ಸಂವಿಧಾನದ ಬಗ್ಗೆ ಕೆಲವರಿಗೆ ಗೌರವವಿಲ್ಲ ಅದಕ್ಕೆ ಜನರ ದಾರಿ ತಪ್ಪಿಸುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಜಾತ್ಯಾತೀತತೆ, ಸಮಾನತೆ, ಭ್ರಾತೃತ್ವ ತತ್ವಗಳೇ ಸಂವಿಧಾನದ ತಳಹದಿ. ಈ ಸಿದ್ಧಾಂತಗಳಿಗೆ ಧಕ್ಕೆ ತರುವ ಪ್ರಯತ್ನಗಳನ್ನು ವಿಫಲಗೊಳಿಸಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಇದಕ್ಕೆ ಯಾವ ಪಕ್ಷ, ಗುಂಪು ಇಲ್ಲ. ಸಂವಿಧಾನ ಈ ದೇಶದ ಎಲ್ಲಾ ಜನರಿಗೆ ಸಲ್ಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಭಾರತ ಸಂವಿಧಾನ ಹಾಗೂ ಅಂತಾರಾಷ್ಟ್ರೀಯ ಐಕ್ಯತಾ ಸಮಾವೇಶಕ್ಕೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನ ಜಾರಿಗೆ ಬಂದು 75ನೇ ವರ್ಷಕ್ಕೆ ಕಾಲಿಟ್ಟಿದೆ. 75ನೇ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದ್ದು, ಕರ್ನಾಟಕದಾದ್ಯಂತ 31 ಜಿಲ್ಲೆಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಜನವರಿ 26 ರಿಂದ ಫೆ. 23ರವರೆಗೆ ಹಮ್ಮಿಕೊಳ್ಳಲಾಗಿದೆ. ಫೆ. 24-25 ಎರಡು ದಿನಗಳು ರಾಷ್ಟ್ರೀಯ ಏಕತಾ ಸಮಾವೇಶ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಹೆಸರಾಂತ ಭಾಷಣಕಾರರು, ಖ್ಯಾತ ಚಿಂತಕರಾದ ಪ್ರೊ: ಅಶುತೋಶ್ ವರ್ಶನಿ ಹಾಗೂ ಡಾ: ಗಣೇಶ್ ದೇವಿ, ಪ್ರೊ. ಜಯಂತಿ ಘೋಷ್, ಪ್ರೊ. ಸುಖದೇವ್ ಥೋರಟ್, ಪ್ರೊ, ಕಾಂಚಾ, ಪ್ರಶಾಂತ್ ಭೂಷಣ್, ಬಿಜುವಾಡ ವಿಲ್ಸನ್, ಮೇಧಾ ಪಾಟ್ಕರ್ ಮುಂತಾದ ಅನೇಕ ಚಿಂತಕರು ಮೇಧಾವಿಗಳು ಈ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ. ದೇಶದ ಸಮಸ್ಯೆಗಳು, ಜನರ ಬವಣೆಗಳು, ಸಂವಿಧಾನದಲ್ಲಿ ಅದಕ್ಕೆ ಪರಿಹಾರಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. 24 ರಂದು ಉದ್ಘಾಟನೆ ನಡೆದು 25 ರಂದು ಬೃಹತ್ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು.
ಜಾಥಾ ಯಶಸ್ವಿಯಾಗಿ ನಡೆಯುತ್ತಿದೆ. ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸಲಾಗುತ್ತಿದೆ. ಸಂವಿಧಾನ ರಚನೆಯಾದ ನಂತರ ಮೊದಲನೇ ಬಾರಿಗೆ ಬಜೆಟ್ ಪುಸ್ತಕದ ಮುಖಪುಟದಲ್ಲಿ ಪೀಠಿಕೆಯನ್ನು ಮುದ್ರಿಸಲಾಗಿದೆ ಎಂದರು.
ದೇಶದ ಜನರಿಗೆ ಸಂವಿಧಾನ ನಮಗೇನು ಕೊಟ್ಟಿದೆ ಎನ್ನುವುದನ್ನು ತಿಳಿಯಬೇಕು. ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮಂತ್ರಗಳನ್ನು ನೀಡಿದ್ದಾರೆ. ಹೋರಾಟ ಇಲ್ಲದೆ ಸಂವಿಧಾನದಲ್ಲಿ ಹೇಳಿರುವ ಅನೇಕ ಹಕ್ಕುಗಳು ನಮಗೆ ದಕ್ಕುತ್ತಿರಲಿಲ್ಲ. ಸ್ವಾತಂತ್ರ್ಯ ಬಂದು 77 ವರ್ಷಗಳಾಯಿತು. ಸಂವಿಧಾನ ಜಾರಿಯಾಗಿ 75 ನೇ ವರ್ಷವಾದರೂ ಎಲ್ಲರಿಗೂ ಎಲ್ಲ ಹಕ್ಕುಗಳು ಸಿಕ್ಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಂವಿಧಾನ ಜಾರಿ ಬಂದ ಸಂದರ್ಭದಲ್ಲಿ ವೈರುಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ ಎಂದು ಅಂಬೇಡ್ಕರ್ ಹೇಳಿದ್ದರು. ದೇಶದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಅಸಮಾನತೆ ಇದೆ. ಇಷ್ಟು ವರ್ಷಗಳಾದರೂ ಅಸಮಾನತೆ ನಮ್ಮ ದೇಶದಿಂದ ಹೋಗಿಲ್ಲ. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಆರ್ಥಿಕ, ಸಾಮಾಜಿಕ, ಸಮಾನತೆಯನ್ನು ಸಂವಿಧಾನ ಕೊಟ್ಟಿದ್ದರೂ ನಮಗ್ಯಾಕೆ ಸಿಕ್ಕಿಲ್ಲ ಎಂಬ ಜಾಗೃತಿ ಮೂಡಬೇಕು. ಕೊಟ್ಟಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳಬಾರದು. ಅದಕ್ಕಾಗಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ದೇಶದಲ್ಲಿ ಕಾನೂನಿನ ಅರಿವು ಕಡಿಮೆಯಿದೆ. ಬಹಳ ಜನರು ಸಂವಿಧಾನದ ಬಗ್ಗೆ ತಿಳಿದಿಲ್ಲ. ದೇಶದ ಪ್ರತಿ ನಾಗರಿಕನಿಗೂ ನಮ್ಮ ಸಂವಿಧಾನದ ಬಗ್ಗೆ ತಿಳಿದಿರಬೇಕು. ಸಂವಿಧಾನ ನೀಡಿರುವ ಹಕ್ಕುಗಳು, ಅವುಗಳು ಸರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆಯೇ ಎಂದು ಎಲ್ಲರಿಗೂ ತಿಳಿಯುವ ಸಲುವಾಗಿ ಸಮಾವೇಶವನ್ನು ಆಯೋಜಿಸಲಾಗಿದೆ. ಸಂವಿಧಾನದಲ್ಲಿ ಕೆಲವರಿಗೆ ನಂಬಿಕೆ, ಗೌರವವಿಲ್ಲ. ಆದ್ದರಿಂದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕಾದ್ದು ಸರ್ಕಾರಗಳ ಕರ್ತವ್ಯ. ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಸಂವಿಧಾನ ತಿಳಿಸುತ್ತದೆ, ಆದರೆ ಅದು ಪಾಲನೆಯಾಗುತ್ತಿದೆಯೇ? ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನಿಜವಾಗಲೂ ಆಗುತ್ತಿದೆಯೇ? ಸಾಮಾಜಿಕ ನ್ಯಾಯ ಮತ್ತು ಅವಕಾಶಗಳನ್ನು ಪಡೆಯಲು, ಜನರಲ್ಲಿ ಜಾಗೃತಿ ಮೂಡಿಸಲು ಫೆಬ್ರವರಿ 24 ಮತ್ತು 25 ರಂದು ಎರಡು ದಿನ ಭಾರತ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಿಎಂ ಹೇಳಿದರು.
ಸಂವಿಧಾನ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ಬದ್ಧತೆ ಹಾಗೂ ಸ್ಪಷ್ಟತೆ ಇದ್ದರೆ, ಯಾರು ನಮ್ಮನ್ನು ದಾರಿತಪ್ಪಿಸಲು ಸಾಧ್ಯವಿಲ್ಲ. ಸುಮಾರು 78% ರಷ್ಟು ಜನರು ಶಿಕ್ಷಣ ಪಡೆದಿದ್ದಾರೆ. ವಿದ್ಯಾವಂತರು ಇಂದಿಗೂ ಮೌಢ್ಯ ಕಂದಾಚಾರವನ್ನು ನಂಬುತ್ತಿದ್ದಾರೆ. ನಮ್ಮಲ್ಲಿ ವೈಚಾರಿಕತೆಯ ಬಗ್ಗೆ ಜ್ಞಾನವಿಲ್ಲ. ಸರಿತಪ್ಪುಗಳ ಬಗ್ಗೆ ಅರಿಯಲೆಂದೇ ಶಿಕ್ಷಣ ಪಡೆಯುವುದು ಎಂದು ಅವರು ತಿಳಿಸಿದರು.