ತೆರೆಗೆ ಬರಲಿದೆ 'ರಿಯಾ' ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ - Mahanayaka
11:34 AM Wednesday 20 - August 2025

ತೆರೆಗೆ ಬರಲಿದೆ ‘ರಿಯಾ’ ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ

ria
15/09/2022


Provided by

ಕನ್ನಡ ಚಿತ್ರರಂಗದಲ್ಲಿ ಕವಿತಾ ಲಂಕೇಶ್ , ಸುಮನಾ ಕಿತ್ತೂರು , ಪ್ರಿಯಾಹಾಸನ್ , ರೂಪಾ ಅಯ್ಯರ್ , ರಿಶಿಕಾ ಶರ್ಮಾ ಹೀಗೆ ಕೆಲವೇ ಕೆಲವು ಮಹಿಳಾ ನಿರ್ದೇಶಕಿಯರಿದ್ದಾರೆ. ಈಗ ಅವರ ಸಾಲಿಗೆ ಮತ್ತೊಬ್ಬ ಮಹಿಳಾ ನಿರ್ದೇಶಕಿ ಸೇರ್ಪಡೆಯಾಗಿದ್ದಾರೆ. ಅವರೇ ವಿಜಯಾ ನರೇಶ್‌.

ಆಂಧ್ರಪ್ರದೇಶ ಮೂಲದವರಾದ ಇವರು ಮೂಲತಃ ಶಿಕ್ಷಕಿಯಾಗಿದ್ದವರು. ‌ಉತ್ತಮವಾದ ಕಥೆ ಸಿಕ್ಕರೆ ಚಿತ್ರವೊಂದನ್ನು ನಿರ್ದೇಶಿಸಬೇಕೆಂದು ಮೊದಲಿಂದಲೂ ಆಸೆ ಇಟ್ಟುಕೊಂಡಿದ್ದ ಇವರೀಗ ಹಾರರ್ ಕಂಟೆಂಟ್ ಇಟ್ಟುಕೊಂಡು ‘ರಿಯಾ’ ಎನ್ನುವ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ.

ಇದೊಂದು ಹಾರರ್ , ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಜೊತೆಗೆ ಸೆಂಟಿಮೆಂಟ್ ಕಥಾಹಂದರವುಳ್ಳ ಚಿತ್ರವಾಗಿದ್ದು , ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ತೆಲುಗು ಮಾತೃಭಾಷೆಯಾಗಿದ್ದರೂ ಸಹ ತಮ್ಮ ಮೊದಲ ಚಿತ್ರವನ್ನು ಕನ್ನಡದಲ್ಲಿಯೇ ನಿರ್ದೇಶಿಸಬೇಕೆಂಬುದು ವಿಜಯಾ ನರೇಶ್ ಅವರ ಆಸೆ. ಹೀಗಾಗಿ ತಾವೇ ಕಥೆ , ಚಿತ್ರಕಥೆ ಬರೆದು ರಿಯಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಜಯಾ ಅವರ ಪತಿ ಕನಿಗೊಂಡ ನರೇಶ್ ಅವರು ರಿಯಾ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಸಾಥ್ ನೀಡಿದ್ದಾರೆ. ರಿಯಾ ಒಂದು ಹಾರರ್ ಕಥಾಹಂದರ ಒಳಗೊಂಡ ಚಿತ್ರವಾಗಿದ್ದು , ಕಾರ್ತಿಕ್ ವರ್ಣೆಕರ್‌ ಹಾಗೂ ಸಾವಿತ್ರಿ, ಚಿತ್ರದ ನಾಯಕ , ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಕೇವಲ ಹದಿನಾಲ್ಕು ಪಾತ್ರಗಳ ಸುತ್ತ ಒಂದೇ ಮನೆಯಲ್ಲಿ ಈ ಚಿತ್ರದ ಬಹುತೇಕ ಕಥೆ ನಡೆಯುತ್ತದೆ. ಚಿತ್ರಕ್ಕಾಗಿ ಆಡಿಷನ್ ನಡೆಸಿ , ಅದರಲ್ಲಿ ಪ್ರತಿಭಾವಂತ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಚಿತ್ರಕ್ಕೆ ಬಳಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರು ಕನ್ನಡದವರೇ ಆಗಿರುವುದು ಚಿತ್ರದ ವಿಶೇಷ. ದುಬಾರೆ ಅರಣ್ಯದ ಬಳಿಯೇ ಈ ಚಿತ್ರಕ್ಕೆ ಹೆಚ್ಚಿನ ಭಾಗದ ಚಿತ್ರೀಕರಣವನ್ನು ನಡೆಸಲಾಗಿದೆ. ಈ ಚಿತ್ರದಲ್ಲಿ ರಿಯಾ ಎನ್ನುವ ಪಾತ್ರವನ್ನು ಮಂಗಳೂರಿನ ಬಾಲಕಿ ಅನನ್ಯ ವಿ.ಎಸ್. ನಿರ್ವಹಿಸಿದ್ದಾರೆ.

ಅಲ್ಲದೆ ಚಿತ್ರದ ನಾಯಕ ಕಾರ್ತಿಕ್ ವರ್ಣೇಕರ್ ಕಾರ್ಯನಿರ್ವಹಿಸಿದ್ದಾರೆ. ಇನ್ನು ಈ ಚಿತ್ರದ ಎರಡು ಹಾಡುಗಳಿಗೆ ಬಿ. ಆರ್‌. ಹೇಮಂತ್ ಕುಮಾರ್ ಸಂಗೀತ ನೀಡಿದ್ದಾರೆ. ಎ.ಟಿ.ರವೀಶ ಹಿನ್ನೆಲೆಸಂಗೀತ ನೀಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್‌ ಹಾಗೂ ಹಾಡುಗಳು ಚಿತ್ರದ ಬಗ್ಗೆ ಸಾಕಷ್ಟು ಕಾತುರ ಹಾಗೂ ಕುತೂಹಲಗಳನ್ನು ಹುಟ್ಟು ಹಾಕಿವೆ. ಸುರೇಶ್ ಅಚ್ಚು ಅವರ ಛಾಯಾಗ್ರಹಣ ಹಾಗೂ ವೇಣುಗೋಪಾಲ್ ಅವರ ಸಹನಿರ್ದೇಶನ ಈ ಚಿತ್ರಕ್ಕಿದೆ. ಅನನ್ಯ , ವಿಕಾಸ್ , ವಿಲಾಸ್ ಕುಲಕರ್ಣಿ , ಸುಧೀರ್ , ರಣ್ಣೀರ್ , ಶ್ವೇತ , ರೋಹಿಣಿ , ರಾಜ್ ಉದಯ್ , ನಾಗಭೂಷಣ್ , ನಾಗರತ್ನ ಪ್ರಮುಖ ತಾರಾಬಳಗದಲ್ಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ