ಯೂಟ್ಯೂಬ್ ನೋಡಿ ಸ್ವಯಂ ಹೆರಿಗೆ, ಪ್ರಿಯಕರನಿಂದ ಮಾರ್ಗದರ್ಶನ: ಶಿಶುವನ್ನು ತಿಪ್ಪೆಗೆಸೆದರು!

ಬೆಳಗಾವಿ: ಯೂಟ್ಯೂಬ್ ನೋಡಿ ಪ್ರೇಯಸಿಗೆ ಸ್ವಯಂ ಹೆರಿಗೆ ಮಾಡಿಸಿ, ಶಿಶುವನ್ನು ತಿಪ್ಪೆಗೆಸೆದ ಘಟನೆ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಅಂಬಡಗಟ್ಟಿ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದ ಮನೆಯೊಂದರ ಹಿತ್ತಲಿನಲ್ಲಿ ಇತ್ತೀಚೆಗೆ ನವಜಾತ ಹೆಣ್ಣು ಶಿಶುವಿನ ಮೃತದೇಹ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿಗಳು ಬೆಚ್ಚಿಬೀಳಿಸುವ ಸಂಗತಿಗಳನ್ನು ಬಾಯ್ಬಿಟ್ಟಿದ್ದಾರೆ.
ಅಂಬಡಗಟ್ಟಿಯ ಮಹಾಬಳೇಶ ರುದ್ರಪ್ಪ ಕಾಮೋಜಿ(31) ಹಾಗೂ ಸಿಮ್ರಾನ್ ಮೌಲಾಸಾಬ ಮಾಣಿಕ ಬಾಯಿ(22) ಬಂಧಿತ ಆರೋಪಿಗಳಾಗಿದ್ದಾರೆ. ಮಾರ್ಚ್ 5ರಂದು ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿತ್ತು.
ಆರೋಪಿಗಳು 3 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರಿಬ್ಬರ ನಡುವೆ ದೈಹಿಕ ಸಂಪರ್ಕ ನಡೆದಿದ್ದು, ಸಿಮ್ರಾನ್ ಗರ್ಭಿಣಿಯಾಗಿದ್ದಳು. ಮಾರ್ಚ್ 5ರಂದು ಸಿಮ್ರಾನ್ ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಆಕೆ ಬಾತ್ ರೂಮ್ ಗೆ ಹೋಗಿ ಯೂಟ್ಯೂಬ್ ವಿಡಿಯೋ ಸಹಾಯದಿಂದ ಸ್ವಯಂ ಹೆರಿಗೆ ಮಾಡಿಕೊಂಡಿದ್ದಾಳೆ. ಇದೇ ವೇಳೆ ಮಹಾಬಳೇಶ್ವರ ವಿಡಿಯೋ ಕಾಲ್ ಮಾಡಿ ಆಕೆಗೆ ಮಾರ್ಗದರ್ಶನ ನೀಡಿದ್ದ. ಹೆರಿಗೆ ಬಳಿಕ ಮಗು ಅಳದಂತೆ ಅದರ ಬಾಯಿಗೆ ಬಟ್ಟೆ ಕಟ್ಟಿ, ಪೆಟ್ಟಿಗೆಯಲ್ಲಿ ತುಂಬಿದ್ದರು. ನಂತರ ಅದನ್ನು ತಿಪ್ಪೆಗುಂಡಿಗೆ ಎಸೆದಿದ್ದರು. ಶಿಶುವಿನ ಮೃತದೇಹವನ್ನು ನಾಯಿಗಳು ಎಳೆದಾಡಿದ್ದರಿಂದ ಈಪ್ರಕರಣ ಬೆಳಕಿಗೆ ಬಂದಿತ್ತು ಎಂದು ಎಸ್ ಪಿ ಡಾ.ಭೀಮಾಶಮಕರ ಗುಳೇದ ಪ್ರತಿಕ್ರಿಯಿಸಿದ್ದಾರೆ.
ಆರೋಪಿಗಳು ತಮ್ಮ ಅಕ್ರಮ ಸಂಬಂಧ ಮುಚ್ಚಿಹಾಕಲು ಶಿಶುವಿನ ತಲೆಗೆ ಒಳಗಾಯ ಮಾಡಿ ಕೊಲೆ ಮಾಡಿದ್ದರು. ನಂತರ ಪುರಾವೆ ನಾಶ ಮಾಡಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಶಿಶುವನ್ನು ಮೌಲಾಸಾಬ ಮಾಣಿಕಬಾಯಿ ಅವರಿಗೆ ಸೇರಿದ ಹಿತ್ತಲಿನಲ್ಲಿ ಮುಚ್ಚಿ ಹಾಕಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಸದ್ಯ ಆರೋಪಿಗಳಿಬ್ಬರ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7