ಸಾಲವಸೂಲಿ ನೆಪದಲ್ಲಿ ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ, ಬಾಯಿಗೆ ಮೂತ್ರ ಮಾಡಿದ ಪಾಪಿಗಳು! - Mahanayaka

ಸಾಲವಸೂಲಿ ನೆಪದಲ್ಲಿ ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ, ಬಾಯಿಗೆ ಮೂತ್ರ ಮಾಡಿದ ಪಾಪಿಗಳು!

crime news
25/09/2023

ಪಾಟ್ನಾ: ಸಾಲ ವಸೂಲಿಯ ನೆಪದಲ್ಲಿ ದಲಿತ ಮಹಿಳೆಯನ್ನು ಥಳಿಸಿ ವಿವಸ್ತ್ರಗೊಳಿಸಿ, ಬಾಯಿಗೆ ಮೂತ್ರ ವಿಸರ್ಜನೆ ಮಾಡಿರುವ ಅನಾಗರಿಕ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪಾಟ್ನಾದ ಖುಸ್ರುಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಅಮಾನವೀಯ ಘಟನೆ ಶನಿವಾರ ರಾತ್ರಿ ನಡೆದಿದ್ದು, ಕೃತ್ಯದ ಬಳಿಕ ಆರೋಪಿಗಳು  ತಲೆಮರೆಸಿಕೊಂಡಿದ್ದಾರೆ.

ಪ್ರಮೋದ್ ಸಿಂಗ್ ಎಂಬಾತನಿಂದ ನೊಂದ ಮಹಿಳೆಯ ಪತಿ 1,500 ರೂಪಾಯಿ ಸಾಲವಾಗಿ ಪಡೆದಿದ್ದು, ಈ ಸಾಲವನ್ನು ಬಡ್ಡಿ ಸಮೇತ ಹಿಂದಿರುಗಿಸಿದ್ದರು. ಆದ್ರೆ, ಸಾಲ ತೀರಿಸಿದರೂ ಹೆಚ್ಚಿನ ಹಣ ನೀಡಬೇಕು ಎಂದು ಪ್ರಮೋದ್ ಸಿಂಗ್ ಪೀಡಿಸುತ್ತಿದ್ದ. ಅಲ್ಲದೇ ಹೆಚ್ಚಿನ ಹಣ ನೀಡದೇ ಹೋದರೆ, ಗ್ರಾಮದಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡುವುದಾಗಿಯೂ ಫೋನ್ ಮಾಡಿ ಆತ ಬೆದರಿಸಿದ್ದ.

ಆರೋಪಿ ಪ್ರಮೋದ್ ಸಿಂಗ್ ಮತ್ತು ಆತನ ಮಗ ಅಂಶು ಸಿಂಗ್  ಶನಿವಾರ ರಾತ್ರಿ ನೊಂದ ಮಹಿಳೆಯ ಮನೆಗೆ ಬಂದು ಮಹಿಳೆಯನ್ನು ಬಲವಂತವಾಗಿ ಎಳೆದೊಯ್ದಿದ್ದು, ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಲ್ಲದೇ, ಪ್ರಮೋದ್ ಸಿಂಗ್ ತನ್ನ ಮಗ ಅಂಶು ಸಿಂಗ್   ಬಳಿಯಲ್ಲಿ ಮಹಿಳೆಯ ಬಾಯಿಗೆ ಮೂತ್ರ ಮಾಡಿಸಿದ್ದಾನೆ. ಆದ್ರೆ, ಮಹಿಳೆ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ದಾಖಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಾಲ ತೀರಿದ್ದರೂ ಮತ್ತೆ ಮತ್ತೆ ನಮ್ಮನ್ನು ಪೀಡಿಸಲಾಗುತ್ತಿದೆ ಎಂದು ಮಹಿಳೆ ಘಟನೆಗೂ ಮೊದಲು ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಕ್ರೋಧಗೊಂಡಿದ್ದ ಪಾಪಿಗಳು, ಅದೇ ದಿನ ರಾತ್ರಿ ಈ ದುಷ್ಕೃತ್ಯ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ