ಕುಟುಂಬಸ್ಥರ ವಿರೋಧ ಕಟ್ಟಿಕೊಂಡು ತನ್ನಿಷ್ಟದ ಹುಡುಗನನ್ನು ವಿವಾಹವಾದ ಯುವತಿಯ ದುರಂತ ಅಂತ್ಯ! - Mahanayaka

ಕುಟುಂಬಸ್ಥರ ವಿರೋಧ ಕಟ್ಟಿಕೊಂಡು ತನ್ನಿಷ್ಟದ ಹುಡುಗನನ್ನು ವಿವಾಹವಾದ ಯುವತಿಯ ದುರಂತ ಅಂತ್ಯ!

marder
05/07/2024

ಜೈಪುರ: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ ಆದರೂ ಇನ್ನೂ ಭಾರತದಲ್ಲಿ ತಮ್ಮ ಇಷ್ಟದ ಸಂಗಾತಿಯನ್ನು ವಿವಾಹವಾಗುವ ಸ್ವಾತಂತ್ರ್ಯವೂ ಯುವಕ—ಯುವತಿಯರಿಗೆ ಸಿಕ್ಕಿಲ್ಲ.

ಕಾನೂನಿನ ಪ್ರಕಾರ ತಮ್ಮ ಇಷ್ಟದ ಪತಿ–ಪತ್ನಿಯನ್ನು ಹೊಂದಲು ವಯಸ್ಕರಿಗೆ ಹಕ್ಕು ಇದ್ದರೂ, ಅಘೋಷಿತ ಕಾನೂನು ವಿರೋಧಿ ನಿಯಮಗಳನ್ನು ಮಾಡಿಕೊಂಡಿರುವ ಅನಾಗರಿಕರು ಕುಟುಂಬಸ್ಥರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರೆ, ಹತ್ಯೆ ಮಾಡಲೂ ಹೇಸದ ಜನರು ನಮ್ಮ ನಡುವೆಯೇ ಸಿಗುತ್ತಾರೆ. ಇಂತಹದ್ದೇ ಘಟನೆಯೊಂದು ರಾಜಸ್ಥಾನದ ರಾಜಸ್ಥಾನದ ಝಲಾವರ್ ನಲ್ಲಿ ನಡೆದಿದ್ದು, ಯುವತಿಯೊಬ್ಬಳನ್ನು ಅಪಹರಿಸಿದ ಕುಟುಂಬಸ್ಥರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಕುಟುಂಬಸ್ಥರ ವಿರೋಧದ ನಡುವೆಯೇ ತಾನು ಇಷ್ಟಪಟ್ಟ ಯುವಕನೊಂದಿಗೆ ವಿವಾಹವಾಗಿದ್ದ ಯುವತಿಯನ್ನು ಕುಟುಂಬದ ಸದಸ್ಯರು, ಆಕೆಯ ಪತಿಯ ಎದುರೇ ಅಪಹರಿಸಿ, ಹತ್ಯೆ ಮಾಡಿ ಸ್ಮಶಾನದಲ್ಲಿ ಮೃತದೇಹವನ್ನು ಸುಟ್ಟ ಘಟನೆ ನಡೆದಿದೆ.

24 ವರ್ಷ ವಯಸ್ಸಿನ ಯುವತಿ ಕುಟುಂಬಸ್ಥರ ವಿರೋಧದ ನಡುವೆಯೇ ರವಿ ಭೀಲ್ ಎಂಬ ಯುವಕನನ್ನು ವಿವಾಹವಾಗಿದ್ದಳು. ಇದರಿಂದ ರೊಚ್ಚಿಗೆದ್ದ ಕುಟುಂಬಸ್ಥರು ಈ ದುಷ್ಕೃತ್ಯ ನಡೆಸಿದ್ದಾರೆ.

ವಿವಾಹದ ನಂತರ ಕುಟುಂಬಸ್ಥರಿಂದ ತಪ್ಪಿಸಿಕೊಂಡಿದ್ದ ಈ ಜೋಡಿ, ಬೇರೆ ಬೇರೆ ಸ್ಥಳಗಳಿಗೆ ತೆರಳಿ ತಲೆ ಮರೆಸಿಕೊಂಡಿದ್ದರು. ಮಧ್ಯಪ್ರದೇಶದ ಹಳ್ಳಿಯೊಂದರ ಎಟಿಎಂ ಬಳಿಯಲ್ಲಿ ಇವರು ಇರುವ ವಿಚಾರ ತಿಳಿದ ಕುಟುಂಬಸ್ಥರು ಯುವತಿಯನ್ನು ಅಪಹರಿಸಿದ್ದಾರೆ. ತಕ್ಷಣವೇ ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಬರುವಷ್ಟರಲ್ಲಿ ಯುವತಿಯನ್ನು ಹತ್ಯೆ ಮಾಡಿದ್ದ ಕುಟುಂಬಸ್ಥರು ಆಕೆಯ ದೇಹವನ್ನು ಸ್ಮಶಾನವೊಂದರಲ್ಲಿ ಸುಟ್ಟುಹಾಕಿದ್ದರು.


Provided by
Provided by

ಪೊಲೀಸರು ಬರುತ್ತಿರುವ ಮಾಹಿತಿ ತಿಳಿದು ಸ್ಥಳದಿಂದ ಕುಟುಂಬದ ಸದಸ್ಯರು ಪರಾರಿಯಾಗಿದ್ದಾರೆ. ಸದ್ಯ ಸುಟ್ಟ ಯುವತಿಯ ಅವಶೇಷಗಳನ್ನು ಪೊಲೀಸರು ವಿಧಿವಿಜ್ಞಾನ ಕೇಂದ್ರಕ್ಕೆ ಕಳುಹಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ