ರಾಮಮಂದಿರ ಉದ್ಘಾಟನೆಗೊಂಡ್ರೆ ಗೋಧ್ರಾದಂತಹ ಘಟನೆ ನಡೆಯಬಹುದು: ಉದ್ಧವ್ ಠಾಕ್ರೆ ಎಚ್ಚರಿಕೆ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಒಂದು ವೇಳೆ ರಾಮ ಮಂದಿರ ಉದ್ಘಾಟನೆಗೊಂಡ ನಂತರ ಗೋಧ್ರಾದಂತಹ ಘಟನೆ ನಡೆಯಬಹುದು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಎಚ್ಚರಿಕೆ ನೀಡಿದ್ದಾರೆ.
ಲೋಕಸಭೆ ಚುನಾವಣೆಗೆ ತಿಂಗಳುಗಳ ಮೊದಲು ಜನವರಿಯಲ್ಲಿ ದೇವಾಲಯ ಉದ್ಘಾಟನೆಯಾಗಲಿದ್ದು, ದೇಶಾದ್ಯಂತದ ಹೆಚ್ಚಿನ ಹಿಂದೂಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಠಾಕ್ರೆ ಅವರ ಹೇಳಿಕೆಯನ್ನು ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಅವರು ಕಟುವಾಗಿ ಟೀಕಿಸಿದ್ದಾರೆ. ಅವರು ತಮ್ಮ ಮಾಜಿ ಮಿತ್ರರಾಗಿದ್ದ ಬಾಳಾಸಾಹೇಬ್ ಠಾಕ್ರೆ (ದಿವಂಗತ ಶಿವಸೇನೆ ಸಂಸ್ಥಾಪಕ) ರಾಮ ಮಂದಿರ ಚಳವಳಿಯನ್ನು ಆಶೀರ್ವಾದ ಮಾಡಿದ್ದಾರೆ. ಹೀಗಿರುವಾಗ ಸದ್ಭುದ್ದಿ ಕೊಡಲಿ ಎಂದು ನಾನು ಭಗವಾನ್ ರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಠಾಕ್ರೆಯವರ ಹೇಳಿಕೆಯನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಟೀಕಿಸಿದ್ದಾರೆ. ಜಲಗಾಂವ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಉದ್ಧವ್ ಠಾಕ್ರೆ ‘ದೇಶಾದ್ಯಂತ ಅನೇಕ ಹಿಂದೂಗಳನ್ನು ಬಸ್‌ಗಳು ಮತ್ತು ರೈಲುಗಳಲ್ಲಿ ಕರೆಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲಿಂದ ಹಿಂತಿರುಗುವಾಗ ದಾರಿಯಲ್ಲಿ ಎಲ್ಲೋ ಒಂದು ಗೋಧ್ರಾದಂತಹ ಘಟನೆ ನಡೆಯಬಹುದು, ದಾಳಿ ನಡೆಯಬಹುದು.
ಕೆಲವು ಕಾಲೋನಿಯಲ್ಲಿ ಬಸ್ಸು ಸುಡುತ್ತಾರೆ, ಕಲ್ಲು ತೂರುತ್ತಾರೆ. ಹತ್ಯಾಕಾಂಡಗಳು ನಡೆಯುತ್ತವೆ. ದೇಶ ಮತ್ತೆ ಹೊತ್ತಿ ಉರಿಯುತ್ತದೆ. ಈ ಬೆಂಕಿಯಲ್ಲಿ ಅವರು ರಾಜಕೀಯ ರೊಟ್ಟಿಯನ್ನು ಬೇಯಿಸುತ್ತಾರೆ ಎಂದು ಶಿವಸೇನಾ ಯುಬಿಟಿ ನಾಯಕ ಹೇಳಿದ್ದಾರೆ.
ಫೆಬ್ರವರಿ 2002 ರಲ್ಲಿ ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ನ ಕೆಲವು ಬೋಗಿಗಳಿಗೆ ಬೆಂಕಿ ಹಚ್ಚಿದ ನಂತರ ಕನಿಷ್ಠ 58 ಜನರು ಸಾವಿಗೀಡಾಗಿದ್ದರು. ಈ ಹತ್ಯೆಗಳು ಪ್ರತಿಭಟನೆಗಳು ಮತ್ತು ಗಲಭೆಗಳಿಗೆ ಕಾರಣವಾಗಿತ್ತು.




























