ.ಅಂಬೇಡ್ಕರರ ಬುದ್ಧ ಪಯಣ | ರಘೋತ್ತಮ ಹೊ.ಬ

ಇತ್ತೀಚಿನ ಸುದ್ದಿ