ಕೌಟುಂಬಿಕ ದೌರ್ಜನ್ಯದ ಸಂತ್ರಸ್ತರು ನಿರಂತರ ಭೀತಿಯಲ್ಲಿ - Mahanayaka
12:16 PM Thursday 12 - December 2024

ಕೌಟುಂಬಿಕ ದೌರ್ಜನ್ಯದ ಸಂತ್ರಸ್ತರು ನಿರಂತರ ಭೀತಿಯಲ್ಲಿ

domestic violence
13/12/2022

ದೌರ್ಜನ್ಯದ ಅನುಭವಗಳನ್ನು ಹಂಚಿಕೊಳ್ಳುವ ಮಹಿಳೆಯರು ಭೀತಿ ಮತ್ತು ಅಸಮಾಧಾನವನ್ನು ಎದುರಿಸುತ್ತಲೇ ಇದ್ದಾರೆ

ಮೂಲ : Still a Nightmare for domestic violence survivors –
ದ ಹಿಂದೂ 29-11-2022
ಫಿಲಿಪ್ಪಾ ವಿಲಿಯಮ್ಸ್‌, ಸ್ವರ್ಣ ರಾಜಗೋಪಾಲನ್,
ಗಿರಿಜಾ ಗೋಡ್ಬೋಲೆ, ರುಚಿತಾ ಗೋಸ್ವಾಮಿ

  • ಅನುವಾದ : ನಾ ದಿವಾಕರ

ನವಂಬರ್‌ 25ರಂದು ಜಗತ್ತಿನಾದ್ಯಂತ ʼ ಮಹಿಳೆಯರ ವಿರುದ್ಧ ಎಲ್ಲ ಸ್ವರೂಪದ ದೌರ್ಜನ್ಯಗಳ ನಿರ್ಮೂಲನಾ ಅಂತಾರಾಷ್ಟ್ರೀಯ ದಿನʼ ಆಚರಿಸಲಾಯಿತು. ಇದೇ ವೇಳೆ ದೆಹಲಿಯಲ್ಲಿ ಓರ್ವ ಯುವ ಮಹಿಳೆಯ ಬರ್ಬರ ಹತ್ಯೆ ಮತ್ತು ಮೃತ ದೇಹವನ್ನು ತುಂಡರಿಸಿರುವ ಘಟನೆ ಆಪ್ತ ಸಂಗಾತಿಯ ದೌರ್ಜನ್ಯದ ಬಗ್ಗೆ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಆಪ್ತ ಸಂಗಾತಿಯ ದೌರ್ಜನ್ಯವನ್ನೂ ಸಹ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆ 2005 (PWDVA)ಯ ಅಡಿ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಚರ್ಚೆಯಲ್ಲಿ ಹಲವು ಪ್ರಶ್ನೆಗಳು ಉದ್ಭವಿಸುತ್ತಿವೆ. ಆಕೆ ಅವನನ್ನು ಏಕೆ ಆಯ್ಕೆ ಮಾಡಿಕೊಂಡಳು ? ಏಕೆ ಆತನನ್ನು ತೊರೆದು ಹೋಗಲಿಲ್ಲ ? ಈ ಪ್ರಶ್ನೆಗಳ ನಡುವೆಯೇ, ನೆರವು ಬಯಸುವ ಆಕೆಯ ಪ್ರಯತ್ನಗಳ ಬಗ್ಗೆ ಸಾಕ್ಷ್ಯಾಧಾರಗಳು ದೊರೆಯುತ್ತಿರುವಂತೆಯೇ, ಈ ಪ್ರಯತ್ನಗಳು ಏಕೆ ಫಲ ನೀಡಿಲ್ಲ ಎಂಬ ಪ್ರಶ್ನೆಯೂ ನಮ್ಮನ್ನು ಕಾಡಬೇಕಿದೆ.

ಭಾರತದ ಕಾನೂನಿನ ಅಡಿ ಕೌಟುಂಬಿಕ ದೌರ್ಜನ್ಯ ಶಿಕ್ಷಾರ್ಹ ಅಪರಾಧವಾಗಿದೆ. ಇದನ್ನು ಮಾನವ ಹಕ್ಕು ಉಲ್ಲಂಘನೆ ಎಂದೇ ಪರಿಗಣಿಸಲಾಗುತ್ತದೆ. ಆದರೂ ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (2019-21) ಭಿನ್ನ ಚಿತ್ರಣವನ್ನೇ ನೀಡುತ್ತದೆ. ಈ ಸಮೀಕ್ಷೆಯನ್ನು ಗಮನಿಸಿದರೆ ಮಹಿಳೆಯರ ವಿರುದ್ಧ ದೌರ್ಜನ್ಯಗಳು ನಿರಂತರವಾಗಿರುವ ಸಮಾಜದಲ್ಲೇ ನಾವಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತದೆ. ಸಮೀಕ್ಷೆಯ ಅನುಸಾರ 18 ರಿಂದ 49 ವಯೋಮಾನದ ಶೇ 32ರಷ್ಟು ವಿವಾಹಿತ ಮಹಿಳೆಯರು ಭಾವನಾತ್ಮಕ, ದೈಹಿಕ, ಲೈಂಗಿಕ ದೌರ್ಜನ್ಯವನ್ನು ಅವರ ಸಂಗಾತಿಯಿಂದಲೇ ಅನುಭವಿಸಿದ್ದಾರೆ. ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶದ ಮಹಿಳೆಯರು ಹೆಚ್ಚಿನ ಪ್ರಮಾಣದ ಕೌಟುಂಬಿಕ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಈ ಸಮೀಕ್ಷೆಯಲ್ಲಿ, ಕುಟುಂಬದ ಇತರ ಸದಸ್ಯರಿಂದ ನಡೆಯುವ ದೌರ್ಜನ್ಯಗಳನ್ನು ದಾಖಲಿಸಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ.

17 ವರ್ಷಗಳ ಹಿಂದೆ ಪುರೋಗಾಮಿ ಲಕ್ಷಣದ PWDVA ಕಾಯ್ದೆಯನ್ನು ಜಾರಿಗೊಳಿಸಿದಾಗ ಒಂದು ಆಶಾಭಾವನೆ ಮೂಡಿತ್ತು. ನಾಗರಿಕ ಹಾಗೂ ಕ್ರಿಮಿನಲ್‌ ರಕ್ಷಣಾ ವ್ಯವಸ್ಥೆಯನ್ನು ಜಂಟಿಯಾಗಿ ಒದಗಿಸುವ ಮೂಲಕ ಮಹಿಳೆಯರಿಗೆ ಅವರ ಕುಟುಂಬಗಳಲ್ಲಿ ಮಾತ್ರವೇ ಅಲ್ಲದೆ ಗಂಡಂದಿರ ದೌರ್ಜನ್ಯದಿಂದಲೂ ರಕ್ಷಣೆ ನೀಡುವ ಭರವಸೆಯನ್ನು ಈ ಕಾಯ್ದೆ ಮೂಡಿಸಿತ್ತು. ಆದರೆ ಗ್ರಾಂಥಿಕವಾಗಿ ಈ ಕಾಯ್ದೆ ಜಾರಿಯಲ್ಲಿದ್ದರೂ ಆಚರಣೆಯ ಮಟ್ಟದಲ್ಲಿ ಮಹಿಳೆಯರಿಗೆ ಈ ಕಾನೂನನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಯ್ದೆಯ ಭರವಸೆಗಳು ಮತ್ತು ನಿಯಮಗಳು ಸಮರ್ಪಕವಾಗಿ ಅನುಷ್ಟಾನವಾಗದಿರುವುದು ಒಂದು ಕಾರಣವಾದರೆ, ದೇಶದ ಬಹುಪಾಲು ಮಹಿಳೆಯರಿಗೆ ಈ ಕಾಯ್ದೆ ಅಲಭ್ಯವಾಗಿದ್ದು, ತಲುಪಲಾರದಂತಾಗಿದೆ.

ನಿರಾಶಾದಾಯಕ ವಾಸ್ತವ ಎಂದರೆ ದೇಶದಲ್ಲಿ ಮೂರನೆ ಒಂದರಷ್ಟು ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೊಳಗಾಗುತ್ತಿದ್ದರೂ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (2019-21) ವರದಿ ಮಾಡಿರುವಂತೆ, ಕೇವಲ ಶೇ 14ರಷ್ಟು ಸಂತ್ರಸ್ತ ಮಹಿಳೆಯರು ಮಾತ್ರ ನೆರವು ಕೋರಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಖ್ಯೆ ಇನ್ನೂ ಕಡಿಮೆ ಇದೆ. ಕೌಟುಂಬಿಕ ದೌರ್ಜನ್ಯ ಒಂದು ಶಿಕ್ಷಾರ್ಹ ಅಪರಾಧ ಆಗಿರುವ ದೇಶದಲ್ಲಿ, ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸುವಂತಹ ಹಲವಾರು ಕಾಯ್ದೆ ಕಾನೂನುಗಳು ಜಾರಿಯಲ್ಲಿದ್ದಾಗಲೂ , ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರು ಏಕೆ ನೆರವು ಕೋರುತ್ತಿಲ್ಲ ?

ಪ್ರಶ್ನೆಗಳು ಮತ್ತು ಪ್ರತಿಕ್ರಿಯೆಗಳು

ಮಹಾರಾಷ್ಟ್ರ, ಪಶ್ಚಿಮ ಬಂಗಾಲ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನಾವು ಕೈಗೊಂಡ ಸಂಶೋಧನೆಯಲ್ಲಿ , ಮಹಿಳೆಯರು ತಮ್ಮ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ಹಂಚಿಕೊಳ್ಳುವಾಗ, ವರದಿ ಮಾಡುವಾಗ, ದೂರು ದಾಖಲಿಸುವಾಗ ಅವರು ಎದುರಿಸುವ ನಿತ್ಯ ಜೀವನದ ವಾಸ್ತವಗಳು, ಅಡ್ಡಿ ಅತಂಕಗಳು, ಪೂರ್ವಗ್ರಹಗಳು ಮತ್ತು ಅಪಾರ ಭೀತಿಯ ವಾತಾವರಣ ಇವೆಲ್ಲವನ್ನೂ ದಾಖಲಿಸಿದ್ದೇವೆ. ತನ್ಮೂಲಕ ನೆರವು ಕೋರುವ ಪ್ರಕ್ರಿಯೆಯಲ್ಲಿರುವ ತೊಡಕುಗಳನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ. ಕೆಲವು ಸರಳವಾದ, ಅರ್ಥಪೂರ್ಣ ಪ್ರಶ್ನೆಗಳನ್ನು ಸಂತ್ರಸ್ತ ಮಹಿಳೆಯರ ಮುಂದಿಡಲಾಗಿದೆ. ಉದಾಹರಣೆಗೆ, ನೀವೇಕೆ ಮೊದಲೇ ಸಂಬಂಧ ತೊರೆಯಲಿಲ್ಲ ? ದೌರ್ಜನ್ಯದ ಬಗ್ಗೆ ಮೊದಲೇ ಇತರರಿಗೆ ಏಕೆ ತಿಳಿಸಲಿಲ್ಲ ? ಇಂತಹ ಸರಳ ಪ್ರಶ್ನೆಗಳಿಗೆ ದೊರೆಯುವ ಉತ್ತರಗಳು ಸಂಕೀರ್ಣವಾಗಿದ್ದು ವೈರುಧ್ಯಗಳಿಂದಲೂ ಕೂಡಿರುತ್ತವೆ.

ʼಪರಿಸ್ಥಿತಿಗಳು ಬದಲಾಗುತ್ತವೆʼ, ʼತಮ್ಮ ಗಂಡಂದಿರ ವರ್ತನೆ ಬದಲಾವಣೆಯಾಗುತ್ತದೆʼ, ʼಅವರು ತಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆʼ ಇಂತಹ ವಿಶ್ವಾಸ ಮಹಿಳೆಯರಲ್ಲಿ ಕಾಣುತ್ತವೆ. ಕುತೂಹಲಕಾರಿ ಸಂಗತಿ ಎಂದರೆ ಮಹಿಳೆಯರು ಮತ್ತೊಬ್ಬರಿಗೆ ಹೊರೆ ಆಗಲು, ಅದರಲ್ಲೂ ಕುಟುಂಬಕ್ಕೆ ಹೊರೆ ಆಗಲು ಬಯಸುವುದಿಲ್ಲ. “ ನನ್ನ ತಾಯಿಗೆ ಸಾಕಷ್ಟು ಚಿಂತೆಗಳಿವೆ. ಅವರದೇ ಆದ ಬದುಕು ಇದೆ. ಅವರ ಚಿಂತೆಗಳಿಗೆ ನನ್ನ ಚಿಂತೆಗಳನ್ನೂ ಸೇರಿಸಲು ನನಗೆ ಇಷ್ಟವಿಲ್ಲ ” ಎಂದು ಹೇಳುವವರ ಸಂಖ್ಯೆ ಹೇರಳವಾಗಿದೆ. ಅವರು ಅನುಭವಿಸಿದಂತಹ ದೌರ್ಜನ್ಯದ ಸ್ವರೂಪವನ್ನು ಹೇಳಿಕೊಳ್ಳುವುದರ ಮೂಲಕ ತಾವು ತಮ್ಮ ಕುಟುಂಬದಲ್ಲಿ ಆತಂಕಗಳನ್ನು ಹೆಚ್ಚಿಸುತ್ತೇವೆ, ತಮ್ಮ ಕುಟುಂಬದ ಗೌರವಕ್ಕೆ ಚ್ಯುತಿ ತರುತ್ತೇವೆ, ನಾಚಿಕೆಗೀಡುಮಾಡುತ್ತೇವೆ ಎಂದು ಯೋಚಿಸುವ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದ್ದು ಶೈಕ್ಷಣಿಕ ಮಟ್ಟ, ಜಾತಿ, ವರ್ಗಗಳ ಎಲ್ಲೆ ಮೀರಿ ಈ ವಿದ್ಯಮಾನವನ್ನು ಗಮನಿಸಬಹುದು. ವಲಸೆ ಹೋಗುವ ಮಹಿಳೆಯರಿಗೆ, ಹಲವು ಸೋದರಿಯನ್ನು ಹೊಂದಿರುವವರಿಗೆ, ಅನಾರೋಗ್ಯ ಪೀಡಿತ ಅಥವಾ ವಯಸ್ಸಾದ ಪೋಷಕರು ಇರುವ ಮಹಿಳೆಯರಿಗೆ ತಾವು ಎದುರಿಸುವ ದೌರ್ಜನ್ಯಗಳು ಎಷ್ಟೇ ಕ್ರೂರವಾಗಿದ್ದರೂ ಅದನ್ನು ನಿಭಾಯಿಸುವುದು, ನಿರ್ವಹಿಸುವುದು ತಮ್ಮ ವ್ಯಕ್ತಿಗತ ಜವಾಬ್ದಾರಿ ಎಂದೇ ಭಾಸವಾಗುತ್ತದೆ.

ನೆರವು ಕೋರುವ ಬಗ್ಗೆ

ನೆರವು ಕೋರುವ ಪ್ರಶ್ನೆ ಎದುರಾದಾಗ ನಮಗೆ ಎರಡು ವಿಧದ ಮಹಿಳೆಯರು ಕಂಡುಬಂದಿದ್ದಾರೆ. ದೌರ್ಜನ್ಯ ನಡೆದ ಆರು ತಿಂಗಳ ಒಳಗೇ ತಮ್ಮ ಅನುಭವವನ್ನು ಹಂಚಿಕೊಳ್ಳುವವರು ಮತ್ತು ಘಟನೆ ನಡೆದ ಐದಾರು ವರ್ಷಗಳ ನಂತರ ಹಂಚಿಕೊಳ್ಳುವವರು. ಮೊದಲನೆ ಗುಂಪಿಗೆ ಸೇರಿದ ಮಹಿಳೆಯರು ಸಾಮಾನ್ಯವಾಗಿ ತಮ್ಮ ಪೋಷಕರ ಮೊರೆ ಹೋಗುತ್ತಾರೆ ಆದರೆ ಇಂತಹ ಪೋಷಕರು ಕುಟುಂಬದ ವಾತಾವರಣವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ, ತಮ್ಮ ಹೆಣ್ಣು ಮಕ್ಕಳಿಗೆ ಹೊಂದಿಕೊಂಡು ಹೋಗುವಂತೆಯೋ ಅಥವಾ ಅವರ ಗಂಡಂದಿರ-ಕುಟುಂಬದ ಅವಶ್ಯಕತೆಗಳನ್ನು ಇನ್ನೂ ಸಮರ್ಪಕವಾಗಿ ಪೂರೈಸುವಂತೆಯೂ ಸಲಹೆ ನೀಡುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಹೀಗಾಗುತ್ತವೆ. ಕೆಲವೇ ಪ್ರಸಂಗಗಳಲ್ಲಿ ಹೆಣ್ಣು ಮಕ್ಕಳ ಯೋಗಕ್ಷೇಮಕ್ಕೆ ಆದ್ಯತೆ ನೀಡಿ, ಕುಟುಂಬದ ಹಿತಾಸಕ್ತಿಗಳನ್ನು ಬದಿಗೊತ್ತಿ, ಮಧ್ಯಸ್ಥಿಕೆ ವಹಿಸಿ ಪರಿಹರಿಸುವ ಯತ್ನಗಳು ನಡೆಯುತ್ತವೆ ಅಥವಾ ಸಂಬಂಧವನ್ನು ತೊರೆಯಲಾಗುತ್ತದೆ. ಪೊಲೀಸ್‌ ಅಥವಾ ವಕೀಲರನ್ನು ಸಂಪರ್ಕಿಸುವ ಪ್ರಸಂಗಗಳ ಸಂಖ್ಯೆ ಇನ್ನೂ ಕಡಿಮೆ ಇದೆ.

ನೆರವು ಕೋರಲು ತಡ ಮಾಡುವ ಸಂತ್ರಸ್ತರಿಗೆ ದೌರ್ಜನ್ಯವನ್ನು ಪ್ರತ್ಯಕ್ಷವಾಗಿ ಕಂಡಂತಹ ಸಂಬಂಧಿಕರು ಅಥವಾ ನೆರೆಹೊರೆಯವರು ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಬಹುಮಟ್ಟಿಗೆ ಸಹಾಯಕವಾಗುತ್ತಾರೆ. ಹಾಗೆಯೇ ಸಂತ್ರಸ್ತರಲ್ಲಿ ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಇರುವ ಆತಂಕಗಳು, ಪತಿಯ ವಿವಾಹೇತರ ಸಂಬಂಧಗಳ ಬಗ್ಗೆ ಮಾಹಿತಿ ದೊರೆಯುವುದು, ದೌರ್ಜನ್ಯವು ಅತಿರೇಕಕ್ಕೆ ಹೋಗಿ ವೈದ್ಯಕೀಯ ನೆರವು ಅನಿವಾರ್ಯವಾಗುವುದು, ಇಂತಹ ಕೆಲವು ಅಂಶಗಳೂ ಸಹ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ನೆರವಾಗುತ್ತವೆ ಹಣಕಾಸು ಅಭದ್ರತೆಯ ಕಾರಣಗಳಿಂದ, ಆಸ್ತಿ ಒಡೆತನಕ್ಕೆ ಸಂಬಂಧಿಸಿದಂತೆ ಪಿತೃ ಪ್ರಧಾನ ನಿಯಮಗಳಿಂದ ಸಂಬಂಧವನ್ನು ತೊರೆಯುವ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳಲು ಹೆಣಗಾಡುವ ಸಂತ್ರಸ್ತರು ಈ ರೀತಿಯ ನೆರವುಗಳನ್ನು ಕೋರಲು ವಿಳಂಬ ಮಾಡುವುದು ಕಂಡುಬರುತ್ತದೆ.

ನಮ್ಮ ಸಮಾಜದಲ್ಲಿ ಲಿಂಗ ಅಸಮಾನತೆಯ ಸಾಮಾಜಿಕ ಕಟ್ಟುಪಾಡುಗಳು ಎಷ್ಟು ಬೇರೂರಿವೆ ಎಂದರೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ರ ದತ್ತಾಂಶಗಳಲ್ಲಿ ವರದಿ ಮಾಡಿರುವಂತೆ, ಅನೇಕ ಸಂದರ್ಭಗಳಲ್ಲಿ ಹೆಂಡತಿಯನ್ನು ಗಂಡನಾದವನು ಹೊಡೆಯುವ ಅಥವಾ ಥಳಿಸುವ ಪ್ರಕರಣಗಳಲ್ಲಿ ಪುರುಷರಿಗಿಂತಲೂ ಮಹಿಳೆಯರೇ ಅದನ್ನು ಹೆಚ್ಚು ಸ್ವೀಕೃತ ಎಂದು ಭಾವಿಸುತ್ತಾರೆ. ಒಂದು ಸಂದರ್ಶನದಲ್ಲಿ ಸಂತ್ರಸ್ತೆಯು “ ನಾವು ಇರುವ ಪರಿಸ್ಥಿತಿಯಲ್ಲಿ, ನಮ್ಮ ನೋವುಗಳ ಬಗ್ಗೆ ದೂರು ದಾಖಲಿಸುವುದು ಬಹಳ ಕಷ್ಟಕರ ” ಎಂದು ಹೇಳುತ್ತಾರೆ. ತಮ್ಮ ಸಂಬಂಧಿಕರಲ್ಲಿ, ಬಂಧು ಬಾಂಧವರಲ್ಲಿ, ಸ್ನೇಹಿತರಲ್ಲಿ ತಾವು ಅನುಭವಿಸಿದ ಕೌಟುಂಬಿಕ ದೌರ್ಜನ್ಯವನ್ನು ಹೇಳಿಕೊಂಡಂತಹ ಸಂತ್ರಸ್ತೆಯರು ಒಂದು ರೀತಿಯ ನೆಮ್ಮದಿಯನ್ನು ಕಾಣುವುದೇ ಅಲ್ಲದೆ ತಮ್ಮ ಮೇಲಿನ ಹೊರೆಯನ್ನು ಕಳಚಿಕೊಂಡು ಭವಿಷ್ಯದಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂಬ ಭರವಸೆಯನ್ನು ತಾಳುತ್ತಾರೆ.

ದೌರ್ಜನ್ಯದ ಅನುಭವವನ್ನು ಹಂಚಿಕೊಳ್ಳುವುದು ಮಹಿಳೆಯರ ಪಾಲಿಗೆ ಒಂದು ದಿಟ್ಟ ಹೆಜ್ಜೆಯಾಗಿರುತ್ತದೆ. ಆದರೆ ಹಿಂಸಾತ್ಮಕ ಕೌಟುಂಬಿಕ ದೌರ್ಜನ್ಯದ ಅನುಭವಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಒದಗಿಸುವಂತಹ ನೆರವು ಮತ್ತು ಸಹಾಯಕ ಸೇವೆಗಳು ಸಂತ್ರಸ್ತೆಯರ ಪಾಲಿಗೆ ಭಾವುಕತೆ, ಭರವಸೆಗಳು, ಅನಿಶ್ಚಿತತೆ, ಭೀತಿ ಮತ್ತು ಅಸಮಾಧಾನಗಳನ್ನೊಳಗೊಂಡ ಪ್ರಯಾಸಕರ ಮಾರ್ಗವಾಗಿಯೇ ಕಾಣುತ್ತದೆ. ದೇಶವ್ಯಾಪಿಯಾಗಿ ಕೆಲವೇ ಸುರಕ್ಷತಾ ವಸತಿಗೃಹಗಳು ಇರುವುದರಿಂದ ಅಸಂಖ್ಯಾತ ಮಹಿಳೆಯರಿಗೆ ಅನ್ಯ ನೆಲೆಗಳೇ ಇಲ್ಲದಿರುವುದು ವಾಸ್ತವ ಸಂಗತಿಯಾಗಿದೆ. ಮತ್ತೊಂದೆಡೆ ಸ್ವತಂತ್ರವಾಗಿ ಆಸ್ತಿಪಾಸ್ತಿ ಹೊಂದಿರುವ ಅಥವಾ ಸಂಪರ್ಕಗಳನ್ನು ಹೊಂದಿರುವ ಅಥವಾ ಕೆಲವು ಸರ್ಕಾರೇತರ ಎನ್‌ಜಿಒಗಳ ಬೆಂಬಲವನ್ನು ಹೊಂದಿರುವ ಸಂತ್ರಸ್ತೆಯರು ಮಾತ್ರವೇ ನ್ಯಾಯ ವ್ಯವಸ್ಥೆಯ ಬಾಗಿಲು ಬಡಿಯಲು ಸಾಧ್ಯವಾಗುತ್ತದೆ.

ಹಾಗಾಗಿ ಅನೇಕ ಸಂತ್ರಸ್ತೆಯರಿಗೆ ಅವರ ಪರಿಸ್ಥಿತಿಗಳ ಸುಧಾರಣೆಯು ಆರ್ಥಿಕ ಸ್ವಾವಲಂಬನೆಯನ್ನು ಅವಲಂಬಿಸಿರುತ್ತದೆ. ಹೊಸ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಮೂಲಕ, ಹೊಸ ಜೀವನೋಪಾಯದ ಅವಕಾಶಗಳನ್ನು ಬಳಸಿಕೊಳ್ಳುವುದರ ಮೂಲಕ ಇದನ್ನು ಸಾಧಿಸಬಹುದಾಗಿದೆ.

ಪೊಲೀಸರ ಪಾತ್ರ:

ತಮ್ಮ ದೌರ್ಜನ್ಯದ ಅನುಭವಗಳನ್ನು ಪೊಲೀಸರಿಗೆ ವರದಿ ಮಾಡಿರುವಂತಹ ಮಹಿಳೆಯರು ಸಿನಿಕತನದಿಂದಲೇ ಮಾತನಾಡುತ್ತಾರೆ. ಅಲ್ಪ ಸಂಖ್ಯೆಯ ಕೆಲವೇ ಮಹಿಳೆಯರು ಸಕಾರಾತ್ಮಕ ಅನುಭವವನ್ನು ಪಡೆದಿದ್ದರೂ, ನಾವು ಸಂದರ್ಶಿಸಿದ ಬಹುಸಂಖ್ಯೆಯ ಸಂತ್ರಸ್ತೆಯರ ದೃಷ್ಟಿಯಲ್ಲಿ ಪೊಲೀಸರು ಸಮಸ್ಯೆಯ ಒಂದು ಭಾಗವಾಗಿ ಕಾಣುತ್ತಾರೆಯೇ ಹೊರತು, ದೌರ್ಜನ್ಯದ ಪರಿಹಾರವಾಗಿ ಕಾಣುವುದಿಲ್ಲ. ಎಲ್ಲ ರಾಜ್ಯಗಳಲ್ಲೂ ನಾವು ಗಮನಿಸಿದಂತೆ, ಪೊಲೀಸರು ಮಹಿಳೆಯರನ್ನು ಅವರ ದೌರ್ಜನ್ಯಯುತ ಕುಟುಂಬಗಳಿಗೇ ಹಿಂದಿರುಗುವಂತೆ, ಸಂಗಾತಿಯೊಡನೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಸೂಚಿಸುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತವೆ. ಅಥವಾ PWDVA ಕಾಯ್ದೆಯಲ್ಲಿ ಅಪೇಕ್ಷಿಸುವಂತೆ ಮಹಿಳೆಯರನ್ನು ರಕ್ಷಣಾ ಅಧಿಕಾರಿಗಳೊಡನೆ ಸಂಪರ್ಕಿಸಿ, ಇತರ ಸೇವಾ ಕೇಂದ್ರಗಳಿಗೆ ಸಂಪರ್ಕಿಸುವುದರ ಬದಲು ದೂರು ಸಲ್ಲಿಸುವುದರ ಬದಲಾಗಿ ದೌರ್ಜನ್ಯ ಎಸಗುವವರ ವಿರುದ್ಧ ಪ್ರತಿದಾಳಿಯನ್ನು ಮಾಡುವಂತೆ ಸೂಚಿಸಲಾಗುತ್ತದೆ. ಅನೇಕ ರಾಜ್ಯಗಳಲ್ಲಿ ಇನ್ನೂ ಸಹ ರಕ್ಷಣಾ ಅಧಿಕಾರಿಗಳ ನೇಮಕ ಆಗಿಲ್ಲ. ಹೀಗೆ ನೇಮಕ ಆಗಿರುವ ರಾಜ್ಯಗಳಲ್ಲೂ ಸಹ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು, ಕೌಶಲವಿಲ್ಲದ ಹಾಗೂ ಹೆಚ್ಚಿನ ಕೆಲಸದ ಹೊರೆ ಹೊತ್ತಿರುವ ಸಿಬ್ಬಂದಿಯಿಂದ ಕಾರ್ಯನಿರ್ವಹಣೆಯೇ ಅಸಾಧ್ಯವಾಗುವಂತಿರುತ್ತದೆ.

ದೌರ್ಜನ್ಯ-ಹಿಂಸೆಯ ಅನುಭವಗಳನ್ನು ಹಂಚಿಕೊಳ್ಳುವುದು ಮಹಿಳೆಯರ ಪಾಲಿಗೆ ದಿಟ್ಟ ಹೆಜ್ಜೆಯಾದರೂ ಸೇವೆಗಳನ್ನು ಸಂಪರ್ಕಿಸುವುದು ಮತ್ತು ಬೆಂಬಲ ಪಡೆಯುವುದು ಅನಿಶ್ಚಿತತೆ, ಭೀತಿ ಮತ್ತು ಅಸಮಾಧಾನಗಳನ್ನು ಹುಟ್ಟುಹಾಕುವುದೇ ಹೆಚ್ಚು.

ಪ್ರಭುತ್ವವು ಪಿತೃಪ್ರಧಾನವಾದ ಮತ್ತು ಇತರ ಭಿನ್ನ ಹಿತಾಸಕ್ತಿಗಳಿಗೇ ಪ್ರಥಮ ಆದ್ಯತೆ ನೀಡುತ್ತದೆ ಎಂಬ ವಾಸ್ತವವನ್ನು ಮಹಿಳೆಯರು ಅರಿತಿದ್ದಾರೆ. ಮಹಿಳೆಯರ ಪಾಲಿಗೆ ಪ್ರಭುತ್ವ ವಿಫಲವಾಗಿದೆ. ಪ್ರಭುತ್ವದ ಶಾಸಕಾಂಗವು ಕೌಟುಂಬಿಕ ದೌರ್ಜನ್ಯ ಮತ್ತು ಹಿಂಸೆಯನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದ್ದರೂ, ರಕ್ಷಣೆಯ ಆದೇಶಗಳ ಮೂಲಕ ನಾಗರಿಕ ಪರಿಹಾರಗಳು ಲಭ್ಯವಾಗಿದ್ದರೂ ಸಹ, ಕೌಟುಂಬಿಕ ದೌರ್ಜನ್ಯದ ಪರಿಣಾಮಗಳನ್ನು ನಿರ್ವಹಿಸುವ ಕಾರ್ಯವನ್ನು ಸಂತ್ರಸ್ತರ ಮತ್ತು ಅವರ ಕುಟುಂಬದವರ ಪಾಲಿಗೇ ಉಪಗುತ್ತಿಗೆ ನೀಡಲಾಗಿದೆ. ವರ್ತಮಾನದ ಸಂದರ್ಭದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅತಿ ದೊಡ್ಡ ಅಪರಾಧ ಇದೇ ಆಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ