ಹೆಚ್.ಡಿ.ರೇವಣ್ಣ ಸನ್ಮಾನ ಮಾಡಿದ್ದಕ್ಕೆ ಗರಂ ಆದ ಕೇಂದ್ರ ಸಚಿವ!
ಹಾಸನ: ದೇವೇಗೌಡರ ನೂತನ ನಿವಾಸದೆದರು ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದಿಪ್ ಸಿಂಗ್ ಪುರಿ ಅವರ ಕಾರನ್ನು ನಿಲ್ಲಿಸಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಶಾಲು ಹೊದಿಸಿ, ಪುಷ್ಪಗುಚ್ಚ ನೀಡಿ ಸನ್ಮಾನ ಮಾಡಿದ್ದಾರೆ. ಈ ಘಟನೆಯ ಬಳಿಕ ಕಾರನ್ನು ಯಾಕೆ ನಿಲ್ಲಿಸಿದಿರಿ ಎಂದು ಬೆಂಗಾವಲು ಪಡೆಯ ವಿರುದ್ಧ ಸಚಿವ ಹರ್ದಿಪ್ ಸಿಂಗ್ ಪುರಿ ಗರಂ ಆಗಿದ್ದಾರೆ.
ಹಳೇಕೋಟೆ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ತೆರಳುತ್ತಿದ್ದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಹುಟ್ಟೂರು ಹರದನಹಳ್ಳಿ ಮಾರ್ಗವಾಗಿ ಹೋಗುವಾಗ ದೇವೇಗೌಡರ ನೂತನ ನಿವಾಸದೆದರು ನಿಂತಿದ್ದ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರನ್ನು ಕಂಡು ಬೆಂಗಾವಲು ಪಡೆ ಪೊಲೀಸರು ವಾಹನವನ್ನು ನಿಲ್ಲಿಸಿದ್ದರು. ಇದರಿಂದಾಗಿ ಸಚಿವ ಹರ್ದಿಪ್ ಸಿಂಗ್ ಪುರಿ ಕೋಪಗೊಂಡಿದ್ದಾರೆ.
ನಂತರ ಹರದನಹಳ್ಳಿಯಿಂದ ಹಳೇಕೋಟೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಹರ್ದಿಪ್ ಸಿಂಗ್ ಪುರಿ ಬೆಂಗಾವಲು ವಾಹನದ ಪೊಲೀಸರ ಮೇಲೆ ಗರಂ ಆದರು. ಮಾರ್ಗಮಧ್ಯೆ ಏಕೆ ವಾಹನ ನಿಲ್ಲಿಸಿದಿರಿ? ಯಾರು ನಿಮಗೆ ವಾಹನ ನಿಲ್ಲಿಸಲು ಹೇಳಿದ್ದು? ನನ್ನ ಸಮಯ ವ್ಯರ್ಥ ಮಾಡಿದ್ದೀರಿ ಎಂದು ಆಕ್ರೋಶ ಹೊರಹಾಕಿದರಲ್ಲದೆ, ಕರ್ತವ್ಯದಲ್ಲಿದ್ದ ಪೊಲೀಸರ ಹೆಸರು ಬರೆದುಕೊಳ್ಳುವಂತೆ ಆಪ್ತಸಹಾಯಕನಿಗೆ ಸೂಚಿಸಿದ್ದಾರೆ.




























