ಪಶ್ಚಿಮ ಬಂಗಾಳದಲ್ಲಿ 20,000 ಕೋಟಿ ಹೂಡಿಕೆ ಮಾಡಿದ ಅಂಬಾನಿ: ಹೊಸ ಹೂಡಿಕೆ ಹಿಂದಿನ ಉದ್ದೇಶ ಏನು..?

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಎಂಡಿ ಮುಖೇಶ್ ಅಂಬಾನಿ ಅವರು ಪಶ್ಚಿಮ ಬಂಗಾಳದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 20,000 ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆಯನ್ನು ಮಾಡುವುದಾಗಿ ಘೋಷಿಸಿದ್ದಾರೆ.
ಡಿಜಿಟಲ್ ಲೈಫ್ ಪರಿಹಾರಗಳು, ಚಿಲ್ಲರೆ ವ್ಯಾಪಾರ ಮತ್ತು ಜೈವಿಕ ಇಂಧನ ಕ್ಷೇತ್ರಗಳಲ್ಲಿ ಹೊಸ ಹೂಡಿಕೆಯಾಗಲಿದೆ ಎಂದು ಅಂಬಾನಿ ತಿಳಿಸಿದ್ದಾರೆ.
“ರಿಲಯನ್ಸ್‌ಗೆ ಬಂಗಾಳವು ಅತಿದೊಡ್ಡ ಹೂಡಿಕೆಯ ತಾಣವಾಗಿದೆ. ಡಿಜಿಟಲ್ ಲೈಫ್ ಪರಿಹಾರಗಳನ್ನು ಹೆಚ್ಚಿಸಲು, ರಿಲಯನ್ಸ್ ರೀಟೇಲ್ ಹೆಜ್ಜೆಗುರುತುಗಳನ್ನು ಹೆಚ್ಚಿಸಲು ಮತ್ತು ಜೈವಿಕ ಶಕ್ತಿಯ ಮೇಲೆ ಮುಂದಿನ ಮೂರು ವರ್ಷಗಳಲ್ಲಿ ಬಂಗಾಳದಲ್ಲಿ 20,000 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಹೂಡಿಕೆ ಮಾಡಲು ನಾವು ಯೋಜಿಸಿದ್ದೇವೆ” ಎಂದು ಅವರು ಹೇಳಿದರು.
ಬೆಂಗಾಲ್ ಗ್ಲೋಬಲ್ ಬಿಸಿನೆಸ್ ಶೃಂಗಸಭೆಯಲ್ಲಿ (ಬಿಜಿಬಿಎಸ್) ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸುಮಾರು 45,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎಂದು ತಿಳಿಸಿದ್ದಾರೆ.
ನೂರಾರು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳು ಹಾಗೂ ಸುಮಾರು 5.5 ಲಕ್ಷ ಕಿರಾಣಿ ಅಂಗಡಿಯವರು ನಮ್ಮ ರೀಟೇಲ್ ವ್ಯಾಪಾರದೊಂದಿಗೆ ಕೈ ಜೋಡಿಸಿದ್ದಾರೆ ಎಂದು ಅವರು ತಿಳಿಸಿದರು.
ರಿಲಯನ್ಸ್ ರೀಟೇಲ್ ಮುಂದಿನ ಎರಡು ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಸುಮಾರು 200 ಹೊಸ ಮಳಿಗೆಗಳನ್ನು ತೆರೆಯಲು ಯೋಜಿಸುತ್ತಿದೆ ಎಂದು ತಿಳಿಸಿದ ಅವರು, ಸದ್ಯ ಬಂಗಾಳದಲ್ಲಿ ಸುಮಾರು 1,000 ರಿಲಯನ್ಸ್ ಸ್ಟೋರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅದು 1200ಕ್ಕೆ ವಿಸ್ತರಿಸುತ್ತದೆ ಎಂದಿದ್ದಾರೆ.