ಶೋಷಿತರು ಮತ್ತೊಂದು ಸಮಾನತೆಯ ಸ್ವಾತಂತ್ರ್ಯಕ್ಕೆ ಹೋರಾಡಬೇಕಿದೆ? - Mahanayaka

ಶೋಷಿತರು ಮತ್ತೊಂದು ಸಮಾನತೆಯ ಸ್ವಾತಂತ್ರ್ಯಕ್ಕೆ ಹೋರಾಡಬೇಕಿದೆ?

inequality
25/02/2023

  • ಧಮ್ಮ ಪ್ರಿಯಾ,  ಬೆಂಗಳೂರು

ಆಗಸ್ಟ್ 15 ಇಡೀ ಭಾರತ ದೇಶವೇ ಒಂದು ಶುಭದಿನವೆಂದು ಆಚರಿಸುವ ಹೆಮ್ಮೆಪಡುವಂತಹ ದಿನವೆಂದು ಹೇಳುತ್ತಾರೆ. ಎಲ್ಲರೂ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು, ಹ್ಯಾಪಿ ಇಂಡಿಪೆಂಡೆನ್ಸ್ ಡೇ, ಎಂತೆಲ್ಲಾ ಶುಭ ಹಾರೈಸುತ್ತಾರೆ.  ನಂತರದ ದಿನಗಳಲ್ಲಿ ಅನುಭವಿಸುವ ನರಕ ಯಾತನೆಗಳೇ ಬೇರೆಯಾಗಿವೆ.

ಬಂಧುಗಳೇ  ಈ ದೇಶದ ಪರಿಕಲ್ಪನೆಯೇ ಒಂದು ವಿಶಿಷ್ಟವಾದುದ್ದು ಶತಶತಮಾನಗಳಿಂದಲೂ ಈ ದೇಶದ ಇತಿಹಾಸದ  ಪುಟಗಳನ್ನು ಒಮ್ಮೆ ತಿರುವಿಹಾಕಿದಾಗ ನಮಗೆ ಗೋಚರಿಸುವುದು  ಸಿಂಧೂ ಸಂಸ್ಕೃತಿ, ವೇದ ಉಪನಿಷತ್ತುಗಳ ಅಧ್ಯಯನ, ಸಣ್ಣ ಪುಟ್ಟ ಮತಗಳ  ಆಚರಣೆಗಳು, ಇವೆಲ್ಲವುಗಳನ್ನು  ನಾವು ಕೇವಲ ಪುಸ್ತಕ ರೂಪದಲ್ಲಿ ಓದಿದ್ದೇವೆ. ಅಧ್ಯಯನಕಾರರು ಚಿಂತಕರು ಇದರಿಂದ ಹೊರತಲ್ಲ.  ಭಾರತದೇಶ ಸಂಪದ್ಭರಿತವಾಗಿದ್ದು ಬಡಜನರಿಂದ ಕೂಡಿದ ಶ್ರೀಮಂತ ದೇಶ ಎಂದು ಶತಮಾನಗಳಿಂದಲೂ  ಭಾಷಣಗಳಲ್ಲಿ ಕೇಳುತ್ತಲೇ ಬಂದಿದ್ದೇವೆ.

ಇಡೀ ದೇಶವನ್ನು ಹಲವಾರು ಪರಕೀಯರು ಆಳಿದ್ದು ನಮ್ಮ ಇತಿಹಾಸದ ಪುಟಗಳಿಂದ ತಿಳಿದಿದ್ದೇವೆ, ಹಲವಾರು ವಿದೇಶಿಗರು ನಮ್ಮ ದೇಶವನ್ನು ಲೂಟಿ ಮಾಡಿದ್ದಾರೆ. ಇಲ್ಲಿನ ಸಂಪತ್ತನ್ನು ದೋಚಿದ್ದಾರೆ. ದೇಶ ಅಭಿವೃದ್ಧಿಯಾಗಲು ಯಾರು ಶ್ರಮಿಸಿಲ್ಲಾ ಎನ್ನುವ ನಾವು ಇಂದು ಬೇರೆಯದೇ ಆದ ದಿಕ್ಕಿನಲ್ಲಿ ಯೋಚಿಸುತ್ತಿದ್ದೇವೆ.

ಬಂಧುಗಳೇ, ಒಮ್ಮೆ ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ. ಈ ದೇಶದ ಮೇಲೆ  ಪೋರ್ಚಿಗ್ರೀಸರು, ಡಚ್ಚರು, ಮೊಘಲರು, ಫ್ರೆಂಚರು ಎಲ್ಲರೂ ದಾಳಿ ಮಾಡಿ ದೇಶದ ಸಂಪತ್ತನ್ನು ಲೂಟಿ ಮಾಡಿದ್ದಾರೆ. ಅಂತಹ ಲೂಟಿಕೋರರನ್ನು ಪ್ರಶ್ನಿಸುವ, ಅವರ ವಿರುದ್ಧ ಬಂಡೇಳುವ, ಪ್ರತಿಭಟಿಸುವ ನಮ್ಮ ದೇಶದ ರಕ್ಷಣೆಗೆ ನಾವು ನಿಲ್ಲುವ ಯಾವುದೇ ಒಂದು ಸಣ್ಣ ಪ್ರಯತ್ನವನ್ನು ಇವರ  ಆಕ್ರಮಣದ ಸಂದರ್ಭದಲ್ಲಿ  ಮಾಡಿಲ್ಲ. ಮೊಘಲರ ಕಾಲದಲ್ಲಿ ಹಲವಾರು ದೇವಾಲಯಗಳು ಸರ್ವನಾಶವಾದರು, ಲೂಟಿಯಾದರು,ನಾವು ದಾಳಿಕೋರರ ವಿರುದ್ಧ ಬಂಡೇಳಲಿಲ್ಲಾ. ಆದರೆ ಅಂದಿನ ಲೂಟಿಕೋರರ ನಡೆಸಿದ ಎಲ್ಲಾ  ಅನ್ಯಾಯಗಳನ್ನು ಇಂದು ನಮ್ಮೊಡನೆ ಬೆರೆತು ಬದುಕುತ್ತಿರುವ ಸಾಮಾನ್ಯ ಜನರ  ತಲೆಗೆ ಕಟ್ಟುತ್ತಿದ್ದೇವೆ. ಅವರೆಲ್ಲಾ ಇಂದು ನಮ್ಮ ದೇಶದ ಉಗ್ರಗಾಮಿಗಳು ದೇಶದ್ರೋಹಿಗಳು ಎಂದೆಲ್ಲಾ ಅರಚಾಡುತ್ತಿದ್ದೇವೆ. ಜೊತೆಗೆ ಇಂತಹ ಸಂಗತಿಗಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದೇವೆ.

ಆದರೆ ಈ ದಾಳಿಕೋರರ ದಬ್ಬಾಳಿಕೆಯನ್ನು  ಪ್ರಶ್ನಿಸದೆ ಅವರ ವಿರುದ್ಧ ಸೆಟೆದು ನಿಲ್ಲದ ನಾವುಗಳು  ಬ್ರಿಟಿಷರು ಈ ದೇಶಕ್ಕೆ ಕಾಲಿಟ್ಟ ತಕ್ಷಣವೇ ನಮಗೆ ಭಾರತದ ಪರಿಕಲ್ಪನೆ, ಸ್ವಾತಂತ್ರ್ಯದ ಪರಿಕಲ್ಪನೆ, ಹೋರಾಟದ ಮನೋಭಾವ, ದೇಶದ ಏಕತೆಯ ಕಿಚ್ಚು ಒಮ್ಮಿಂದೊಮ್ಮೆಗೆ ಹರಡಲು ಹೇಗೆ ಸಾಧ್ಯವಾಯಿತು. ಹಾಗೇ ಬ್ರಿಟೀಷರ ಕಾಲದಲ್ಲಿಯೇ ಏಕೆ ಈ ಸ್ವಾತಂತ್ರ್ಯದ ಪರಿಕಲ್ಪನೆ ಹುಟ್ಟಿತು ಎನ್ನವುದೇ ಒಂದು ದೊಡ್ಡ  ಪ್ರಶ್ನೆಯಾಗಿದೆ.

ಬಂಧುಗಳೇ ಇಡೀ ಭಾರತ ದೇಶವನ್ನು ಹಲವಾರು ವಿದೇಶಿಗರು  ದಂಡೆತ್ತಿಬಂದು ಲೂಟಿ ಮಾಡಿದ್ದರು. ಅವರಿಗೆ ಅಂದಿನ ಸಮಯದಲ್ಲಿ ಭಾರತದ ಜನಜೀವನ, ಅವರ ಸಾಮಾಜಿಕ ಸ್ಥಿತಿಗತಿ, ಅವರ ಆಹಾರ ಪದ್ದತಿ, ಅವರ ಕುಲಕಸುಬುಗಳು, ಜಾತಿ ಪದ್ದತಿ, ಮತಗಳ ಆಚರಣೆಗಳು ಇದ್ಯಾವುದು ಈ ದಂಡಯಾತ್ರಿಗಳಿಗೆ ಬೇಕಾಗಿರಲಿಲ್ಲಾ. ಅಂದಿನ ಭಾರತದ ಸನಾತನಿಗಳು ಮನುಧರ್ಮಶಾಸ್ತ್ರವನ್ನೇ ಆಧಾರವಾಗಿಟ್ಟುಕೊಂಡು  ವರ್ಣಾಶ್ರಮವನ್ನು ಜಾರಿ ಮಾಡುತ್ತಾ ಸಮಾಜವನ್ನು ನಿಯಂತ್ರಿಸುತ್ತಿದ್ದರು. ಇವರಿಗೆ ಯಾವ ದಂಡಯಾತ್ರಿಗಳು ಎಷ್ಟು ಲೂಟಿ ಮಾಡಿದರು,ಅದನ್ನು ತಡೆಯುವ ಯಾವ ಸಾಹಸಕ್ಕೆ ಕೈ ಹಾಕಲಿಲ್ಲ.ಇವರುಗಳು ಕೇವಲ ಚಾತುರ್ವರ್ಣದ ಆದರದ ಮೇಲೆ  ತುಂಬಾ ಸುಖಿಗಳಾಗಿದ್ದರು. ಶೂದ್ರ ಮತ್ತು ಅತಿಶೂದ್ರದನ್ನು ಹಿಂಸಿಸುತ್ತಿದ್ದರು. ಊರಿಂದ ಹೊರಗಡೆಯಿಡುವ,ವಿದ್ಯಯಿಂದ ದೂರವಿಡುವ,ದೇವಾಲಯದಿಂದ, ಕೆರೆಯ ನೀರು ಮುಟ್ಟುವುದರಿಂದ,  ಭೂಮಿಯ ಒಡೆತನದಿಂದ ಹೀಗೆ ಎಲ್ಲದರಿಂದಲೂ ವಂಚಿಸಲಾಗಿತ್ತು.   ಈ ಸನಾತನಿಗಳು  ವರ್ಣಾಶ್ರಮ ಪದ್ದತಿಯ ಸಂಪ್ರದಾಯವಾದಿಗಳಾಗಿ  ತಮ್ಮ ಜೀವನವನ್ನು ನಡೆಸುತ್ತಿದ್ದರು. ಆಕ್ರಮಣಕಾರರು  ಇದ್ಯಾವುದನ್ನು  ಪ್ರಶ್ನಿಸದಿದ್ದ ಕಾರಣಕ್ಕೆ, ಶೋಷಿತರ ಪರವಾಗಿ ಇವರು ಯೋಚಿಸದಿದ್ದ ಕಾರಣಕ್ಕೆ ಇವರ ವಿರುದ್ಧ ಯಾರು ಹೋರಾಟಕ್ಕೆ ಮುಂದಾಗಲಿಲ್ಲಾ.

ಇಡೀ ದೇಶದ ಮುಖ್ಯಸ್ಥರಂತೆ ದೇಶದ  ಎಲ್ಲಾ ಸಂಪತನ್ನು ಬಹಳ ಸಂತೋಷದಿಂದ ಅನುಭವಿಸುತ್ತಿದ್ದ  ಸನಾತನಿಗಳ ಬುಡಕ್ಕೆ ಮೊದಲು ಕೊಡಲಿ ಪೆಟ್ಟು ಬಿದ್ದದ್ದು  6ನೇ ಶತಮಾನದಿಲ್ಲಿ  ಬಂದ ಗೌತಮ ಬುದ್ಧನ ಸಮಸಮಾಜದ, ವೈಜ್ಞಾನಿಕ ಸತ್ಯದ  ತಿಳುವಳಿಕೆ. ಸಮಾನತೆಯ ಪ್ರಜ್ಞೆ, ಸಹೋದರತ್ವದ ಮನೋಭಾವ, ಶಾಂತಿಯ ಸಹಬಾಳ್ವೆಯ ಜೀವನ ಇವೆಲ್ಲವೂ ಇಲ್ಲಿನ ಮೂಲ ಸನಾತನಿಗಳನ್ನು  ನಿದ್ದೆಗೆಡೆಸಿದವು. ಬುದ್ಧನ ಬೋಧನೆಯಲ್ಲಿ ಕೊಲೆ ಸುಲಿಗೆ ಮಾಡಬಾರದು, ಸುಳ್ಳು ಹೇಳಬಾರದು, ಬೇರೆಯವರೊಡನೆ  ದ್ವೇಷ ಅಸೂಯೆಯಿಂದ ಬದುಕಬಾರದು, ನಮ್ಮ ಮನಸ್ಸು ಸದಾ ಶಾಂತಿಯಿಂದ ನೆಮ್ಮದಿಯಿಂದ, ಒಳ್ಳೆಯ ಸಮಾನತೆಯ ಮಾನವೀಯ ಮೌಲ್ಯವುಳ್ಳ ಗುಣಗಳಿಂದ ಕೂಡಿದ್ದು  ನೆಮ್ಮದಿಯಾಗಿ ಬದುಕಲು ಪ್ರಾರಂಭಿಸಿ ಎಂದರು.

ನಂತರ 12ನೇ ಶತಮಾನದಲ್ಲಿ  ಬಸವಣ್ಣನವರು ಸಾಮಾಜಿಕ ಸಮಾನತೆಯ ಚಳವಳಿ ನಡೆಸಿದರು.  ಬುದ್ಧನ ತತ್ವವನ್ನೇ ಅನುಸರಿಸುತ್ತಾ ವಚನ ರೂಪಕ್ಕೆ ಸಮಾನತೆಯ ತತ್ವವನ್ನು ತಂದರು.

ಕಳಬೇಡ, ಕೊಲಬೇಡ ಹುಸಿಯ ನುಡಿಯಲುಬೇಡ,  ಅಂತರಂಗ ಬಹಿರಂಗ ಎರಡೂ ಶುದ್ಧವಾಗಿರಬೇಕು.

ಕಾಯಕ ತತ್ವ ನಮ್ಮದಾಗಬೇಕು. ಎಲ್ಲರೂ ಸಮಾನವಾಗಿರಬೇಕು. ಈಗೆ ಸಾರಿರುವ  ಸಾಕಷ್ಟು ಪುರಾವೆಗಳಿವೆ,  ಆದರೆ ಯಾವ ಪ್ರೆಂಚರ,ಡಚ್ಚರ, ಪೋರ್ಚಿಗೀಸರ, ಮೊಘಲರ  ಕಾಲದಲ್ಲಿಯೂ ನಡೆಯದ  ಸ್ವಾತಂತ್ರ್ಯ ಚಳುವಳಿ ಪ್ರಾರಂಭಿಸದ ಭಾರತೀಯರು ಬ್ರೀಟಿಷರ ಕಾಲದಲ್ಲಿಯೇ ಯಾಕೆ ಈ ಕೆಲಸಕ್ಕೆ ಕೈ ಹಾಕಿದರು ಎಂದು ಒಮ್ಮೆ  ಚಿಂತಿಸಬೇಕಾಗಿದೆ.

ಸ್ನೇಹಿತರೇ,   ಬ್ರಿಟೀಷರು ಭಾರತಕ್ಕೆ  ಬದಂತಹ ಸಂದರ್ಭದಲ್ಲಿ  ಭಾರತೀಯರ ಸ್ಥಿತಿಯನ್ನು ಗಮನಿಸಿದ್ದು ಬಹಳ ಮಹತ್ತರವಾದ ವಿಚಾರವಾಗಿದೆ. ಭಾರತೀಯರಲ್ಲಿ ಮನೆಮಾಡಿದ್ದ ಬಹುದೊಡ್ಡ ಸಾಮಾಜಿಕ ಪಿಡುಗೆಂದರೆ ಜಾತಿ ವ್ಯವಸ್ಥೆ, ಲಿಂಗತಾರತಮ್ಯ, ಸಂಪತ್ತಿನ ಅಸಮಾನ ಹಂಚಿಕೆ, ವಿದ್ಯೆಯಲ್ಲಿ (ನಿರಾಕರಣೆ) ಅಸಮಾನತೆ, ಇವೆಲ್ಲವನ್ನೂ ಗಮನಿಸಿದ ಬ್ರಿಟೀಷ್ ಸರ್ಕಾರ ಪ್ರತಿಯೊಬ್ಬ ಭಾರತೀಯರಿಗೂ ವಿದ್ಯೆಯಲ್ಲಿ, ಉದ್ಯೋಗದಲ್ಲಿ, ಆಸ್ತಿಯಲ್ಲಿ ಸಮಾನ ಅವಕಾಶಕ್ಕೆ ಅನುವು ಮಾಡಲು ಪ್ರಾರಂಭಿಸಿದರು.

ಮಹಿಳೆಯರಿಗೆ ವಿದ್ಯೆಯಲ್ಲಿ, ಆಸ್ತಿಯಲ್ಲಿ ಸಮಾನ ಅವಕಾಶ ನೀಡಲು ಮುಂದಾದರು. ಇದಾದ ನಂತರ ಅಂಚೆ ವ್ಯವಸ್ಥೆ, ರೈಲು ವ್ಯವಸ್ಥೆ, ಸಾರಿಗೆ ವ್ಯವಸ್ಥೆಯಲ್ಲಿ ಅಭಿವೃದ್ಧಿ ತರುವುದರ ಜೊತೆಗೆ  ಶಿಕ್ಷಣದಲ್ಲಿ ಬಹುದೊಡ್ಡ ಕ್ರಾಂತಿ ನಡೆಯಿತು. ಲಾರ್ಡ್ ಮೆಕಾಲೆಯ ಶಿಕ್ಷಣ ನೀತಿಯಿಂದ ಹೆಣ್ಣುಮಕ್ಕಳಿಗೆ, ಪ್ರಾಣಿಗಳಿಗೂ ಕಡೆಯಾಗಿ ಊರಿನ ಹೊರಗಡೆ ಇದ್ದು,  ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದ ಎಲ್ಲಾ ಶೋಷಿತ ಜನಾಂಗಗಳಿಗೆ ವಿದ್ಯೆಯಲ್ಲಿ ಸಮಪಾಲು ದೊರೆತಂತಾಯಿತು. ಯಾವ ಸನಾತನಿಗಳು ದೇವರ ಧರ್ಮದ ಹೆಸರಿನಲ್ಲಿ  ಈ ಮಣ್ಣಿನ ಮಕ್ಕಳಿಗೆ ಅನ್ಯಾಯ ಮಾಡಿದ್ದರೋ, ವಿದ್ಯೆಯಿಂದ, ಅಧಿಕಾರದಿಂದ,  ಸಂಪತ್ತಿನಿಂದ ವಂಚಿಸಿದ್ದರೋ ಅವರಿಗೆ ಎಲ್ಲಾ ರಂಗದಲ್ಲಿಯೂ ನಾವು ಸಮಾನವಾಗಿ ನಿಲ್ಲಬಹುದು ಎನ್ನುವ ಆತ್ಮವಿಸ್ವಾಸ ಮೂಡಿದ್ದು  ಲಾರ್ಡ್ ಮೆಕಾಲೆಯವರ ಶಿಕ್ಷಣ ನೀತಿಯಿಂದ.

ನೂತನ ಶಿಕ್ಷಣ ನೀತಿಯನ್ನು  ಮನಗಂಡ ಎಲ್ಲಾ ಸನಾತನಿಗಳು ಡಚ್ಚರು ಪ್ರೆಂಚರು ಮೊಘಲರು  ಪೋರ್ಚುಗೀಸರ ವಿರುದ್ಧ ತಿರುಗಿಬೀಳದವರು ಬ್ರಿಟೀಷರ ವಿರುದ್ಧ ಘೋಷಣೆ ಪ್ರಾರಂಭಿಸಲು ಕಾರಣವಾಯಿತು. “ನಾವೆಲ್ಲಾ ಭಾರತೀಯರು ನಾವೆಲ್ಲಾ ಒಂದು ನಾವೆಲ್ಲಾ ಹಿಂದೂ”  ನಾವು ಈ ಪರಂಗಿಯವರ ವಿರುದ್ಧ ಹೋರಾಟ  ಮಾಡಲೇಬೇಕು, ನಮ್ಮ ನಾಡಿಗೆ- ದೇಶಕ್ಕೆ ಬಿಡುಗಡೆಯಾಗಬೇಕಾದರೆ ನಾವು ಸ್ವಾತಂತ್ರ್ಯ ಚಳುವಳು ಪ್ರಾರಂಭಿಸಬೇಕು ಎಂದು ಪ್ರಚಾರ ಮಾಡಲಾರಂಭಿಸಿದರು. ಸನಾತನಿಗಳಿಗೆ ನಿಜವಾಗಿಯೂ  ದಲಿತರ, ಹಿಂದುಳಿದವರ, ಮಹಿಳೆಯರ, OBCಗಳ, ಧಾರ್ಮಿಕ ಅಲ್ಪಸಂಖ್ಯಾತರ ಅಭಿವೃದ್ಧಿಯನ್ನು  ಸಹಿಸಿಕೊಳ್ಳಲು ಸಾದ್ಯವಾಗದೆ  ಚಳವಳಿ ಪ್ರಾರಂಭಿಸಿದರೆ  ಹೊರತು  ಯಾವ ಸಮಾನತೆಯ ಸ್ವಾತಂತ್ರ್ಯದ ಪರಿಕಲ್ಪನೆಯು ಇವರ ತಲೆಯಲ್ಲಿ ಇರಲಿಲ್ಲ.

ಕ್ರಿ,.ಪೂ.ದಿಂದಲೂ  ಜಾರಿಯಲ್ಲಿದ್ದ ಮಾನವ ವಿರೋಧಿ ಮನುಧರ್ಮ ಶಾಸ್ತ್ರದ ನೀತಿಗಳನ್ನು  ಕಡೆಗಣಿಸಿದ  ಬ್ರಿಟಿಷರು ಹೊಸ ಹೊಸ ಬದಲಾವಣೆ ತರಲಾರಂಬಿಸಿದ್ದು  ಒಂದು ಹೊಸ ಯುಗದ ಉದಯಕ್ಕೆ  ಕಾರಣವಾಯಿತು. ಭಾರತೀಯರು ಅದರಲ್ಲೂ  ಶೋಷಣೆಗೊಳಗಾದವರು, ಅವಕಾಶವಂಚಿತರು ಸ್ವಲ್ಪ ಮಟ್ಟಿಗೆ ಬೀದಿಯಲ್ಲಿ  ತಿರುಗಾಡಲು ಪ್ರಾರಂಭಿಸಿದರು. ನಂತರ  ಕೊಲ್ಲಾಪುರದ  ಛತ್ರಪತಿ ಸಾಹುಮಹರಾಜ್ ಹಾಗು ಬರೋಡಾದ ಗಾಯಕವಾಡ್ ರವರು ನೀಡಿದ ಸಮಾನತೆಯ  ಅವಕಾಶಗಳು, ಮೈಸೂರು ಸಂಸ್ಥಾನದ  ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಉದ್ಯೋಗದಲ್ಲಿ       ಜಾತಿ ಜನಸಂಖ್ಯಾವಾರು ಮೀಸಲಾತಿ ನೀಡಿದ್ದು  ಸನಾತನಿಗಳಿಗೆ ನುಂಗಲಾರದ ತುತ್ತಾಯಿತು.

ಮೈಸೂರು ಸಂಸ್ಥಾನದಲ್ಲಿಯೇ ದಿವಾನರಾಗಿ ಕೆಲಸ ಮಾಡುತ್ತಿದ್ದ ಸರ್ ಎಂ ವಿಶ್ವೇಶ್ವರಯ್ಯ ನವರಿಗೆ  ಬಹಳ ಇರುಸು ಮುರುಸಾಗಿ ತಮ್ಮ ದಿವಾನ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು. ಇದೇ ಸಂದರ್ಭವನ್ನು ಬಹಳ ನಯವಾಗಿ ಬಳಸಿಕೊಂಡ ಸ್ವತಂತ್ರ ಹೋರಾಟದ ನಾಯಕರು, ಮಹಾರಾಜರ ಈ ಜನಪರ ಕೆಲಸಗಳ ಕಡೆಗೆ ಜನರು ಗಮನ ಹರಿಸಲು ಬಿಡಬಾರದೆಂದು ಸ್ವಾತಂತ್ಯದ ಚಳವಳಿಯ ನೆಪದಲ್ಲಿ  ಶಿವಪುರ ಧ್ವಜ ಸತ್ಯಾಗ್ರಹ ಪ್ರಾರಂಭಿಸಿ ಜನರನ್ನು  ದಿಕ್ಕುತಪ್ಪಿಸಲು ಮುಂದಾದರು.

ಅಷ್ಟೊತ್ತಿಗಾಗಲೇ ಡಾ.ಅಂಬೇಡ್ಕರ್ ರವರ  ಸಮಾನತೆಯ ಹೋರಾಟ  ಪ್ರಾರಂಭವಾಗಿತ್ತು.  ಭಾರತೀಯರಲ್ಲಿ, ಜಾತಿ ಧರ್ಮದ ಹೆಸರಲ್ಲಿ ಶೋಷಣೆ ನಡೆಯುತ್ತಿರುವಾಗ ಶೋಷಣೆಗೊಳಗಾದವರಿಗೆ ನ್ಯಾಯ ಕೊಡಿಸುವುದು, ಸಮಾನತೆಯ ಸಮಾಜ ನಿರ್ಮಾಣ ಮಾಡುವುದು  ಡಾ.ಅಂಬೇಡ್ಕರ್ ರವರ ಉದ್ದೇಶವಿತ್ತೇ ಹೊರತು,  ಶೋಷಣೆ ಮಾಡುವವರ ಸ್ವಾತಂತ್ರ್ಯ ಹೋರಾಟದ ಅಗತ್ಯತೆ ಅವರಿಗಿರಲಿಲ್ಲ. ಅಲ್ಲದೆ ಬ್ರಿಟೀಷರು ಶೋಷಣೆಗೊಳಗಾದ ಭಾರತೀಯರಿಗೆ ಯಾವ ತಾರತಮ್ಯ  ಮಾಡದೆ ಎಲ್ಲರಿಗೂ ತಮ್ಮ ಕಂಪೆನಿಗಳಲ್ಲಿ ಸ್ವಲ್ಪ ಮಟ್ಟಿನ ಉದ್ಯೋಗಾವಕಾಶಗಳನ್ನು ನೀಡುತ್ತಿದ್ದರು.

ಮನುಸ್ಮೃತಿಯನ್ನೇ ಆಧಾರವಾಗಿಟ್ಟುಕೊಂಡು ಸ್ವಾತಂತ್ರ್ಯದ ಹೋರಾಟ ಪ್ರಾರಂಭಿಸಿದ ಸನಾತನಿಗಳಿಗೆ ಇದರಿಂದ  ಒಂದು ರೀತಿಯ ಅಭದ್ರತೆ ಕಾಡಲು ಶುರುವಾಯಿತು,  ಶೋಷಣೆಗೊಳಗಾದವರಿಗೆ ಸಿಗಬೇಕಾಗಿದ್ದ ಓಟಿನ ಹಕ್ಕು, ಉದ್ಯೋಗದಲ್ಲಿ ಸಮಪಾಲು, ಆಸ್ತಿಯಲ್ಲಿ ಹಕ್ಕು,  ಇವೆಲ್ಲವನ್ನೂ ಲಂಡನ್ನಿನಲ್ಲಿ  ಬ್ರಿಟೀಷರೊಡನೆ ನಡೆದ ಸಮಾಲೋಚನ ಸಭೆಯಲ್ಲಿ  ನಡೆದ ಶೋಷಿತರ ಸಮಾನತೆಯ ಹಕ್ಕುಗಳ ವಾದವನ್ನು  ಅಂದಿನ ಹಿಂದೂ ನಾಯಕರು  ಹಾಗೂ ಕಾಂಗ್ರೇಸಿಗರು ಮತ್ತು  ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರು ನಿರಾಕರಿಸಿದ್ದರು. ಸೈಮನ್  ಭಾರತಕ್ಕೆ ಬರಲು ಇದು  ಮುಖ್ಯ ಕಾರಣವಾಯಿತು. ಧರ್ಮ ನೆಪದಲ್ಲಿ  ಜಾತಿ ನಿಂದನೆ, ದೇವಸ್ಥಾನಗಳಲ್ಲಿ  ದಲಿತರಿಗೆ ಪ್ರವೇಶವಿಲ್ಲಾ ಎಂದು ಅಂಬೇಡ್ಕರವರು ಮಂಡಿಸಿದ ವಾದವನ್ನು ಪರಿಶೀಲಿಸಲು ಸೈಮನ್ ಭಾರತಕ್ಕೆ ಬಂದರು. ಆಗಲೂ ಸೈಮನ್ ಗೋ ಬ್ಯಾಕ್ ಚಳುವಳಿ ಮಾಡಿದ್ದು  ಇದೇ ನಮ್ಮ ಸ್ವಾತಂತ್ರ್ಯ ಹೋರಾಟಗಾರರೇ ಹೊರತು ಹೊರತು ಬೇರೆ ಯಾವ ಶೋಷಿತ ಜನಾಂಗದ ನಾಯಕರುಗಳಲ್ಲಾ.

ಸನಾತನಿಗಳಿಗೆ  ದೇಶದಲ್ಲಿ ಜಾರಿಯಲ್ಲಿದ್ದ ಮನುಸ್ಮೃತಿ ಆಧಾರಿತ ಸ್ವಾತಂತ್ರ್ಯ ಬೇಕಾಗಿತ್ತೇ ಹೊರತು,ಸಮಾನತೆಯನ್ನು ಸಾರುವ ಸ್ವಾತಂತ್ರ್ಯ ಬೇಕಾಗಿರಲಿಲ್ಲಾ, ಲಂಡನ್ನಿನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದ  ತೀರ್ಪಿನ ಪರಿಣಾಮವಾಗಿ ಭಾರತದಲ್ಲಿನ  ಶೋಷಿತರಿಗೆ ಓಟಿನ ಅಧಿಕಾರದ  ಹಕ್ಕು, ಉದ್ಯೋಗದಲ್ಲಿ ಹಕ್ಕು, ಮಹಿಳಾ ಸ್ವಾತಂತ್ರ್ಯ, ಆಸ್ತಿಯ ಹಕ್ಕು ಎಲ್ಲವೂ ದೊರಿಯಿತು.  ಇದನ್ನು ಸಹಿಸದ ಸನಾತನಿಗಳು  ತಮ್ಮ ಕೈಗೊಂಬೆಯಾಗಿ  ಕುಣಿಯುತ್ತಿದ್ದ ಸ್ವಾತಂತ್ರ್ಯ ಅಂದಿನ ಹಿಂದೂ ನಾಯಕರು ಮತ್ತು ಅಂದಿನ ಕಾಂಗ್ರೇಸಿಗರು  ಗಾಂಧೀಜಿಯವರನ್ನು  ಪೂನಾದ ಯರವಾಡ ಜೈಲಿನಲ್ಲಿ ಉಪವಾಸ ಕುಳ್ಳಿರಿಸಿ  ಶೋಷಿತರ ಓಟಿನ ಹಕ್ಕನ್ನು ಹಿಂಪಡೆಯಲು  ಪಟ್ಟುಹಿಡಿದರು.ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಭಾರತೀಯ ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆ. !!!!

ಡಾ. ಅಂಬೇಡ್ಕರ್ ರವರು ಇದು ನಿಜವಾಗಿಯೂ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ ನಿಜವಾದ ಸಮಾನತೆಯ  ಸ್ವಾತಂತ್ರ್ಯವಲ್ಲ. ಇದು ಬಿಳಿಯರಿಂದ ಈ ದೇಶದ ಮೇಲು ವರ್ಗದ ಜನರಿಗೆ ಹಸ್ತಾಂತರಗೊಂಡ ಅಧಿಕಾರದ ಸ್ವಾತಂತ್ರ್ಯವೇ ಹೊರತು  ಶೋಷಣೆಗೊಳಗಾದ ಜನರಿಗೆ ದೊರೆತ ನಿಜವಾದ  ಸ್ವಾತಂತ್ರ್ಯವಲ್ಲಾ ಎಂದರು.  ಸ್ನೇಹಿತರೆ ಇಂದಿಗೆ ದೇಶದ  ಸ್ವಾತಂತ್ರ್ಯದ  ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಆದರೆ ನಾವು ಇಂದಿಗೂ  ಎಷ್ಟು ಸ್ವತಂತ್ರಿಗಳಾಗಿದ್ದೇವೆ ? ನಾವು  ನಿಜವಾಗಿಯೂ ದೇಶದ ಅಭಿವೃದ್ಧಿಯ ಹಾದಿಯಲ್ಲಿದ್ದೇವೆಯೇ ? ಇಲ್ಲಿ ಮಹಿಳೆಯರಿಗೆ ನಿಜವಾಗಿಯೂ ಸಮಾನತೆ ಸಿಕ್ಕಿದೆಯಾ ? ಉದ್ಯೋಗದಲ್ಲಿ ಅಭಿವೃದ್ದಿಯಾಗಿದ್ದೇವೆಯಾ ?  ಒಮ್ಮೆ ಯೋಚಿಸಿ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಕಳೆದ 8-10 ವರ್ಷಗಳಿಂದೀಚೆಗೆ ಸರ್ಕಾರೀ ಒಡೆತನದ ಸಂಸ್ಥೆಗಳೆಲ್ಲಾ  ಖಾಸಗಿ ಒಡೆತನಕ್ಕೆ ಜಾರುತ್ತಿವೆ.  ನಮ್ಮ ಆರ್ಥಿಕ ಮಟ್ಟ ಕುಸಿಯುತ್ತಿದೆ. ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದೆ.  ದಿನನಿತ್ಯ ಅಮಾಯಕ ಮಹಿಳೆಯರ ಅತ್ಯಾಚಾರವಾಗುತ್ತಿದೆ. ದಲಿತರ ಕಗ್ಗೊಲೆ ನಡೆಯುತ್ತಿದೆ.  ರೈತರ ಆತ್ಮಹತ್ಯೆ ನಿರಂತರವಾಗಿದೆ. ಬ್ಯಾಂಕುಗಳಿಂದ ಸಾಲ ಪಡೆದವರು ತುಂಬಾ ಸುರಕ್ಷಿತವಾಗಿ ವಿದೇಶಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ದಿನನಿತ್ಯ ಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಸಿದ್ಧಾಂತವಾದಿಗಳು, ಮಠ ಮಾನ್ಯಗಳ ಸ್ವಾಮೀಜಿಗಳು  ಒಂದಲ್ಲ ಒಂದು ಹಗರಣಗಳಲ್ಲಿ ಸಿಲುಕಿ ಕಳಂಕಿತರಾಗುತ್ತಿದ್ದಾರೆ. ಬಾಬಾಸಾಹೇಬರನ್ನು ಗೌರವಿಸಬೇಕಾದ ನ್ಯಾಯಾಧೀಶರೇ ಸುಳ್ಳುಕೋರರಂತೆ ವರ್ತಿಸುತ್ತಾ ಬಾಬಾಸಾಹೇಬರಿಗೆ ಅಪಮಾನ ಮಾಡುತ್ತಿದ್ದಾರೆ.  ಪ್ರಜಾಪ್ರಭುತ್ವ ವ್ಯವಸ್ಥೆ  ಕಗ್ಗೊಲೆಯಾಗುತ್ತಿದೆ.

ಮಾನವೀಯ ಮೌಲ್ಯವುಳ್ಳ, ಸಮಾನತೆಯ ಸ್ವಾರಸ್ಯವುಳ್ಳ  ಭಾರತದ ಸಂವಿಧಾನದ ಅಡಿಯಲ್ಲಿ ಜನರಿಂದ ಆಯ್ಕೆಯಾದ ನಮ್ಮ ನಾಯಕರು ಅದನ್ನು ಜಾರಿಮಾಡದಷ್ಟು  ಅಸಹಾಯಕರಾಗಿದ್ದಾರೆ. ಇಡೀ ಸಂವಿಧಾನವನ್ನೇ ವಿರೂಪಗೊಳಿಸಿ ನಿಷ್ಕ್ರಿಯಗೊಳಿಸಿ ದೇಶವನ್ನೇ ಒಂದು ರೋಗಗ್ರಸ್ಥ ಸಮಾಜವನ್ನಾಗಿ ಮಾಡಿದ್ದಾರೆ.  ಇಡೀ ಜಗತ್ತಿನಾದ್ಯಂತ ಸರಣಿ ಬಾಂಬುಗಳ ಶಬ್ದ ಕೇಳುತ್ತಿದ್ದು ದಿನೇ ದಿನೇ ಮಾನವೀಯತೆ ಕಳೆದುಕೊಂಡ ನಾಯಕರು ಹಸು ಗೂಸುಗಳನ್ನು ಬಿಡದೆ ಕಗ್ಗೊಲೆ ಮಾಡಲು ಹೊರಟಿವೆ. ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಜಾತಿಯ, ಧರ್ಮದ, ಲಿಂಗಗಳ ಆಧಾರದ ಮೇಲೆ ಸರ್ಕಾರ ರಚಿಸುವ ನಾಯಕರು ಹುಟ್ಟಿಕೊಂಡಿದ್ದಾರೆ. ಭಾರತ ಅವೈಜ್ಞಾನಿಕತೆ, ಅಜ್ಞಾನತೆಯಲ್ಲಿ 2 ನೇ ಸ್ಥಾನದಲ್ಲಿದೆ ಎಂದು  ಸಾಮಾಜಿಕ ಜಾಲ ತಾಣಗಳು ಸಾರಿ ಸಾರಿ ನಮ್ಮ ಮೂರ್ಖತನವನ್ನು ಬಿಂಬಿಸುತ್ತಿವೆ. ನಾವು ಯಾವುದೋ 4-ಅಥವಾ5  ಖಾಸಗೀ  ಕಂಪನಿಗಳ ಉದ್ದಿಮೆದಾರರ ಆದಾಯ ವ್ಯಯಗಳನ್ನು ಭಾರತದ ಎಲ್ಲಾ ಜನರ ಮಟ್ಟಕ್ಕೆ ಬಿಂಬಿಸಿ ಭಾರತ ಅಭಿವೃದ್ದಿಯಾಗುತ್ತಿದೆ ಎಂದು ಪುಂಖಾನುಪುಂಖವಾಗಿ ಭಾಷಣ ಮಾಡುತ್ತಿದ್ದೇವೆ.

ಇವಾಗ ಯೋಚಿಸಿ ನಮಗೆ ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿದೆಯಾ. ನಾವು ಅಮೃತ ಮಹೋತ್ಸವವನ್ನು ಆಚರಿಸಬೇಕಾ ,  ಇವೆಲ್ಲದರ ಯೋಚನೆ ನಿಮಗೆ ಬಿಟ್ಟಿದ್ದು, ಯಾವ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವ ಕೆಲಸ ನನ್ನದಲ್ಲ. ಯುವ ಜನತೆಯ ಕೈಗಳಿಗೆ ಉದ್ಯೋಗಕ್ಕಾಗಿ, ದೇಶವನ್ನು ಅವೈಜ್ಞಾನಿಕತೆಯಿಂದ ಹೊರತರಲು, ಕೋಮುಗಲಭೆಗಳಿಂದ ಬಿಡುಗಡೆಗೊಳಿಸಲು, ವೈಜ್ಞಾನಿಕವಾದ ಸತ್ಯಾಂಶಗಳನ್ನು ಜನರಿಗೆ ತಿಳಿಸಲು,  ಸಿದ್ದ ಮಾದರಿಯ ಶಿಕ್ಷಣ ಪದ್ದತಿಯನ್ನು ತೊರೆದು  ಆಧುನಿಕ ವೈಜ್ಞಾನಿಕ ಶಿಕ್ಷಣ ಕ್ರಮವನ್ನು ಜಾರಿಮಾಡಲು,  ಕರೋನ ಮಹಾಮಾರಿಯಿಂದ ತತ್ತರಿಸಿದ ದುಡಿಯುವ ಕೈಗಳು ಶೇಕಡಾ 50% ರಷ್ಟು  ಆರ್ಥಿಕ ಅಭದ್ರತೆಯಿಂದ ನರಳುತ್ತಿರುವುದನ್ನು ಬಿಡುಗಡೆಗೊಳಿಸಲು. ದಲಿತ ಶೋಷಿತ ಸಮುದಾಯವನ್ನು ಹಿಂದೂಗಳೆಂದು ನೆಪಮಾತ್ರಕ್ಕೆ ಹೇಳುವ ಸನಾತನಿಗಳು  ಇಂದಿಗೂ  ದಲಿತರನ್ನು ಶೋಷಿತರನ್ನು ಊರಿನ ಹೊರಗಡೆ ಇಟ್ಟು ನೋಡುತ್ತಿದೆ. ದೇಶದ ಪ್ರತಿಷ್ಠಿತ ಸಂಶೋಧನಾ ಕೇಂದ್ರಗಳಲ್ಲಿ ಇಂದಿಗೂ ದಲಿತರಿಗೆ ಅವಕಾಶ ನೀಡದ ಉದಾಹರಣೆಗಳಿವೆ.  ನಮ್ಮ ಮುಂದಿರುವ ಗುರಿಯೇ ದಲಿತರರಿಗೆ ಸಿಗುತ್ತಿರುವ ಸರ್ಕಾರಿ ಸವಲತ್ತುಗಳನ್ನು ಕಡಿತಗೊಳಿಸುವುದು. ಮುಸಲ್ಮಾನರನ್ನು ದೇಶ ಬಿಟ್ಟು ಓಡಿಸುವುದು, ಹಾಗೂ ಸಂವಿಧಾನದ ಬದಲಾವಣೆ ಮಾಡುವುದು, ಎನ್ನುವ ಕೂಗುಗಳು ದಿನನಿತ್ಯ ಪಟ್ಟಭದ್ರ ಹಿತಾಶಕ್ತಿಗಳ ನಾಯಕರಿಂದ ಕೇಳಿಬರುತ್ತಿವೆ. ಇಂತಹ ವ್ಯವಸ್ಥೆಯಿಂದ ಯುವ ಪೀಳಿಗೆಯನ್ನು ಹೊರತರಲು   ನಾವುಗಳು ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜಾಗಬೇಕಿದೆ. ಮುಂದುವರೆದಂತೆ  ಸಮಾನತೆಗಾಗಿ  ಮತ್ತೆ  ಹೋರಾಟಕ್ಕೆ ಅಣಿಯಾಗಬೇಕಿದೆ….. !!!!!!!!

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ