ಹೆಜಮಾಡಿ ಟೋಲ್ ಫ್ಲಾಜಾದಲ್ಲಿ ಸುರತ್ಕಲ್ ಟೋಲ್ ಸುಂಕ ಸಂಗ್ರಹಕ್ಕೆ ಅವಕಾಶ ನೀಡಬಾರದು: ಜಿಲ್ಲಾಧಿಕಾರಿಗೆ ಹೋರಾಟ ಸಮಿತಿ ಮನವಿ - Mahanayaka
1:29 PM Thursday 12 - December 2024

ಹೆಜಮಾಡಿ ಟೋಲ್ ಫ್ಲಾಜಾದಲ್ಲಿ ಸುರತ್ಕಲ್ ಟೋಲ್ ಸುಂಕ ಸಂಗ್ರಹಕ್ಕೆ ಅವಕಾಶ ನೀಡಬಾರದು: ಜಿಲ್ಲಾಧಿಕಾರಿಗೆ ಹೋರಾಟ ಸಮಿತಿ ಮನವಿ

hejamadi tollgeat
03/12/2022

ಹೆಜಮಾಡಿ ಟೋಲ್ ಫ್ಲಾಜಾದಲ್ಲಿ ಸುರತ್ಕಲ್ ಟೋಲ್ ಸುಂಕ ಸಂಗ್ರಹಕ್ಕೆ ಅವಕಾಶ ನೀಡಬಾರದು, ತಕ್ಷಣವೇ ಜಿಲ್ಲಾಡಳಿತದ ಸಭೆ ನಡೆಸಬೇಕು ಎಂದು ಒತ್ತಾಯಿಸಿ  ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದೆ.

ಹಲವು ವರ್ಷಗಳ ಸತತ ಹೋರಾಟದ ತರುವಾಯ ಸುರತ್ಕಲ್ ಟೋಲ್ ಗೇಟ್ ಮುಚ್ಚಲ್ಪಟ್ಟಿರುವುದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಸಮಾಧಾ‌ನ ತಂದಿದೆ. ಏಳು ವರ್ಷಗಳ ಕಾಲ ಸುಂಕ ಸಂಗ್ರಹಿಸಿದ ಸುರತ್ಕಲ್ ಅಕ್ರಮ ಟೋಲ್ ಗೇಟ್ ನಿಂದ ಅತಿ ಹೆಚ್ಚು ತೊಂದರೆಗಳನ್ನು ಅನುಭವಿಸಿದ್ದು ಉಡುಪಿ ಜಿಲ್ಲೆಯ ಜನತೆ. ಮಂಗಳೂರು ನಗರವನ್ನು ಹೆಚ್ಚು ಅವಲಂಭಿಸಿರುವ ಉಡುಪಿ ಜಿಲ್ಲೆಯ ಜನರು ಪ್ರಯಾಣದ ಸಂದರ್ಭ ಹತ್ತು ಕಿ ಮಿ ಅಂತರದಲ್ಲಿ ಎರಡು ಕಡೆ ಟೋಲ್ ಕಟ್ಟುವ ಬಲವಂತಕ್ಕೆ ಒಳಗಾಗಿದ್ದರು. ಆದುದರಿಂದ ಸುರತ್ಕಲ್ ಟೋಲ್ ತೆರವು ಹೋರಾಟದಲ್ಲಿ ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು.

ಇದೀಗ ಸುರತ್ಕಲ್ ಟೋಲ್ ಗೇಟ್ ಮುಚ್ಚುವ ಬಹುಕಾಲದ ಬೇಡಿಕೆ ಈಡೇರಿರುವ ಸಂಭ್ರಮದ ಸಂದರ್ಭದಲ್ಲಿ ಸುರತ್ಕಲ್ ಟೋಲ್ ಗೇಟ್ ನಲ್ಲಿ ಸಂಗ್ರಹಿಸುತ್ತಿದ್ದ ಮುಕ್ಕ, ನಂತೂರು 17 ಕಿ ಮೀ ಉದ್ದದ ರಸ್ತೆಯ ಸುಂಕವನ್ನು ಇನ್ನು ಮುಂದೆ ಹೆಜಮಾಡಿ ನವಯುಗ್ ಟೋಲ್ ಕೇಂದ್ರದಲ್ಲಿ ಸಂಗ್ರಹಿಸಲು ಆದೇಶ ಹೊರಡಿಸಿರುವುದು ನಮಗೆಲ್ಲಾ ಆತಂಕ ತಂದಿದೆ. ಜನರು ಸಹಜವಾಗಿ ಆಕ್ರೋಶಕ್ಕೆ ಒಳಗಾಗಿದ್ದಾರೆ ಎಂದು ಸಮಿತಿ ಹೇಳಿದೆ.

ಹೆಜಮಾಡಿಯ ನವಯುಗ್ ಟೋಲ್ ಗೇಟ್ ನಲ್ಲಿ ಸುರತ್ಕಲ್ ಟೋಲ್ ಸಂಗ್ರಹದ ಆದೇಶ ಜಾರಿಯಾದಲ್ಲಿ ಎರಡೂ ಜಿಲ್ಲೆಯ ಜನರಿಗೆ ದೊಡ್ಡ ರೀತಿಯ ತೊಂದರೆ ಉಂಟಾಗಲಿದೆ. ಅದರಲ್ಲೂ ಉಡುಪಿ ಜಿಲ್ಲೆಯ ಜನರ ಮೇಲೆ ಸುಂಕದ ಭಾರ ಅತ್ಯಂತ ಹೆಚ್ಚು ಭಾದಿಸಲ್ಪಡಲಿದೆ. ಈಗಿನ ಆರ್ಥಿಕ ಹಿಂಜರಿತದ ಕಾಲದಲ್ಲಿ ಈ ಹೊರೆ ಭರಿಸುವುದು ದಿನ ನಿತ್ಯದ ಪ್ರಯಾಣಿಕರಿಗೆ ಕಷ್ಟ. ಉದಾಹರಣೆಗೆ ಪಡುಬಿದ್ರೆಯಿಂದ ಮೂಲ್ಕಿಯ ಆರು ಕಿ ಮೀ ಏಕ ಮುಖ ಪ್ರಯಾಣಕ್ಕೆ ಕಾರಿನಲ್ಲಿ 100 ರೂಪಾಯಿ ಪಾವತಿಸಬೇಕಾಗುತ್ತದೆ. ಇನ್ನು ಸ್ಥಳೀಯ ಕೆಂಪು ಕಲ್ಲು, ಜಲ್ಲಿ ಮುಂತಾದ ನಿರ್ಮಾಣ ಸಾಮಾಗ್ರಿಗಳನ್ನು ಸುರತ್ಕಲ್, ಪಡುಬಿದ್ರೆ, ಕಾಪು, ಕಾರ್ಕಳ ಮಧ್ಯೆ ದಿನ ನಿತ್ಯ ಸಾಗಾಟ ಮಾಡುವ ವಾಹನಗಳ ಮೇಲೆ ಬೀಳುವ ದುಬಾರಿ ಟೋಲ್ ಸಾಮಾನ್ಯ ಜನರಿಗೆ ದೊಡ್ಡ ಹೊಡೆತ. ಈ ರೀತಿ ಬೇರೆ ಬೇರೆ ಗೂಡ್ಸ್ ವಾಹನಗಳು, ಲೈನ್ ಸೇಲ್ ವಾಹನಗಳು ಸಣ್ಣ ಅಂತರದ ಈ ಪಟ್ಟಣಗಳ ನಡುವೆ ಪ್ರತಿದಿನ ಓಡಾಡುತ್ತವೆ.‌ ಅವರ ದುಡಿಮೆಯ ಬಹುಪಾಲು ಟೋಲ್ ಗೇಟ್ ಗಳು ಕಬಳಿಸಿದಲ್ಲಿ ಅವರ ಬದುಕಿನ ಮೇಲೂ ದೊಡ್ಡ ಪರಿಣಾಮ ಆಗಲಿದೆ ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ.

ಬಹಳ ಪ್ರಧಾನವಾಗಿ, ಸುರತ್ಕಲ್ ನಲ್ಲಿ ಟೋಲ್ ಸಂಗ್ರಹಿಸುತ್ತಿದ್ದದ್ದು ಮುಕ್ಕ, ನಂತೂರು ರಸ್ತೆಗೆ ಆ ರಸ್ತೆ ಆರಂಭಗೊಳ್ಳುವುದು ಹೆಜಮಾಡಿ ಟೋಲ್ ಪ್ಲಾಜಾ ದಿಂದ 10 ಕಿ ಮೀ ಅಂತರದ ನಂತರ. ಆದರೆ ಪಡುಬಿದ್ರೆ, ಉಡುಪಿ, ಕಾರ್ಕಳದಿಂದ ಮುಲ್ಕಿ, ಹಳೆಯಂಗಡಿ‌ ಭಾಗಕ್ಕೆ ಬರುವವರು, ಅಥವಾ ಹಳೆಯಂಗಡಿ, ಮುಲ್ಕಿ ಭಾಗದಿಂದ ಉಡುಪಿ, ಕಾರ್ಕಳ ಕಡೆಗೆ ಪ್ರಯಾಣಿಸುವವರು ಸುರತ್ಕಲ್ ಟೋಲ್ ರಸ್ತೆಗೆ ಪ್ರವೇಶವನ್ನು‌ ಮಾಡದೇ ಇದ್ದರೂ ಆ ರಸ್ತೆ ಬಳಕೆಯ ಸುಂಕವನ್ನು ಈಗ ಹೊರಡಿಸಲಾಗಿರುವ ನೂತನ ಆದೇಶದ ಪ್ರಕಾರ ಹೆಜಮಾಡಿ ಟೋಲ್ ಫ್ಲಾಜ಼ಾದಲ್ಲಿ ಕಟ್ಟಬೇಕಾಗುತ್ತದೆ. ಇದು ಯಾವ ನ್ಯಾಯ, ಯಾವ ನಿಯಮ ? ಇದಂತೂ ನೇರವಾಗಿ ಕಾನೂನು ಬಾಹಿರವಾದಂತದ್ದು. ಮುಕ್ಕದಿಂದ ಹೆಜಮಾಡಿ ಭಾಗದ ರಸ್ತೆ ಮಾತ್ರ ನವಯುಗ್ ಅಧಿನದಲ್ಲಿದೆ. ಆ ಕಡೆಗೆ ಸುರತ್ಕಲ್, ನಂತೂರು ಭಾಗದ ರಸ್ತೆಗೂ ಹೆಜಮಾಡಿ ಟೋಲ್ ಪ್ಲಾಜಾಕ್ಕು ಯಾವುದೆ ಸಂಬಂಧ ಇಲ್ಲ. ನವಯುಗ್ ನಿರ್ವಹಿಸುವ ಉಡುಪಿ ಭಾಗದ ಹೆದ್ದಾರಿಯೇ ಬಗೆಹರಿಸದ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವಾಗ, ಇನ್ನೊಂದು ದೊಡ್ಡ ಸಮಸ್ಯೆಯನ್ನು ಸೃಷ್ಟಿಸುವುದು ಎಷ್ಟು ಸರಿ ? ಮಂಗಳೂರು ಭಾಗದ ಖಾಸಗಿ ವಾಹನಗಳಿಗೆ ಸುರತ್ಕಲ್ ಟೋಲ್ ಗೇಟ್ ನಲ್ಲಿ‌ ಇದ್ದ ಟೋಲ್ ರಹಿತ ಪ್ರಯಾಣದ ಅವಕಾಶ ಹೆಜಮಾಡಿಯಲ್ಲಿ ಉಳಿಯಲಿದೆಯೆ ಎಂಬ ಪ್ರಶ್ನೆಗಳೂ ಎದ್ದಿವೆ. ಇವೆಲ್ಲವೂ ಅಧಿಕೃತ ವೇದಿಕೆಗಳಲ್ಲಿ‌ ಚರ್ಚೆಗೆ ಒಳಪಡಬೇಕಿದೆ ಎಂದಿದೆ.

ಇಂತಹ ಹಲವು ತರ್ಕಬದ್ದವಲ್ಲದ, ಜನರನ್ನು ಶೋಷಣೆಗೆ, ಕಷ್ಟಕ್ಕೆ ಒಡ್ಡುವ ವಿಚಾರಗಳು ಮೇಲಿನ ಆದೇಶದಂತೆ ಹೆಜಮಾಡಿಯಲ್ಲಿ‌ ಹೆಚ್ಚುವರಿ ಸುಂಕ ಸಂಗ್ರಹ ಆರಂಭಗೊಂಡಲ್ಲಿ ಉಂಟಾಗಲಿದೆ. ಈ ಆದೇಶದ ವಿರುದ್ದ ಈಗಾಗಲೆ ಎರಡೂ ಜಿಲ್ಲೆಗಳಲ್ಲಿ ಆಕ್ರೋಶದ ಅಲೆ ಎದ್ದಿದೆ. ನಾವು ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಹೆಜಮಾಡಿ ಟೋಲ್ ಗೇಟ್ ಮುಂಭಾಗ ಈಗಾಗಲೆ ಸಾಮೂಹಿಕ ಧರಣಿ ನಡೆಸಿ ಹೋರಾಟಕ್ಕೆ ಚಾಲನೆಯನ್ನು ನೀಡಿರುತ್ತೇವೆ. ಆದೇಶ ಜಾರಿಯಾದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆಯಲಿದೆ ಎಂದು ಸಮಿತಿ ಎಚ್ಚರಿಸಿದೆ.

hejamadi tollgeat

ಸುರತ್ಕಲ್ ಅಕ್ರಮ ಟೋಲ್ ಸುಂಕವನ್ನು ಹೆಜಮಾಡಿ, ತಲಪಾಡಿ,  ಬ್ರಹ್ಮರಕೂಟ್ಲುವಿನಲ್ಲಿ ಹಂಚಿಕೆಮಾಡಿ ಸಂಗ್ರಹಿಸುವ ಸಲಹೆಯನ್ನು ಉಡುಪಿಯ ಜನಪ್ರತಿನಿಧಿಗಳು ನೀಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ಸರಿಯಲ್ಲ. ಸುರತ್ಕಲ್ ಟೋಲ್ ಸುಂಕವನ್ನು ಪೂರ್ತಿ ರದ್ದುಗೊಳಿಸಬೇಕೆಂಬುದು ಜನರ ಬೇಡಿಕೆಯಾಗಿದೆ ಹಾಗೂ ನ್ಯಾಯಯುತವಾಗಿದೆ. ಹಾಗಿರುತ್ತಾ ವಿವಿದೆಡೆ ಹಂಚಿಕೆ ಮಾಡಿ ಸಂಗ್ರಹಿಸುವ ಯೋಜನೆಯೂ ನ್ಯಾಯ ಸಮ್ಮತವಾದುದಲ್ಲ. ಉಡುಪಿ ಜಿಲ್ಲಾಡಳಿತ ಇಂತಹ ಪ್ರಸ್ತಾಪವನ್ನು ಹೆದ್ದಾರಿ ಪ್ರಾಧಿಕಾರದ ಮುಂದೆ ಇಡಬಾರದು ಎಂದು ವಿನಂತಿಸುತ್ತಿದ್ದೇವೆ ಎಂದಿದೆ.

ಜಿಲ್ಲೆಯ ಆಡಳಿತದ ಚುಕ್ಕಾಣಿಯನ್ನು ಹಿಡಿದಿರುವ ತಾವುಗಳು ಈ ಎಲ್ಲಾ ಅಂಶಗಳನ್ನು ಪರಿದಣಿಸಿ ಹೆದ್ದಾರಿ ಪ್ರಾಧಿಕಾರದ ಆದೇಶ ತಕ್ಷಣಕ್ಕೆ ಜಾರಿಗೆ ಅವಕಾಶ ನೀಡಬಾರದು. ಆದಷ್ಟು ಬೇಗ ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರ‌ನ್ನು ಒಳಗೊಂಡ ಜಿಲ್ಲಾಡಳಿತದ ಸಭೆಯನ್ನು ಕರೆದು ಚರ್ಚೆಯ‌ನ್ನು ನಡೆಸಬೇಕು. ಆದೇಶದಲ್ಲಿರುವ ನ್ಯೂನತೆಗಳು, ಆದೇಶ ಜಾರಿಯಾದಲ್ಲಿ ಉಂಟಾಗುವ ಪರಿಣಾಮಗಳನ್ನು ಸರಕಾರಕ್ಕೆ ವಿವರಿಸಿ ಹೆಜಮಾಡಿ ಟೋಲ್ ಫ್ಲಾಜ಼ಾದಲ್ಲಿ ಸುರತ್ಕಲ್ ಟೋಲ್ ಸಂಗ್ರಹದ ಆದೇಶ ಹಿಂಪಡೆಯಲು ಜಿಲ್ಲೆಯ ಜನರ ಪರವಾಗಿ ಬೇಕಾದ  ಕ್ರಮಬದ್ದವಾದ ಪ್ರಯತ್ನಗಳನ್ನು ನಡೆಸಬೇಕು ಎಂದು ಸಮಿತಿ ವಿನಂತಿಸಿದೆ.

ನಿಯೋಗದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕರು ಮುನೀರ್ ಕಾಟಿಪಳ್ಳ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಸಹ ಸಂಚಾಲಕ ಶೇಖರ ಹೆಜಮಾಡಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಕೊಲ್ಕಬೈಲ್ ಕಿಶನ್ ಹೆಗ್ಡೆ ರಮೇಶ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಕವಿರಾಜ್ ಎಸ್, ಪ್ರಶಾಂತ್ ಪೂಜಾರಿ, ಶರತ್ ಶೆಟ್ಟಿ, ಶ್ರೀನಿವಾಸ್ ಹೆಬ್ಬಾರ್, ಸಾಯಿರಾಜ್ ಕಿದಿಯೂರು, ಯತೀಶ್ ಕರ್ಕೇರ ಮತ್ತಿತರರು ಇದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ