ಕ್ರೀಡಾಂಗಣದಲ್ಲೇ ಕುಸಿದು ಬಿದ್ದು ಮೃತಪಟ್ಟ ಪಶುವೈದ್ಯ! - Mahanayaka

ಕ್ರೀಡಾಂಗಣದಲ್ಲೇ ಕುಸಿದು ಬಿದ್ದು ಮೃತಪಟ್ಟ ಪಶುವೈದ್ಯ!

shivappa badami
13/01/2024

ಪಶುವೈದ್ಯ ಇಲಾಖೆಯ ವಿಭಾಗ ಮಟ್ಟದ ಕ್ರಿಕೆಟ್ ಕ್ರೀಡಾಕೂಟಕ್ಕೆ ಆಗಮಿಸಿದ್ದ ಪಶುವೈದ್ಯ ಒಬ್ಬರು ಕ್ರೀಡಾಂಗಣದಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.


Provided by

ಕೊಡಗು ಜಿಲ್ಲೆಯ ಸೋಮವಾರಪೇಟೆಯ ಪಶುವೈದ್ಯರಾದ ಶಿವಪ್ಪ ಬಾದಾಮಿ (56) ಮೃತ ದುರ್ದೈವಿ. ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿ ವೇಳೆ ಈ ದುರ್ಘಟನೆ ಸಂಭವಿಸಿದೆ.

ಪಶುವೈದ್ಯ ಶಿವಪ್ಪ ಬಾದಾಮಿ ಕ್ರಿಕೆಟ್ ಆಡಿ  ನಂತರ ಕ್ರೀಡಾಂಗಣದಲ್ಲಿ ಕುಳಿತು ಕ್ರಿಕೆಟ್ ನೋಡುತ್ತಿದ್ದು ಅಲ್ಲಿಯೇ ಕುಸಿದು ಬಿದ್ದಿದ್ದಾರೆ.

ಸ್ಥಳದಲ್ಲಿದ್ದ ಇತರೆ ವೈದ್ಯರು ಚಿಕಿತ್ಸೆಗೆ ಮುಂದಾದರೂ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಬಾದಾಮಿ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಬಾದಾಮಿಯವರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ.

ಚಿಕ್ಕಮಗಳೂರು ಪಶುವೈದ್ಯ ಸಂಘ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಪಶುವೈದ್ಯರ ಕ್ರೀಡಾ ಕೂಟದಲ್ಲಿ ಏಳು ಜಿಲ್ಲೆಗಳ 12 ಕ್ರಿಕೆಟ್ ತಂಡಗಳು ಭಾಗವಹಿಸಿದ್ದವು. ಮೃತ ಶಿವಪ್ಪ ಬಾದಾಮಿ ಕೊಡಗು ಜಿಲ್ಲೆ ತಂಡವನ್ನು ಪ್ರತಿನಿಧಿಸಿದ್ದರು. ಶುಕ್ರವಾರದಿಂದ ಎರಡು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಶುಕ್ರವಾರ ಕೊಡಗು ಪರವಾಗಿ ಒಂದು ಪಂದ್ಯವಾಡಿದ್ದ ಶಿವಪ್ಪ ಬಾದಾಮಿ ನಂತರ ಕ್ರೀಡಾಂಗಣದಲ್ಲಿ ಕುಳಿತು ಇತರೆ ಪಂದ್ಯಗಳನ್ನು ವೀಕ್ಷಿಸುತ್ತಿದ್ದರು.

ಮ್ಯಾಚ್ ನಲ್ಲಿ ಉತ್ಸಾಹದಿಂದ ಆಡಿ ನಂತರ ಕುಳಿತಿದ್ದ  ಶಿವಪ್ಪ ಬಾದಾಮಿ ಅಕಾಲಿಕ ಮರಣಕ್ಕೆ ಪಶುವೈದ್ಯ ಲೋಕದ ಕಂಬನಿ ಮಿಡಿದಿದೆ. ನಂತರ ಕ್ರೀಡಾಕೂಟ ಸ್ಥಗಿತಗೊಳಿಸಲಾಯಿತು.

ಮೃತ ಶಿವಪ್ಪ ಬಾದಾಮಿ ಮೂಲತಃ ಬೆಳಗಾವಿ ಜಿಲ್ಲೆಯವರು ಎಂದು ತಿಳಿದುಬಂದಿದ್ದು, ಕೆಲ ವರ್ಷಗಳಿಂದ ಅವರು ಕೊಡಗು ಜಿಲ್ಲೆಯ ಪಶುವೈದ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇತ್ತೀಚಿನ ಸುದ್ದಿ