ಬೆಕ್ಕು ಕಚ್ಚಿದ ಪರಿಣಾಮ ಮಹಿಳೆ ಸಾವು! ಏನಿದು ವಿಚಿತ್ರ ಘಟನೆ!

ಶಿವಮೊಗ್ಗ: ಬೆಕ್ಕು ಕಚ್ಚಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಸಾಕಿದ ಬೆಕ್ಕು ಕಚ್ಚಿದ್ದರೂ ಸರಿಯಾದ ಮುನ್ನೆಚ್ಚರಿಕೆ ವಹಿಸದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಳಘಟ್ಟದ ಗಂಗೀಬಾಯಿ(50) ಮೃತಪಟ್ಟ ಮಹಿಳೆಯಾಗಿದ್ದಾರೆ. ಇವರ ಕಾಲಿಗೆ ಎರಡು ತಿಂಗಳ ಹಿಂದೆ ಬೆಕ್ಕು ಕಚ್ಚಿತ್ತಂತೆ. ಬೆಕ್ಕು ಕಚ್ಚಿದ್ರೆ ಐದು ಇಂಜೆಕ್ಷನ್ ಪಡೆದುಕೊಳ್ಳಬೇಕು. ಆದರೆ ಒಂದು ಇಂಜೆಕ್ಷನ್ ಪಡೆದುಕೊಂಡಾಗಲೇ ಗಾಯಗುಣವಾಗಿತ್ತು ಅಂತ ಅವರು ಆ ಬಳಿಕ ಇಂಜೆಕ್ಷನ್ ಪಡೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ. ಇದರಿಂದಾಗಿ ರೇಬಿಸ್ ಸೋಂಕಿಗೊಳಗಾಗಿ ಮಹಿಳೆ ಮೃತಪಟ್ಟಿದ್ದಾರೆ.
ತರಲಘಟ್ಟದ ಕ್ಯಾಂಪ್ ನಲ್ಲಿ ಯುವಕನೊಬ್ಬನ ಮೇಲೆ ಮೊದಲು ಈ ಬೆಕ್ಕು ದಾಳಿ ಮಾಡಿತ್ತು. ನಂತರ ಗಂಗೀಬಾಯಿ ಅವರ ಕಾಲಿಗೆ ಕಚ್ಚಿತ್ತಂತೆ. ಇಂಜೆಕ್ಷನ್ ಪಡೆಯದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ಇದೀಗ ಮಹಿಳೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮಹಿಳೆಯ ಸಾವಿನಿಂದಾಗಿ ಕುಟುಂಬಸ್ಥರು ತೀವ್ರ ದುಃಖಿತರಾಗಿದ್ದಾರೆ.
ಯಾವುದೇ ಪ್ರಾಣಿಗಳು ಕಚ್ಚಿದರೂ ವೈದ್ಯರನ್ನು ಭೇಟಿಯಾಗಿ ಸರಿಯಾದ ಸಲಹೆ ಪಡೆದು ಅವರು ಹೇಳುವ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಯಾಕೆಂದ್ರೆ ಯಾವುದೇ ಪ್ರಾಣಿಯ ಜೊಲ್ಲು ಮನುಷ್ಯರ ಲೋಳೆ ಪೊರೆಯೊಡನೆ ಸಂಪರ್ಕಕ್ಕೆ ಬಂದರೆ, ಅದು ರೇಬಿಸ್ ನ್ನು ಹರಡಬಹುದು. ಹಾಗಾಗಿ ಮನೆಯ ಬೆಕ್ಕು, ನಾಯಿ ಕಚ್ಚಿದೆ ಎಂದು ಎಂದಿಗೂ ನಿರ್ಲಕ್ಷ್ಯವಹಿಸದೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97