ಇಂದು ಸಂಜೆ ಮಹತ್ವದ ಸುದ್ದಿಗೋಷ್ಠಿ ಕರೆದ ಸಿಎಂ ಯಡಿಯೂರಪ್ಪ | ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ?
ಬೆಂಗಳೂರು: ಕೊರೊನಾ ಲಾಕ್ ಡೌನ್ ನಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ ರಾಜ್ಯ ಸರ್ಕಾರವು ತೀವ್ರ ಕಳಪೆ ಪ್ರದರ್ಶನ ನೀಡುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಸಂಜೆ 5 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದಾರೆ.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಕೋಟ್ಯಂತರ ಜನರು ತಮ್ಮ ಜೀವನೋಪಾಯವನ್ನೇ ಕಳೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರ 10 ಸಾವಿರ ರೂಪಾಯಿಗಳ ನೆರವನ್ನು ನೀಡಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ. ಆದರೆ, ಸಿಎಂ, ನಾವು ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸುವುದಿಲ್ಲ ಎಂದು ಹೇಳಿದ್ದರು.
ಇನ್ನೊಂದೆಡೆ ಸಿಎಂ ಯಡಿಯೂರಪ್ಪ ಅವರ ಸಂಪುಟ ಸದಸ್ಯ, ಸಚಿವ ಕೆ.ಎಸ್.ಈಶ್ವರಪ್ಪ, 10 ಸಾವಿರ ಕೊಡಲು ನಾವೇನು ನೋಟ್ ಪ್ರಿಂಟ್ ಮಾಡುತ್ತಿಲ್ಲ ಎಂದು ಹೇಳಿದ್ದರು. ಆಹಾರ ಸಚಿವ ಉಮೇಶ್ ಕತ್ತಿ, ಜನ ಸಾಯುತ್ತಾರೆ ಅದಕ್ಕೆ ನಾವೇನು ಮಾಡಲು ಸಾಧ್ಯ? ನಾವು ಉಳಿದರೆ ಸಾಕು ಎಂದು ಹೇಳಿಕೆ ನೀಡಿದ್ದರು. ಇಂತಹ ಬೇಜಾವಬ್ದಾರಿಯುತ ಹೇಳಿಕೆಗಳ ನಡುವೆಯೇ ಇದೀಗ ಸಿಎಂ ಯಡಿಯೂರಪ್ಪನವರು ಸುದ್ದಿಗೋಷ್ಠಿ ಕರೆದಿದ್ದಾರೆ.
ಸಿಎಂ ಯಡಿಯೂರಪ್ಪನವರು ಕೊರೊನಾ ಎರಡನೇ ಅಲೆ ಎದುರಿಸಲು ವಿಶೇಷ ಪ್ಯಾಕೇಜ್ ಘೋಷಿಸಲಿದ್ದಾರೆ ಎಂದು ಜನರು ನಿರೀಕ್ಷೆ ಮಾಡಿದ್ದಾರೆ. ಜೊತೆಗೆ ಕೊರೊನಾ ಲಸಿಕೆ ಸಮಸ್ಯೆಗಳಿಗೆ ಪರಿಹಾರಗಳನ್ನು ಹೇಳಲಿದ್ದಾರೆ ಎಂದೂ ನಿರೀಕ್ಷಿಸುತ್ತಿದ್ದಾರೆ. ಹಿಂದಿನ ಬಿಟ್ಟಿ ಸಲಹೆಗಳೇ ಮತ್ತೆ ಮುಂದುವರಿದರೆ, ಜನರು ಸರ್ಕಾರದ ಮೇಲೆ ಇಟ್ಟಿರುವ ನಿರೀಕ್ಷೆಗಳೆಲ್ಲವೂ ಸುಳ್ಳಾಗಬಹುದು.