ಕರಿಮಣಿ ಮಾಲಿಕ ನೀನಲ್ಲ ಎಂದು ಪತ್ನಿಯಿಂದ ರೀಲ್ಸ್: ಪತಿ ಸಾವಿಗೆ ಶರಣು!

ಚಾಮರಾಜನಗರ : ಕರಿಮಣಿ ಮಾಲಿಕ ನೀನಲ್ಲ ಎಂಬ ಹಾಡು ಸಕ್ಕತ್ ವೈರಲ್ ಆಗ್ತಿದೆ, ಇದೇ ಸಂದರ್ಭದಲ್ಲಿ ಈ ಹಾಡಿಗೆ ಪತ್ನಿ ರೀಲ್ಸ್ ಮಾಡಿದ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಪತಿಯೋರ್ವ ಸಾವಿಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಪಿ ಜಿ ಪಾಳ್ಯ ಗ್ರಾಮದ ಕುಮಾರ್ (33) ಸಾವಿಗೆ ಶರಣಾದವರಾಗಿದ್ದಾರೆ. ಕಳೆದ ಫೆಬ್ರವರಿ 10ರಂದು ಪತ್ನಿ ರೂಪಾ ಹಾಗೂ ಕುಮಾರ್ , ರೂಪಾಳ ತವರು ಮನೆಯಾದ ಗುಂಡಾಪುರಕ್ಕೆ ತೆರಳಿದ್ದರು. ಅಲ್ಲಿ ಒಂದು ದಿನ ಇದ್ದ ಕುಮಾರ್ ಬಳಿಕ ಪಿ.ಜಿ.ಪಾಳ್ಯಕ್ಕೆ ವಾಪಸ್ ಆಗಿದ್ದರು. ರೂಪಾ ತವರು ಮನೆಯಲ್ಲೇ ಉಳಿದುಕೊಂಡಿದ್ದರು.
ಅತ್ತ ರೂಪಾ ಊರಿನಲ್ಲಿ ಇದ್ದ ವೇಳೆ ಸೋದರ ಮಾವ ಹಾಗೂ ಸಹೋದರಿ ಜೊತೆ ಸೇರಿ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ.
ಈ ರೀಲ್ಸ್ ಕಂಡ ಕುಮಾರ್ ನ ಸ್ನೇಹಿತರು ಆತನ ಗಮನಕ್ಕೆ ತಂದಿದ್ದು, ಈ ವಿಚಾರ ದಂಪತಿಯ ನಡುವೆ ಜಗಳಕ್ಕೆ ಕಾರಣವಾಗಿದೆ. ಜಗಳದಿಂದ ಮನನೊಂದು ಕುಮಾರ್ ಮನೆಯ ಮುಂಭಾಗದ ಮರಕ್ಕೆ ನೇಣು ಬಿಗಿದು ಬುಧವಾರ ರಾತ್ರಿ ಸಾವಿಗೆ ಶರಣಾಗಿದ್ದಾರೆ.
ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಹನೂರು ಆಸ್ಪತ್ರೆಗೆ ಶವವನ್ನು ರವಾನೆ ಮಾಡಲಾಗಿದೆ.
ಮೃತ ಕುಮಾರ್ ಅವರ ಸೋದರ ಮಹಾದೇವಸ್ವಾಮಿ ಅವರು, ಕುಮಾರ್ ಪತ್ನಿ ರೂಪಾ, ರೂಪಾಳ ಸೋದರ ಮಾವ ಗೋವಿಂದ ವಿರುದ್ಧ ಘಟನೆ ಸಂಬಂಧ ದೂರು ನೀಡಿದ್ದಾರೆ.