ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಬರೆದ ವಿದ್ಯಾರ್ಥಿಗಳು ಪಾಸ್: ಏನಿದು ಅಕ್ರಮ?

ಜೌನ್ ಪುರ್: ಉತ್ತರಪತ್ರಿಕೆಯಲ್ಲಿ ‘ಜೈ ಶ್ರೀರಾಮ್ ‘ ಎಂದು ಬರೆದ ವಿದ್ಯಾರ್ಥಿಗಳನ್ನು ಪಾಸ್ ಮಾಡಿದ ಪರೀಕ್ಷಾ ಮೌಲ್ಯಮಾಪಕ ಅಧ್ಯಾಪಕರನ್ನು ಅಮಾನತು ಮಾಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಜೌನ್ ಪುರ್ ನಲ್ಲಿರುವ ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳಲ್ಲಿ ‘ಜೈ ಶ್ರೀ ರಾಮ್’ ಮತ್ತು ಕ್ರಿಕೆಟಿಗರ ಹೆಸರನ್ನು ಬರೆದು ತಮ್ಮನ್ನು ಪಾಸ್ ಮಾಡುವಂತೆ ಕೇಳಿಕೊಂಡಿದ್ದರು. ಆ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸಿದ್ದರು. ಇದೀಗ ಆ ಇಬ್ಬರು ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ.
ದೇವರ ಹೆಸರಿನಲ್ಲಿ ಗುಪ್ತ ಲಂಚ!:
ಉತ್ತರ ಪ್ರದೇಶದ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ದಿವ್ಯಾಂಶು ಸಿಂಗ್ ಅವರು ಅಧ್ಯಾಪಕರ ಕಳ್ಳಾಟವನ್ನು ಬಯಲಿಗೆಳೆದಿದ್ದಾರೆ. ಇವರು ಆರ್ ಟಿಐ ಗೆ ಅರ್ಜಿ ಸಲ್ಲಿಸಿ 18 ಪ್ರಥಮ ವರ್ಷದ ಫಾರ್ಮಸಿ ಕೋರ್ಸ್ ವಿದ್ಯಾರ್ಥಿಗಳ ರೋಲ್ ಸಂಖ್ಯೆಗಳನ್ನು ನೀಡುವ ಮೂಲಕ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡುವಂತೆ ಕೋರಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಪ್ರಾಧ್ಯಾಪಕರಾದ ವಿನಯ್ ವರ್ಮಾ ಮತ್ತು ಆಶಿಶ್ ಗುಪ್ತಾ ಲಂಚ ಸ್ವೀಕರಿಸಿದ್ದಾರೆ ಎಂದು ದಿವ್ಯಾಂಶು ಸಿಂಗ್ ಆರೋಪಿಸಿದ್ದಾರೆ. ಅವರು ರಾಜ್ಯಪಾಲರಿಗೆ ಪುರಾವೆಗಳನ್ನು ಸಲ್ಲಿಸುವ ಮೂಲಕ ಅಫಿಡವಿಟ್ ಮೂಲಕ ಔಪಚಾರಿಕ ದೂರನ್ನು ಸಲ್ಲಿಸಿದ್ದರು.
ಸಾಕ್ಷ್ಯಾಧಾರಗಳು ಪರೀಕ್ಷಾ ಪ್ರಕ್ರಿಯೆಯಲ್ಲಿನ ವ್ಯತ್ಯಾಸಗಳನ್ನು ಎತ್ತಿ ತೋರಿಸಿವೆ ಮತ್ತು ಉತ್ತರ ಪತ್ರಿಕೆಗಳಲ್ಲಿ ‘ಜೈ ಶ್ರೀ ರಾಮ್’ ಮತ್ತು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮುಂತಾದ ಕ್ರಿಕೆಟಿಗರ ಹೆಸರುಗಳನ್ನು ಬರೆದ ವಿದ್ಯಾರ್ಥಿಗಳಿಗೆ ಗ್ರೇಡ್ ಜೊತೆಗೆ 50% ಗಿಂತ ಹೆಚ್ಚು ಅಂಕಗಳನ್ನು ನೀಡಿ ವಿವರಿಸಲಾಗದ ರೀತಿಯಲ್ಲಿ ಉತ್ತೀರ್ಣಗೊಳಿಸಲಾಗಿದೆ ಎನ್ನಲಾಗಿದೆ. ಶ್ರೀರಾಮನ ಹೆಸರು ಹಾಗೂ ಕ್ರಿಕೆಟಿಗರ ಹೆಸರುಗಳನ್ನು ಗುರುತಿಗಾಗಿ ಬರೆಯಲಾಗಿತ್ತೇ ಅನುಮಾನಗಳು ಸೃಷ್ಟಿಯಾಗಿದೆ.