4 ವರ್ಷಗಳ ಗಡಿಪಾರು ಬಳಿಕ ಪಾಕಿಸ್ತಾನಕ್ಕೆ ಮರಳಿದ ನವಾಜ್ ಷರೀಫ್: ಮಾಜಿ ಪ್ರಧಾನಿಗೆ ಬೆಂಬಲಿಗರಿಂದ ಅದ್ದೂರಿ ಸ್ವಾಗತ

ರಾಜ ಹಿಂದಿರುಗಿದ್ದಾನೆ..! ನವಾಜ್ ಷರೀಫ್ ಮರಳಿದ್ದಾರೆ ಮತ್ತು ಪಾಕಿಸ್ತಾನದ ವೈಭವವನ್ನು ಪುನರ್ ಸ್ಥಾಪಿಸಲು ಅವರು ಇಲ್ಲಿದ್ದಾರೆ ಎಂದು ನವಾಜ್ ಷರೀಫ್ ಬೆಂಬಲಿಗರು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನ ಅಧಿಕೃತ ಎಕ್ಸ್ ಹ್ಯಾಂಡಲ್ ನಲ್ಲಿ ಈ ಪೋಸ್ಟ್ ಹಾಕಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಶನಿವಾರ ಪಾಕಿಸ್ತಾನ ದೇಶಕ್ಕೆ ಮರಳಿ ಬಂದರು.
ಪಾಕಿಸ್ತಾನದ ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಪಿಎಂಎಲ್-ಎನ್ ಕೂಡಾ ಒಂದು. ಇತರ ಎರಡು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷ ಮತ್ತು ಭುಟ್ಟೋಗಳ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಷರೀಫ್ ಪಾಕಿಸ್ತಾನಕ್ಕೆ ಮರಳುವುದರೊಂದಿಗೆ ಮತ್ತು 2024 ರ ಜನವರಿ ಕೊನೆಯ ವಾರದಲ್ಲಿ ನಡೆಯಲಿರುವ ಚುನಾವಣೆಗೆ ಮತ್ತಷ್ಟು ರಂಗೇರಲಿದೆ.
73 ವರ್ಷದ ಷರೀಫ್ ದೇಶಕ್ಕೆ ಮರಳುವುದನ್ನು ತಪ್ಪಿಸಬಹುದು ಎಂಬ ಪ್ರತಿಸ್ಪರ್ಧಿಗಳ ಊಹಾಪೋಹಗಳ ಮಧ್ಯೆ, ಅವರು ಮಧ್ಯಾಹ್ನ ದುಬೈನಿಂದ ಇಸ್ಲಾಮಾಬಾದ್ ಗೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ ಕಾನೂನು ಔಪಚಾರಿಕತೆಗಳನ್ನು ಪೂರ್ಣಗೊಳಿಸಿದರು ಮತ್ತು ಮಿನಾರ್-ಇ-ಪಾಕಿಸ್ತಾನದಲ್ಲಿ ಶಕ್ತಿ ಪ್ರದರ್ಶನಕ್ಕಾಗಿ ಪಿಎಂಎಲ್-ಎನ್ ನ ಭದ್ರಕೋಟೆಯಾದ ಲಾಹೋರ್ ಗೆ ತೆರಳಿದರು.
‘ಪಂಜಾಬ್ ನ ಸಿಂಹ’ ಎಂದು ಕರೆಯಲ್ಪಡುವ ಷರೀಫ್ ದಾಖಲೆಯ ಮೂರು ಬಾರಿ ಪ್ರಧಾನಿಯಾಗಿದ್ದರು. ಆದರೆ ಪ್ರತಿ ಬಾರಿಯೂ ಅವರು ತಮ್ಮ ಅಧಿಕಾರಾವಧಿಯ ಮಧ್ಯದಲ್ಲಿ ರಾಜೀನಾಮೆ ನೀಡಬೇಕಾಯಿತು.
ಶನಿವಾರ ಬೆಳಿಗ್ಗೆಯಿಂದ, ಪಿಎಂಎಲ್-ಎನ್ ನ ಎಕ್ಸ್ ಹ್ಯಾಂಡಲ್ ದುಬೈನಿಂದ ಷರೀಫ್ ಅವರು ವಿಶೇಷ ವಿಮಾನವನ್ನು ಹತ್ತುವುದರಿಂದ ಹಿಡಿದು ಇಸ್ಲಾಮಾಬಾದ್ ನಲ್ಲಿ ಇಳಿಯುವುದು, ಕಾನೂನು ದಾಖಲೆಗಳಿಗೆ ಸಹಿ ಹಾಕಲು ಹೋಗುವುದು, ನಂತರ ಲಾಹೋರ್ ಗೆ ಚಾರ್ಟರ್ಡ್ ಹೆಲಿಕಾಪ್ಟರ್ ಹತ್ತುವುದರಿಂದ ಹಿಡಿದು ಶರೀಫ್ ಅವರ ಪ್ರಯಾಣದ ಪೂರ್ಣ ವಿವರಗಳನ್ನು ಪೋಸ್ಟ್ ಮಾಡಿದೆ. ಅವರು ಲಾಹೋರ್ ನಲ್ಲಿ ಇಳಿದ ಸ್ಥಳದಿಂದ ಆರಂಭವಾದ ರ್ಯಾಲಿಯು ಮಿನಾರ್-ಇ-ಪಾಕಿಸ್ತಾನ್ ಇರುವ ಇಕ್ಬಾಲ್ ಪಾರ್ಕ್ ಗೆ ಹೋಗುವವರೆಗೂ ವಿವರಗಳನ್ನು ನೀಡಿತು.