ತ್ರಿಬಲ್ ಮರ್ಡರ್: 7 ವರ್ಷದ ಬಾಲಕಿ ಸೇರಿದಂತೆ ಮೂವರ ಬರ್ಬರ ಹತ್ಯೆ

ಚಿಕ್ಕಮಗಳೂರು: ಪತ್ನಿ ಮೋಸ ಮಾಡಿ ಓಡಿ ಹೋದಳು, ಇತ್ತ ಶಾಲೆಗೆ ಹೋಗುತ್ತಿದ್ದ 7 ವರ್ಷದ ಬಾಲಕಿಗೆ ನಿನ್ನ ಅಮ್ಮ ಎಲ್ಲಿ ಅಂತ ಬೇರೆ ಮಕ್ಕಳು ಪ್ರಶ್ನೆ ಮಾಡುತ್ತಿದ್ದರು. ಮಗು ಈ ವಿಷಯ ತನ್ನ ತಂದೆಯ ಬಳಿ ಹೇಳಿದ್ದಳು. ತಂದೆಗೆ ಗೊತ್ತಿಲ್ಲದಂತೆ ಆಲ್ಬಂನಿಂದ ಫೋಟೋ ತೆಗೆದುಕೊಂಡು ಹೋದ ಮಗಳು ಇವಳೇ ನಮ್ಮಮ್ಮ ಅಂತ ತನ್ನ ಸಹಪಾಠಿಗಳಿಗೆ ಹೇಳಿದ್ದಳು. ತಾಯಿ ಪ್ರೀತಿಗಾಗಿ ಪರಿತಪಿಸುತ್ತಿದ್ದ ಮಗಳಿಗೆ ತಾನೇ ತಾಯಿ ಪ್ರೀತಿ ನೀಡಬೇಕಿದ್ದ ಪಾಪಿ ತಂದೆ, ಮಗಳನ್ನು ಸೇರಿದಂತೆ ತನ್ನ ಅತ್ತೆ, ನಾದಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಹೌದು..! ಈ ಘಟನೆ ನಡೆದಿರುವುದು ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದಲ್ಲಿ. ಭೀಕರ ತ್ರಿಬಲ್ ಮರ್ಡರ್ ಗೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮ ಬೆಚ್ಚಿ ಬಿದ್ದಿದೆ.
ಅತ್ತೆ ಜ್ಯೋತಿ (50), ನಾದಿನಿ ಸಿಂಧು (26) ಹಾಗೂ 7 ವರ್ಷದ ಮಗು ಹತ್ಯೆಗೀಡಾದ ದುರ್ದೈವಿಗಳು. ಮಗುವಿನ ತಂದೆ ರತ್ನಾಕರ್ ಎಂಬಾತ ಈ ಭೀಕರ ಹತ್ಯೆಗಳನ್ನು ನಡೆಸಿದವನಾಗಿದ್ದಾನೆ. ಮೃತ ಸಿಂಧು ಗಂಡ ಅವಿನಾಶ್ ಅವರ ಕಾಲಿಗೂ ಗುಂಡೇಟು ತಗಲಿದೆ. ನಾಡ ಬಂದೂಕಿನ ಮೂಲಕ ಆರೋಪಿ ರತ್ನಾಕರ್ ತನ್ನ ಪತ್ನಿಯ ಮನೆಯವರನ್ನು ಬರ್ಬರವಾಗಿ ಹತ್ಯೆ ನಡೆಸಿದ್ದಾನೆ. ಹತ್ಯೆಯ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ರತ್ನಾಕರ್, ಪೂರ್ಣಪ್ರಜ್ಞಾ ಶಾಲೆಯ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಘಟನಾ ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೆಲ್ಫಿ ವಿಡಿಯೋ ಮಾಡಿದ ಆರೋಪಿ ರತ್ನಾಕರ:
7 ವರ್ಷದ ತನ್ನ ಮಗು ಸಹಿತ ಅತ್ತೆ, ನಾದಿನಿಯ ಹತ್ಯೆ ನಡೆಸಿದ ರತ್ನಾಕರ್, ಹತ್ಯೆಯ ನಂತರ ಸೆಲ್ಫಿ ವಿಡಿಯೋ ಮಾಡಿದ್ದಾನೆ. ವಿಡಿಯೋದಲ್ಲಿ ಸಂಸಾರದ ನೋವು ತೋಡಿಕೊಂಡಿದ್ದಾನೆ. ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಮನನೊಂದು ಕೊಲೆಗೈದಿರುವುದು ಆರೋಪಿಯ ಹೇಳಿಕೆಯಿಂದ ತಿಳಿದು ಬಂದಿದೆ.
ನನ್ನ ಮಗಳ ಖುಷಿ, ಪ್ರೀತಿ, ಸಂತೋಷದ ಮುಂದೆ ಏನೂ ಇಲ್ಲ, ಮಗಳಿಗೆ ಶಾಲೆಯಲ್ಲಿ ಮಕ್ಕಳು ನಿಮ್ಮ ಅಮ್ಮ ಎಲ್ಲಿ ಕೇಳ್ತಾರೆ, ಮಗಳು ನನಗೆ ಕೇಳುತ್ತಾಳೆ. ನನಗೆ ಗೊತ್ತಿಲ್ಲದೆ ಮಗಳು ಆಲ್ಬಂನಿಂದ ಫೋಟೋ ತೆಗೆದುಕೊಂಡು ಹೋಗಿ ಶಾಲೆಯಲ್ಲಿ ತೋರಿಸಿದ್ದಾಳೆ. ನನ್ನ ಮಗಳು ತುಂಬಾ ಬೇಜಾರಾಗಿದ್ಲು, ಪಪ್ಪಾ… ಎಲ್ಲಾ ನಿಮ್ಮ ಅಮ್ಮ ಎಲ್ಲಿ ಅಂತಾರೆ ಅಂತ ಹೇಳ್ತಾಳೆ. ನನ್ನ ನಿರ್ಧಾರವನ್ನ ನನ್ನ ಕುಟುಂಬದವರಿಗೆ ಹೇಳಿದ್ದೇನೆ. ನನ್ನ ಮನೆಯವರು ನನಗೆ ಮೋಸ ಮಾಡಿ ಹೋಗಿ 2 ವರ್ಷ ಆಯ್ತು. ಪಾಪುನು ಬೇಡ ಅಂತ ಬಿಟ್ಲು, ಪಾಪುನು ನಾನೇ ನೋಡಿಕೊಳ್ತಿದ್ದೇನೆ ಎಂದು ಕೊಲೆ ಬಳಿಕ ಸೆಲ್ಫಿ ವಿಡಿಯೋ ಮಾಡಿ ರತ್ನಾಕರ್ ಹೇಳಿಕೆ ನೀಡಿದ್ದಾನೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BR3b3qhWZWaCzpD1m6N5uu