ಹಮಾಸ್ ಭಾರತವನ್ನು ನೋಡಿ ಕಲಿಯಬೇಕು: ‘ಇಸ್ರೇಲಿಗಳು ಫೆಲೆಸ್ತೀನಿಯರನ್ನು ಕೊಂದಾಗ ಕೆಲವರಿಗೆ ದುಃಖ ಯಾಕೆ ಬರಲಿಲ್ಲ’ ಎಂದು ಪ್ರಶ್ನಿಸಿದ ಸೌದಿ ರಾಜಕುಮಾರ ಅಲ್ ಫೈಸಲ್

ಬ್ರಿಟಿಷ್ ಸಾಮ್ರಾಜ್ಯವನ್ನು ಉರುಳಿಸಿದ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಫೆಲೆಸ್ತೀನ್ ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ಸೌದಿ ಅರೇಬಿಯಾದ ರಾಜಕುಮಾರ ತುರ್ಕಿ ಅಲ್-ಫೈಸಲ್ ಹೇಳಿದ್ದಾರೆ.
ಇಸ್ರೇಲ್ ಸೇನೆ ಮತ್ತು ಹಮಾಸ್ ನಡುವಿನ ಸಂಘರ್ಷದ ಕುರಿತು ಸೌದಿ ಅರೇಬಿಯಾ ರಾಜಕುಮಾರ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ರಾಷ್ಟ್ರದ ಜನರು ಮಿಲಿಟರಿ ದಾಳಿಗೆ ಪ್ರತಿರೋಧ ಒಡ್ಡುವ ಹಕ್ಕು ಹೊಂದಿದ್ದಾರೆ. ಆದರೆ ಫೆಲೆಸ್ತೀನ್ ಮೇಲಿನ ಮಿಲಿಟರಿ ಕಾರ್ಯಾಚರಣೆಯನ್ನು ನಾನು ಬೆಂಬಲಿಸುವುದಿಲ್ಲ. ಇದಕ್ಕೆ ಪರ್ಯಾಯ ಹೋರಾಟದ ಮಾರ್ಗಗಳನ್ನು ಕಂಡುಕೊಳ್ಳಬೇಕು. ಭಾರತ ಬ್ರಿಟಿಷರ ವಿರುದ್ಧ ಮತ್ತು ಪೂರ್ವ ಯುರೋಪಿನಲ್ಲಿ ಸೋವಿಯತ್ ಸಾಮ್ರಾಜ್ಯದ ವಿರುದ್ಧ ನಡೆದ ಹೋರಾಟಗಳನ್ನು ಮಾದರಿಯಾಗಿಸಬೇಕು ಎಂದು ಹೇಳಿದ್ದಾರೆ.
ಇಸ್ರೇಲ್ ನ ಮಿಲಿಟರಿ ಕಾರ್ಯಾಚರಣೆ ಗಾಜಾದ ಜನತೆಯನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ. ಇತ್ತ ಹಮಾಸ್ ಕೂಡ ನಾಗರಿಕರ ಮೇಲೆ ದಾಳಿ ನಡೆಸುತ್ತಿರುವುದನ್ನು ನಾನು ಖಂಡಿಸುತ್ತೇನೆ. ಮುಗ್ಧ ಮಕ್ಕಳು, ಮಹಿಳೆಯರು ಮತ್ತು ಹಿರಿಯರನ್ನು ಕೊಲ್ಲುವುದನ್ನು ಇಸ್ಲಾಮ್ ಒಪ್ಪಿವುದಿಲ್ಲ. ಪೂಜಾ ಸ್ಥಳಗಳನ್ನು ಅಪವಿತ್ರಗೊಳಿಸುವುದರ ವಿರುದ್ಧವೂ ಕಿಡಿಕಾರಿದ ಅವರು ಇಸ್ರೇಲ್-ಹಮಾಸ್ ಸಂಘರ್ಷವನ್ನು ಖಂಡಿಸಿದ್ದಾರೆ.
“ಎಲ್ಲಾ ಮಿಲಿಟರಿ ಆಕ್ರಮಿತ ಜನರಿಗೆ ಆಕ್ರಮಣವನ್ನು ವಿರೋಧಿಸುವ ಹಕ್ಕಿದೆ” ಎಂದು ಅವರು ಹೇಳಿದರು. ಇಸ್ರೇಲಿಗಳನ್ನು ಫೆಲೆಸ್ತೀನಿಯರು ಕೊಂದಾಗ ಕಣ್ಣೀರು ಸುರಿಸುತ್ತಿರುವ ಪಾಶ್ಚಿಮಾತ್ಯ ದೇಶಗಳ ಧೋರಣೆ ವಿರುದ್ಧ ಸೌದಿ ದೊರೆ ಕಿಡಿಕಾರಿದರು. ಆದರೆ ಅವರು ಇಸ್ರೇಲಿಗಳು ಪ್ಯಾಲೆಸ್ತೀನಿಯರನ್ನು ಕೊಂದಾಗ ದುಃಖವನ್ನು ಯಾಕೆ ವ್ಯಕ್ತಪಡಿಸಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.