ಪಶುವೈದ್ಯನ ಆತ್ಮೀಯತೆಯ ಏಟು: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಸಾವು

ಬೆಳ್ತಂಗಡಿ: ಪಶು ವೈದ್ಯರೊಬ್ಬರು ಆತ್ಮೀಯತೆಯಿಂದ ಹೊಡೆದ ಏಟಿನಿಂದ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಜೋಡುಮಾರ್ಗ ಸರ್ಕಲ್‌ನಲ್ಲಿ ಸೋಮವಾರ ನಡೆದಿದೆ.
ಪಟ್ರಮೆ ಗ್ರಾಮದ ಕೃಷ್ಣ ಯಾನೆ ಕಿಟ್ಟ (58) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಪಶು ವೈದ್ಯ ಡಾ.ಕುಮಾರ್ ಅವರು ಕೃಷ್ಣ ಹಲ್ಲೆ ನಡೆಸಿದವರು ಎಂಬ ಆರೋಪ ಕೇಳಿ ಬಂದಿದೆ.
ಕೃಷ್ಣ ಅವರು ವಿಪರೀತ ಜ್ವರದಿಂದ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡದ್ದರಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕೊಕ್ಕಡಕ್ಕೆ ಬಂದಿದ್ದರು. ಈ ಸಂದರ್ಭ ತನ್ನ ಪರಿಚಿತರೇ ಆದ ಕೊಕ್ಕಡದ ಪಶು ವೈದ್ಯ ಡಾ.ಕುಮಾರ್ ಅವರು ಕೃಷ್ಣ ಅವರಲ್ಲಿ ಮಾತನಾಡುತ್ತ ಜ್ವರ ಇದ್ದು ಇಷ್ಟು ಬೇಗ ಆಸ್ಪತ್ರೆಯಿಂದ ಯಾಕೆ ಬಂದೆ. ಆರೋಗ್ಯ ಸುಧಾರಿಸಿ ಬರಬೇಕಿತ್ತು ಎಂದು ಬುದ್ದಿ ಮಾತು ಹೇಳಿ ಒಂದು ಏಟು ಹೊಡೆದಿದ್ದಾರೆನ್ನಲಾಗಿದೆ.
ಈ ವೇಳೆ ಕೃಷ್ಣ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಕೆಲ ಹೊತ್ತಿನಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತನಿಖೆಯ ನಂತರ ತಿಳಿದು ಬರಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth