ವಯನಾಡು ಮಾದರಿಯ ಗುಡ್ಡ ಕುಸಿತದ ಭೀತಿಯಲ್ಲಿದೆ ಶಿರೂರು ಗ್ರಾಮದ ಮೇಲ್ಪಂಕ್ತಿ ಅಂಬೇಡ್ಕರ್ ಕಾಲೋನಿ

ಉಡುಪಿ: ಜಿಲ್ಲೆ ಬೈಂದೂರು ತಾಲೂಕು ಶಿರೂರು ಗ್ರಾಮದ ಮೇಲ್ಪಂಕ್ತಿ ಅಂಬೇಡ್ಕರ್ ಕಾಲೋನಿ ಎಂಬಲ್ಲಿನ ಸರ್ಕಾರಿ ಜಾಗದಲ್ಲಿ ನಿವೃತ್ತ ಅಧ್ಯಾಪಕ ರಾಮಕೃಷ್ಣ ಡಿ. ಮತ್ತು ಅವರ ಪುತ್ರ ರಾಮನಾಥ ಭಟ್ ಎಂಬುವರು ಅಕ್ರಮ ಗಣಿಗಾರಿಕೆ ನಡೆಸಿ ಗುಡ್ಡದ ಮಣ್ಣನ್ನು ಅಕ್ರಮವಾಗಿ ಮಣ್ಣುಸಾಗಾಟ ಮಾಡಿದ್ದ ಪರಿಣಾಮವಾಗಿ ಅಲ್ಲಿನ ಸುಮಾರು 15ರಿಂದ 20 ದಲಿತ ಕುಟುಂಬಗಳು ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತ ಮಾದರಿಯಲ್ಲಿ ದುರಂತಕ್ಕೀಡಾಗುವ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ ಮನೆಯಲ್ಲಿ ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಬೈಂದೂರು ತಹಶೀಲ್ದಾರ್ ಅವರಿಗೆ ಗಮನಕ್ಕೆ ತಂದಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಈವರೆಗೆ ಇಲ್ಲಿನ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಅಕ್ರಮ ಚಟುವಟಿಕೆ ನಡೆಯುತ್ತಿರುವ ಜಾಗವು ಸರ್ಕಾರಿ ಸ್ಥಳವಾಗಿದ್ದು, ಸರಕಾರಿ ಅಧಿಕಾರಿಗಳು ಕೂಡ ಈ ಅಕ್ರಮ ದಂದೆಯಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿಗಳು ಇದರಲ್ಲಿ ಶಾಮಿಲಾಗಿದ್ದು, ಹೀಗಾಗಿ ಈ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತರು ನಿರಂತರವಾಗಿ ಆಗ್ರಹಿಸುತ್ತಾ ಬಂದರೂ ತಾಲೂಕು ಕಚೇರಿ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆ. ಕಳೆದ ವರ್ಷ ಸಪ್ಟೆಂಬರ್ ತಿಂಗಳಿನಲ್ಲಿ ಇದೇ ರೀತಿ ಮಣ್ಣು ತೆಗೆದು ಪರಿಶಿಷ್ಟ ಜಾತಿಗೆ ಸೇರಿದ ಮಂಗಳ ಎಂಬವರ ಮನೆಗೆ ಹಾರಿ ಉಂಟಾಗಿತ್ತು ಸದ್ಯ ಒಂದು ವರ್ಷದಿಂದಲೂ ಮಂಗಳಾರ ಅವರ ಕುಟುಂಬವು ಮೂಲಭೂತ ಸೌಕರ್ಯ ಸಿಗದೇ ಗಂಜಿ ಕೇಂದ್ರದಲ್ಲಿ ಮಳೆ ಬರುವಾಗ ಟಾರ್ಪಲ್ ಹೊದ್ದುಕೊಂಡು ಮಲಗಿ ಜೀವನ ನಡೆಸುತ್ತಿದೆ. ಪುನರ್ವಸತಿ ಕಲ್ಪಿಸುವಂತೆ ಮತ್ತು ಕೂಡಲೇ ಮಂಗಳ ಇವರನ್ನು ಸೂಕ್ತ ಕಡೆ ಗಂಜಿ ಕೇಂದ್ರಕ್ಕೆ ವರ್ಗಾಯಿಸುವಂತೆ ಸ್ಥಳೀಯರು ಮನವಿ ಮಾಡುತ್ತಿದ್ದಾರೆ.
ರಾಮಕೃಷ್ಣ ಡಿ. ಮತ್ತು ರಾಮನಾಥ ಭಟ್ ಸೇರಿಕೊಂಡು ಶಿರೂರು ಮೇಲ್ಭಕ್ತಿ ಅಂಬೇಡ್ಕರ್ ಕಾಲೋನಿಯಲ್ಲಿ ವಾಸ ಮಾಡುತ್ತಿರುವ ದಲಿತ ಕುಟುಂಬಗಳನ್ನ ಬೆದರಿಸಿ ಅವರನ್ನ ಅಲ್ಲಿಂದ ಎಬ್ಬಿಸಿ ಮಣ್ಣು ಸಾಗಾಟ ಮಾಡುವ ಯೋಜನೆ ಹಾಕಿಕೊಂಡಿರುತ್ತಾರೆ ಎಂದು ಇಲ್ಲಿನ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ದಲಿತರ ಪರ ಇರುವ ಸರ್ಕಾರ ಅಂತ ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇದ್ದರೂ, ದಲಿಯರು ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಈ ಕುಟುಂಬಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕಿದೆ. ನಿದ್ರಿಸುವಂತೆ ನಟಿಸುತ್ತಿರುವ ಸ್ಥಳೀಯ ಆಡಳಿತಕ್ಕೆ ಮೇಲಾಧಿಕಾರಿಗಳು ಬಿಸಿಮುಟ್ಟಿಸಬೇಕಿದೆ. ಇಲ್ಲವಾದರೆ ವಯನಾಡು ಮಾದರಿಯ ದುರಂತವನ್ನು ತಪ್ಪಿಸಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth