ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ (88) ಇನ್ನಿಲ್ಲ: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಮೊಮ್ಮಗಳು
ಬೆಂಗಳೂರು/ನವದೆಹಲಿ: ಭಾರತೀಯ ಚಿತ್ರರಂಗದ ದಂತಕಥೆ, ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ (88) ಅವರು ಶನಿವಾರ ವಿಧಿವಶರಾಗಿದ್ದಾರೆ. ಅವರ ಮೊಮ್ಮಗಳು ಅಪ್ಸರಾ ವೈದ್ಯುಲ ಅವರು ಇನ್’ಸ್ಟಾಗ್ರಾಮ್’ನಲ್ಲಿ ಈ ದುಃಖದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಜಾನಕಿ ಅವರು ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಶಾಂತಿಯುತವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೊಮ್ಮಗಳ ಭಾವನಾತ್ಮಕ ಪೋಸ್ಟ್:
ಕುಟುಂಬದ ಪರವಾಗಿ ಪೋಸ್ಟ್ ಹಂಚಿಕೊಂಡಿರುವ ಅಪ್ಸರಾ, “ನನ್ನ ಪ್ರೀತಿಯ ಅಜ್ಜಿ ಮತ್ತು ದಂತಕಥೆ ಗಾಯಕಿ ಶ್ರೀಮತಿ ಎಸ್. ಜಾನಕಿ ಅವರು ನಮ್ಮನ್ನು ಅಗಲಿದ್ದಾರೆ ಎಂಬುದನ್ನು ಅತ್ಯಂತ ದುಃಖದಿಂದ ಹಂಚಿಕೊಳ್ಳುತ್ತಿದ್ದೇನೆ. ಕುಟುಂಬದ ಪ್ರೀತಿಯ ನಡುವೆ ಅವರು ನೆಮ್ಮದಿಯಿಂದ ಇಹಲೋಕ ತ್ಯಜಿಸಿದರು. ನಮ್ಮ ಹೃದಯಗಳು ಭಾರವಾಗಿದ್ದರೂ, ಅವರು ನಡೆಸಿದ ಅಸಾಧಾರಣ ಜೀವನ ಮತ್ತು ತಮ್ಮ ಮಧುರ ಸಂಗೀತದ ಮೂಲಕ ಕೋಟ್ಯಂತರ ಜನರಿಗೆ ನೀಡಿದ ಅಪಾರ ಸಂತೋಷಕ್ಕಾಗಿ ನಾವು ಕೃತಜ್ಞರಾಗಿದ್ದೇವೆ” ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು, “ವಿಶ್ವಕ್ಕೆ ಅವರು ಅಸಂಖ್ಯಾತ ನೆನಪುಗಳನ್ನು ನೀಡಿದ ಅದ್ಭುತ ಧ್ವನಿಯಾಗಿದ್ದರು. ಆದರೆ ನಮಗೆ ಅವರು ಪ್ರೀತಿಯ ಅಜ್ಜಿಯಾಗಿದ್ದರು. ಅವರ ಉದಾರತೆ, ನಮ್ರತೆ, ದಯೆ ಮತ್ತು ಕೃಪೆ ನಮ್ಮೊಂದಿಗೆ ಎಂದಿಗೂ ಜೀವಂತವಾಗಿರುತ್ತದೆ. ಈ ಕಷ್ಟದ ಸಮಯದಲ್ಲಿ ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸಬೇಕಾಗಿ ವಿನಂತಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಆರು ದಶಕಗಳ ಸಂಗೀತ ಪಯಣ:
‘ದಕ್ಷಿಣ ಭಾರತದ ಕೋಗಿಲೆ’ ಎಂದೇ ಖ್ಯಾತರಾಗಿದ್ದ ಎಸ್. ಜಾನಕಿ ಅವರು ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ 20,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ಗಾಯಕಿಯರಲ್ಲಿ ಒಬ್ಬರೆನಿಸಿಕೊಂಡಿದ್ದರು. ಅದರಲ್ಲೂ ಕನ್ನಡ ಚಿತ್ರರಂಗ ಹಾಗೂ ಕನ್ನಡಿಗರೊಂದಿಗೆ ಅವರು ಅತ್ಯಂತ ಅವಿನಾಭಾವ ಸಂಬಂಧ ಹೊಂದಿದ್ದರು.
ಅವರ ಅತ್ಯುತ್ತಮ ಗಾಯನಕ್ಕಾಗಿ ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಹಾಗೂ ವಿವಿಧ ರಾಜ್ಯ ಸರ್ಕಾರಗಳ ಪ್ರಶಸ್ತಿಗಳು ಒಲಿದು ಬಂದಿದ್ದವು. ಇಳಯರಾಜಾ, ಎಂ.ಎಸ್. ವಿಶ್ವನಾಥನ್, ಎ.ಆರ್. ರೆಹಮಾನ್ ಸೇರಿದಂತೆ ಚಿತ್ರರಂಗದ ಘಟಾನುಘಟಿ ಸಂಗೀತ ನಿರ್ದೇಶಕರೊಂದಿಗೆ ಅವರು ಕೆಲಸ ಮಾಡಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಕೋಟ್ಯಂತರ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























