ದಿಲ್ಲಿ ಹಿಂಸಾಚಾರಕ್ಕೆ ಸಂಚು ಆರೋಪ: ದೆಹಲಿ ಪೊಲೀಸರಿಗೆ ಹೈಕೋರ್ಟ್ ನಿಂದ ಎಚ್ಚರಿಕೆ

ದೆಹಲಿ ಹಿಂಸಾಚಾರಕ್ಕೆ ಸಂಚು ನಡೆಸಿದ್ದಾರೆಂಬ ಆರೋಪದಲ್ಲಿ ಜೈಲಲ್ಲಿರುವ ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್ ಅವರ ಜಾಮೀನು ಕೋರಿಕೆಯನ್ನು ವಿರೋಧಿಸುವ ವಾದವನ್ನು ಮುಂದೂಡಿಕೊಂಡು ಹೋಗುತ್ತಿರುವ ದೆಹಲಿ ಪೊಲೀಸರಿಗೆ ದೆಹಲಿ ಹೈಕೋರ್ಟ್ ಪ್ರಬಲ ಮುನ್ನೆಚ್ಚರಿಕೆ ನೀಡಿದೆ. ನಿಮಗೆ ಅನಂತ ಅವಕಾಶ ನೀಡಲು ಸಾಧ್ಯವಿಲ್ಲ ಮತ್ತು ವಾದ ಮುಂದೂಡುವ ನಿಮ್ಮ ಈ ಚಾಳಿಯನ್ನು ನಿಲ್ಲಿಸಬೇಕಾಗುತ್ತದೆ.
ಎಂದು ಜಸ್ಟಿಸ್ ನವೀನ್ ಚಾವ್ಲ ಮತ್ತು ಶಾಲಿಂದರ್ ಕೌರ್ ಅವರಿದ್ದ ಪೀಠ ಖಡಕ್ ಎಚ್ಚರಿಕೆ ನೀಡಿದೆ. ಈಗಾಗಲೇ ಜಾಮೀನು ಕೋರಿಕೆಗೆ ಸಂಬಂಧಿಸಿ ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್ ಅವರ ವಾದವನ್ನು ನ್ಯಾಯಾಲಯ ಆಲಿಸಿದೆ. ಜನವರಿ 9ರಂದು ಈ ಪ್ರಕರಣದ ವಿಚಾರಣೆ ನಡೆದಿತ್ತು.
ಆದಷ್ಟು ಶೀಘ್ರವಾಗಿ ತಮ್ಮ ವಾದವನ್ನು ಪೂರ್ತಿಗೊಳಿಸಬೇಕು ಎಂದು ದೆಹಲಿ ಪೊಲೀಸರ ಪರ ಹಾಜರಾಗಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಗೆ ನ್ಯಾಯಾಲಯ ಆದೇಶಿಸಿತ್ತು. ಪ್ರಕರಣದಲ್ಲಿ ಈ ಇಬ್ಬರ ಪಾತ್ರದ ಕುರಿತಂತೆ ಚಾರ್ಟ್ ನೀಡಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಆದರೆ ಇದಕ್ಕೆ ಇನ್ನೂ ಎರಡು ದಿನಗಳ ಕಾಲ ಅವಕಾಶ ಕೊಡಬೇಕು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ನ್ಯಾಯಾಲಯದಲ್ಲಿ ಕೋರಿಕೊಂಡರು. ಇದು ನ್ಯಾಯಾಧೀಶರನ್ನು ರೇಗಿಸಿತು. ನಿಮಗೆ ಅನಂತ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.
2019 ಡಿಸೆಂಬರ್ 13ರಂದು ಜಾಮಿಯಾ ವಿಶ್ವವಿದ್ಯಾಲಯದ ಹತ್ತಿರವಿರುವ ಜಾಮಿಯಾ ನಗರದಲ್ಲಿ ನಡೆಸಿದ ಭಾಷಣಕ್ಕೆ ಸಂಬಂಧಿಸಿ 2020 ಜನವರಿ 25ರಂದು ಶರ್ಜಿಲ್ ಇಮಾಮ್ ರನ್ನು ಅರೆಸ್ಟ್ ಮಾಡಲಾಯಿತು.
ಅಂದಿನಿಂದ ಈವರೆಗೆ ಶರ್ಜಿಲ್ ಜೈಲಲ್ಲಿದ್ದಾರೆ. ಬಂಧನದ ಬಳಿಕ ಯುಎಪಿಎ ಪ್ರಕರಣವನ್ನು ಅವರ ಮೇಲೆ ಹೇರಲಾಯಿತು. ಇದಕ್ಕಿಂತ ಮೊದಲು ಹಲವು ಬಾರಿ ಇವರು ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಜಾಮೀನು ಸಿಗದೇ ಇದ್ದಾಗ ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಈ ಜಾಮೀನು ಅರ್ಜಿಗೆ ಸಂಬಂಧಿಸಿ ಶೀಘ್ರವೇ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟಿಗೆ ಸೂಚನೆ ನೀಡಿತ್ತು.
2020 ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರದ ಪ್ರಧಾನ ಸಂಚುಕೋರ ಎಂದು ಹೇಳಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ರನ್ನು 2020 ಸೆಪ್ಟೆಂಬರ್ 14ರಂದು ಪೊಲೀಸರು ಬಂಧಿಸಿದರು. ಜಾಮೀನು ಕೋರಿ ಅವರು ಹಲವು ಬಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj