ಧರ್ಮಸ್ಥಳಕ್ಕೆ ತೆರಳಿದ್ದ ಅನನ್ಯ ಭಟ್ ಏನಾದಳು!? - Mahanayaka

ಧರ್ಮಸ್ಥಳಕ್ಕೆ ತೆರಳಿದ್ದ ಅನನ್ಯ ಭಟ್ ಏನಾದಳು!?

ananya bhat
16/07/2025

  • ಈಗಲೂ ಹುಡುಕಾಡುತ್ತಿರುವ ತಾಯಿ ಸುಜಾತಾ ಭಟ್

Provided by

Mahanayaka — 2003ರಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದ ಅನನ್ಯ ಭಟ್ ಏನಾದಳು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.  ಮಣಿಪಾಲದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಅನನ್ಯಾ ಭಟ್(20) 22 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದಳು.

ತಾಯಿ ಸುಜಾತಾ ಭಟ್ ಮಂಗಳವಾರ ತಮ್ಮ ವಕೀಲರೊಂದಿಗೆ ಮಂಗಳೂರಿಗೆ ಆಗಮಿಸಿ, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ, ತಮ್ಮ ಮಗಳ ನಿಗೂಢ ನಾಪತ್ತೆ ಪ್ರಕರಣದಲ್ಲಿ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಅಂದು ಏನು ನಡೆದಿತ್ತು?

ತನ್ನ ಸ್ನೇಹಿತೆಯರೊಂದಿಗೆ ಧರ್ಮಸ್ಥಳಕ್ಕೆ ತೆರಳಿದ್ದ ಅನನ್ಯ ಭಟ್ ನಿಗೂಢವಾಗಿ ನಾಪತ್ತೆಯಾಗಿದ್ದಳು.  ಘಟನೆ ವೇಳೆ ಕೋಲ್ಕತ್ತಾದಲ್ಲಿದ್ದ ಅನನ್ಯ ಭಟ್ ತಾಯಿ ಸುಜಾತಾ ಭಟ್ ಗೆ ಅನನ್ಯಳ ಸ್ನೇಹಿತೆಯರು ಆಕೆ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿದಾಗ ಮೂರು ದಿನಗಳ ನಂತರ ಕೋಲ್ಕತ್ತಾದಿಂದ ಧರ್ಮಸ್ಥಳಕ್ಕೆ ಅವರು ಆಗಮಿಸಿದ್ದರು. ಬಳಿಕ ಮಗಳನ್ನು ಎಲ್ಲ ಸ್ಥಳಗಳಲ್ಲಿ ಹುಡುಕಾಡಿದರು. ನಂತರ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅವರು ದೂರು ಸ್ವೀಕರಿಸಲಿಲ್ಲ, ನಿನ್ನ ಮಗಳು ಯಾರೊಂದಿಗಾದರೂ ಹೋಗಿರಬಹುದು ಎಂದು ಬೆದರಿಸಿ ವಾಪಸ್ ಕಳುಹಿಸಿದರಂತೆ. ಇದಲ್ಲದೇ ಆ ಸಂದರ್ಭದಲ್ಲಿ ಅನನ್ಯ ತಾಯಿ, ತನ್ನ ಮಗಳ ಬಗ್ಗೆ ವಿಚಾರಿಸಿದ್ದಕ್ಕೆ ಪ್ರಭಾವಿಗಳು ಅವರನ್ನು ಕಟ್ಟಿ ಹಾಕಿ ಥಳಿಸಿದ್ದರು, ಇದರಿಂದ ಅವರು ಕೋಮಾಕ್ಕೆ ಜಾರಿದ್ದರು. ಎನ್ನುವ ವಿಚಾರಗಳನ್ನೂ ಅನನ್ಯ ತಾಯಿ ಯೂಟ್ಯೂಬ್ ಚಾನೆಲ್ ಗಳಿಗೆ ನೀಡಿದ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಬದುಕಿನ ಕೊನೆಯ ಆಸೆ:

ಮಗಳು ನಿಗೂಢವಾಗಿ ನಾಪತ್ತೆಯಾಗಿರುವ ಕೊರಗಿನಲ್ಲಿ ಇಲ್ಲಿಯವರೆಗೆ ಕಳೆದಿದ್ದೇನೆ. ಪತಿ ತೀರಿ ಹೋದ ನಂತರ ಅವಳೇ ನನಗೆ ಆಸರೆಯಾಗಿದ್ದಳು. ಅವಳು ಇಂದು ನನ್ನೊಂದಿಗಿಲ್ಲ, ಇತ್ತೀಚೆಗೆ ವ್ಯಕ್ತಿಯೊಬ್ಬ ಧರ್ಮಸ್ಥಳದಲ್ಲಿ ಅನಾಥ ಮೃತದೇಹಗಳ ವಿಲೇವರಿ ಮಾಡಿರುವ ಬಗ್ಗೆ ಪೊಲೀಸರಿಗೆ ನೀಡಿರುವ ಹೇಳಿಕೆ ಸುದ್ದಿ ಮಾಧ್ಯಮಗಳಲ್ಲಿ ನೋಡಿದೆ. ನನ್ನ ಮಗಳ ಮಾಹಿತಿ ಏನಾದರೂ ಸಿಗಬಹುದೇ ಎಂಬ ಆಸೆಯಿಂದ ಹೈಕೋರ್ಟ್ ವಕೀಲರಾದ ಮಂಜುನಾಥ್ ಎನ್. ಅವರನ್ನು ಸಂಪರ್ಕಿಸಿ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಟಿಯಾದೆ.

ನನಗೆ ಇನ್ನು ಏನೂ ಉಳಿದಿಲ್ಲ, ಮಗಳು ಮೃತಪಟ್ಟಿದ್ದರೆ, ಆಕೆಯ ಅಸ್ಥಿಯಾದರೂ ಸಿಕ್ಕರೆ ಸಾಕು, ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸುತ್ತೇನೆ. ಇದು ನನ್ನ ಬದುಕಿನ ಕೊನೆಯ ಆಸೆ ಎಂದು ಸುಜಾತಾ ಭಟ್ ಗದ್ಗದಿತರಾದರು, ಕಣ್ಣೀರು ಹಾಕಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ