ಸೆ.26ರಂದು ಬೆಂಗಳೂರು ಬಂದ್‌: ಮುಖ್ಯಮಂತ್ರಿ ಚಂದ್ರು , ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೂಪುರೇಷೆ ನಿರ್ಧಾರ - Mahanayaka

ಸೆ.26ರಂದು ಬೆಂಗಳೂರು ಬಂದ್‌: ಮುಖ್ಯಮಂತ್ರಿ ಚಂದ್ರು , ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೂಪುರೇಷೆ ನಿರ್ಧಾರ

bangalore bandh
24/09/2023

ಬೆಂಗಳೂರು: ಸೆ.26ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಶಾಂತಿಯುತವಾಗಿ ಬಂದ್‌ ನಡೆಸುತ್ತೇವೆ. ನಗರದ ಟೌನ್‌ ಹಾಲ್‌ ನಿಂದ ಮೈಸೂರು ಬ್ಯಾಂಕ್‌ ವರೆಗೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಿದ್ದೇವೆ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ವಿವರಿಸಿದರು.

ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶವನ್ನು ಖಂಡಿಸಿ ಸೆ.26ರಂದು ಕರೆ ನೀಡಲಾಗಿರುವ ಬೆಂಗಳೂರು ಬಂದ್‌ ವಿಚಾರವಾಗಿ ಮುಖ್ಯಮಂತ್ರಿ ಚಂದ್ರು ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಮಹತ್ವದ ಸುದ್ದಿಗೋಷ್ಠಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ಮು.ಚಂದ್ರು ಅವರು ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ಕೂಡಲೇ ರಾಜ್ಯ ಸರ್ಕಾರ ವಿಧಾನಸಭೆ ಅಧಿವೇಶನ ಕರೆದು ಚರ್ಚಿಸಿ, ಸಂಕಷ್ಟ ಸೂತ್ರ ಜಾರಿ ಮಾಡುವ ತನಕ ನೀರು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿಗೆ ನೀಡಬೇಕು. ಕಾವೇರಿ ನೀರು ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಕೂಡಲೇ ರದ್ದು ಪಡಿಸಿ, ಸ್ವತಂತ್ರ ನೀರು ನಿರ್ವಹಣಾ ಮಂಡಳಿ ರಚಿಸಬೇಕು. ಈ ಮಂಡಳಿಯಲ್ಲಿ ನಾಲ್ಕು ರಾಜ್ಯಗಳ ರೈತ ಪ್ರತಿನಿಧಿಗಳು ಮತ್ತು ಎಲ್ಲರನ್ನು ಒಳಗೊಂಡಂತೆ ಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಒತ್ತಿ ಹೇಳಿದರು.

ಡಿ.ಕೆ.ಶಿವಕುಮಾರ್‌ ಲಘು ಹೇಳಿಕೆಗೆ ಖಂಡನೆ:

ಬೆಂಗಳೂರು ಬಂದ್‌ ಕುರಿತಾಗಿ ಡಿಸಿಎಂ ಹಾಗೂ ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಯನ್ನು ಖಂಡಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ನಾವು ಆಯ್ಕೆ ಮಾಡಿದಂತ ಸರ್ಕಾರ ನಮ್ಮ ಪರವಾಗಿ ಕೆಲಸ ಮಾಡಬೇಕು. ಆದರೆ ನಮ್ಮ ಸರ್ಕಾರದ ನೀರಾವರಿ ಸಚಿವರು ನಮ್ಮ ಬಂದ್‌ ಬಗ್ಗೆ ಬಹಳ ಲಘುವಾಗಿ ಮಾತನಾಡುತ್ತಾರೆ. ಬೆಂಗಳೂರಿಗೆ ಅಗೌರವ ತರುತ್ತಿದ್ದೇವೆಂದು ದೂರುತ್ತಿದ್ದಾರೆ. ಇದು ಅವರ ಅಧಿಕಾರದ ಘನತೆಗೆ ತಕ್ಕಂತಹ ಮಾತಲ್ಲ. ಬೆಂಗಳೂರಿನ ಜನರ ಕುಡಿಯುವ ನೀರಿನ ಸಮಸ್ಯೆ ಬಗ್ಗೆ, ಅವರ ಬದುಕಿನ ಬಗ್ಗೆ ಕಾಳಜಿ ವಹಿಸಿ ಹೋರಾಟದಲ್ಲಿ ಭಾಗಿಯಾಗಿದ್ದೇವೆ ಎಂದು ಅವಮಾನಕರ ವಿಚಾರ ಹೇಗೆ ಆಗುತ್ತದೆ? ಡಿ.ಕೆ.ಶಿವಕುಮಾರ್‌ ಅವರಿಗೆ ಅಧಿಕಾರ ಶಾಶ್ವತ ಅಲ್ಲ. ನೀವೂ ಮೇಕೆದಾಟು ಹೋರಾಟ ಮಾಡಿ ಅಧಿಕಾರಕ್ಕೆ ಬಂದಿದ್ದೀರಿ. ಆದರೆ ನಾವು ಹಾಗೆ ಹೋರಾಟ ಮಾಡುವುದಿಲ್ಲ, ನಾವು ಪ್ರಾಮಾಣಿಕವಾದ ಹೋರಾಟ ನಡೆಸುತ್ತಿದ್ದೇವೆ. ಜನತೆಯ ಜೀವನಾಡಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.

ಕಪ್ಪುಪಟ್ಟಿ ಧರಿಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರು:

ಬೆಂಗಳೂರು ಬಂದ್‌ಗೆ ಖಾಸಗಿ ಶಾಲೆಗಳ ಒಕ್ಕೂಟ ಬೆಂಬಲ ಘೋಷಿಸಿದೆ. ತಮ್ಮ ಒಕ್ಕೂಟದ ಎಲ್ಲ ಖಾಸಗಿ ಶಾಲೆಗಳು ಬಂದ್‌ ಮಾಡಲಿದ್ದಾರೆ. ಪರೀಕ್ಷಾ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ ಪರೀಕ್ಷೆಗೆ ಹಾಜರಾಗುತ್ತಾರೆ ಎಂದು ಒಕ್ಕೂಟದ ಮುಖಂಡರಾದ ಲೋಕೇಶ್‌ ತಾಳಿಕೋಟೆ ತಿಳಿಸಿದರು.

ಐಟಿ ಬಂದ್‌:

ಐಟಿ ಕನ್ನಡಿಗರ ಬಳಗ ಮೂರುವರೆ ಸಾವಿರಕ್ಕೂ ಹೆಚ್ಚು ಐಟಿ ಕಂಪನಿಗಳ ನೌಕರರು ಕೆಲಸಕ್ಕೆ ರಜೆ ಹಾಕಿ ಬೈಕ್ ರ್ಯಾಲಿ ನಡೆಸಲಿದ್ದಾರೆ ಎಂದು ಸಂಘಟನೆ ಅಧ್ಯಕ್ಷರಾದ ಶಿವಾನಂದ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪೋಷಕರ ಸಂಘದ ಯೋಗನಂದ, ಕರ್ನಾಟಕ ಟೆಲಿವಿಷನ್ ಕಲಾವಿದರ ಸಂಘದ ಗಣೇಶ್‌ ರಾವ್‌ ಕೇಸರ್‌ ಕರ್‌, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಕೃಷ್ಣೇಗೌಡ, ಲೋಕೇಶ್ ಗೌಡ  ನರಸಿಂಹಮೂರ್ತಿ, ಕರ್ನಾಟಕ ಕಾರ್ಮಿಕ ಪರಿಷತ್ ಮುಖಂಡ  ರವಿ ಶೆಟ್ಟಿ ಬಸ್ರೂರು, ಜಯ ಕರ್ನಾಟಕ ಕಾರ್ಯಧ್ಯಕ್ಷ ರಾಮಚಂದ್ರಪ್ಪ, ಕನ್ನಡ ಕ್ರೈಸ್ತ ಸಂಘಟನೆಯ ಸ್ಟ್ಯಾನ್ ಲಿ ಪಿಂಟೋ ಹಾಗೂ ರಸ್ತೆ ಬದಿ ವ್ಯಾಪಾರಿಗಳ ಸಂಘ ಪೀಸ್ ಆಟೋ ಸಂಘಟನೆ, ಓಲಾ ಉಬೇರ್ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘ ಗೂಡ್ಸ್ ವಾಹನಗಳ ಚಾಲಕ ಮತ್ತು ಮಾಲೀಕರ ಸಂಘದ ಮುಖಂಡರು ಹಾಜರಿದ್ದು, ಬಂದ್‌ಗೆ ಬೆಂಬಲ ಘೋಷಿಸಿದರು.

ಇತ್ತೀಚಿನ ಸುದ್ದಿ