ಮಾದಪ್ಪನ ಬೆಟ್ಟದಲ್ಲಿ ಭಕ್ತಸಾಗರ: ಭಕ್ತರ ಸಮಸ್ಯೆ ಆಲಿಸಿದ ಕಾರ್ಯದರ್ಶಿ ಸರಸ್ವತಿ - Mahanayaka

ಮಾದಪ್ಪನ ಬೆಟ್ಟದಲ್ಲಿ ಭಕ್ತಸಾಗರ: ಭಕ್ತರ ಸಮಸ್ಯೆ ಆಲಿಸಿದ ಕಾರ್ಯದರ್ಶಿ ಸರಸ್ವತಿ

chamarajanagra
14/10/2023


Provided by

ಚಾಮರಾಜನಗರ: ಕರ್ನಾಟಕದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಜಾತ್ರೆ ಸಡಗರದಿಂದ ನಡೆಯುತ್ತಿದ್ದು ಭಕ್ತಸಾಗರವೇ ಹರಿದು ಬರುತ್ತಿದೆ‌.

ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ಟೋಬರ್ 11 ರಿಂದ 15ರವರೆಗೆ ಮಹಾಲಯ ಅಮಾವಾಸ್ಯೆ ಜಾತ್ರೆ ನಡೆಯಲಿದ್ದು ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಸುಮಾರು 1.5 ರಿಂದ 2 ಲಕ್ಷಕ್ಕೂ ಅಧಿಕ ಭಕ್ತಾಧಿಗಳು ಆಗಮಿಸಿದ್ದಾರೆ‌. ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ದ್ವಿಚಕ್ರ ವಾಹನ ಪ್ರವೇಶ ನಿರ್ಬಂಧಿಸಲಾಗಿದೆ.

ಭಕ್ತರ ಸಮಸ್ಯೆ ಆಲಿಸಲು ಸರತಿ ಸಾಲಿನಲ್ಲಿ ನಿಂತ ಕಾರ್ಯದರ್ಶಿ

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಇರುವ ಮುಖ್ಯ ಸಮಸ್ಯೆಗಳ ಬಗ್ಗೆ ಭಕ್ತರಿಂದಲೇ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ರವರು ಸರತಿ ಸಾಲಿನಲ್ಲಿ ತೆರಳಿ ಮಾಹಿತಿ ಪಡೆದುಕೊಂಡರು.

ಮಹಾಲಯ ಅಮಾವಾಸ್ಯೆ ಪ್ರಯುಕ್ತ ಭಕ್ತಾದಿಗಳಿಗೆ ಕುಡಿಯುವ ನೀರು, ವಿಶೇಷ ದಾಸೋಹ, ನೆರಳಿನ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಕಾರ್ಯದರ್ಶಿಯಾಗಿ ಸರಸ್ವತಿ ರವರು ಅಧಿಕಾರ ವಹಿಸಿಕೊಂಡು ಕೇವಲ ಎರಡು ತಿಂಗಳಗಳಷ್ಟೇ ಆಗಿದೆ. ಅವರಿಗೆ ಈ ಜಾತ್ರೆ ಮೊದಲನೇ ಜಾತ್ರೆಯಾಗಿದ್ದು ಇರುವ ಸಮಸ್ಯೆಗಳ ಬಗ್ಗೆ ಭಕ್ತರಿಂದಲೇ ಪಡೆದುಕೊಂಡು ಮುಂದಿನ ಜಾತ್ರಾ ಮಹೋತ್ಸವಕ್ಕೆ ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಅವರೇ ಖುದ್ದು ಸರತಿ ಸಾಲಿನಲ್ಲಿ ದರ್ಶನಕ್ಕೆ ತೆರಳಿ ಭಕ್ತಾದಿಗಳಿಂದ ಸಲಹೆ ಪಡೆದುಕೊಂಡರು.

ಪ್ರಾಧಿಕಾರದ ವತಿಯಿಂದಲೇ ಭಕ್ತರಿಗೆ ಕಡಿಮೆ ದುಡ್ಡಿನಲ್ಲಿ ರೂಂ ಹಾಗೂ ಡಾರ್ಮೆಟ್ರಿಗಳನ್ನು ವಿತರಿಸುತ್ತಿದ್ದೇವೆ, ಭಕ್ತಾದಿಗಳು ಖಾಸಗಿ ವಸತಿಗೃಹಗಳನ್ನು ಆಶ್ರಯಿಸದೆ ಪ್ರಾಧಿಕಾರದ ವಸತಿಗೃಹಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಮಹಿಳೆಯೊಬ್ಬರು ಮಾತನಾಡಿ ದೇವಾಲಯದ ವತಿಯಿಂದ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ ಇದರ ಬದಲು ಶಾಶ್ವತವಾಗಿ ಶೀಟನ್ನು ಅಳವಡಿಸಿದರೆ ಎಲ್ಲಾ ಸಂದರ್ಭಗಳಲ್ಲೂ ಅನುಕೂಲವಾಗುತ್ತೆ ಎಂದರು.

ಇನ್ನು ನಂಜನಗೂಡಿನ ಭಕ್ತರೊಬ್ಬರು ಮಾತನಾಡಿ ಅಂತರಗಂಗೆ, ಕಟ್ಟೆ ಬಸವೇಶ್ವರ ಹಾಗೂ ದೇವಾಲಯದ ಒಳಗಡೆ ಇರುವ ದೇವಾಲಯಗಳಲ್ಲಿ ಕಾಯಿ ಒಡೆಯಲು ಹಾಗೂ ವಿಭೂತಿ ಹಾಕಲು 5,10,20 ರೂ ಪಡೆಯುತ್ತಿದ್ದಾರೆ ಈ ಬಗ್ಗೆ ಕ್ರಮ ವಹಿಸಬೇಕು ಎಂದರು.

ಇನ್ನು ಕೆಲವರು ಸಮರ್ಪಕ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರೆದರೆ ಅನುಕೂಲವಾಗಲಿದೆ ಆದ್ದರಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು.

ಭಕ್ತಾದಿಗಳ ಸಲಹೆಯನ್ನು ಆಲಿಸಿದ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ರವರು ಭಕ್ತಾದಿಗಳ ಜೊತೆ ಮಾತನಾಡಿ ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟ ಹಿರಿಯರ ಜೊತೆ ಚರ್ಚಿಸಿ ಕ್ರಮವಹಿಸುತ್ತೇನೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅನುಕೂಲ ಕಲ್ಪಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು

ಇತ್ತೀಚಿನ ಸುದ್ದಿ