ಶುರುವಾಯಿತು ಹಕ್ಕಿ ಜ್ವರದ ಭೀತಿ: 4 ವರ್ಷದ ಮಗುವಿನಲ್ಲಿ ಸೋಂಕು ಪ್ರತ್ಯಕ್ಷ - Mahanayaka

ಶುರುವಾಯಿತು ಹಕ್ಕಿ ಜ್ವರದ ಭೀತಿ: 4 ವರ್ಷದ ಮಗುವಿನಲ್ಲಿ ಸೋಂಕು ಪ್ರತ್ಯಕ್ಷ

12/06/2024


Provided by

ಹಕ್ಕಿಗಳಿಗೆ ಸೀಮಿತವಾಗಿದ್ದ ಹಕ್ಕಿ ಜ್ವರ ಈಗ ಭಾರತದಲ್ಲಿ ಮನುಷ್ಯರಲ್ಲಿಯೂ ಕಾಣಿಸುತ್ತಿದೆ. ಪಶ್ಚಿಮ ಬಂಗಾಳದ 4 ವರ್ಷದ ಮಗುವಿಗೆ ಹೆಚ್‌9ಎನ್‌2 ವೈರಸ್‌ ಉಂಟಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ವೈರಸ್‌ಗೆ ತುತ್ತಾಗಿರುವ ಮಗುವಿಗೆ ಗಂಭೀರ ಉಸಿರಾಟದ ಸಮಸ್ಯೆ ಉಂಟಾದ ನಂತರ ಮಕ್ಕಳ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ.

ಹೆಚ್‌9ಎನ್‌2 ವೈರಸ್‌ ಪ್ರಕರಣ ಮಾನವರಿಗೆ ಉಂಟಾದ ಎರಡನೇ ಪ್ರಕರಣವಾಗಿದ್ದು, ಈ ಮೊದಲು 2019ರಲ್ಲಿ ಮೊದಲು ವರದಿಯಾಗಿತ್ತು.

ಎರಡೂವರೆ ವರ್ಷದ ಹೆಣ್ಣು ಮಗುವಿಗೆ ಜೂನ್‌ 7 ರಂದು ಹೆಚ್‌5ಎನ್‌1 ಹಕ್ಕಿ ಜ್ವರವಿರುವುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಆಸ್ಟ್ರೇಲಿಯಾದ ಐಸಿಯುವಿನಲ್ಲಿ ದಾಖಲಿಸಲಾಗಿತ್ತು. ಈ ಮಗುವಿನ ಕುಟುಂಬ ಇತ್ತೀಚಿಗಷ್ಟೆ ಭಾರತಕ್ಕೆ ಪ್ರಯಾಣ ಬೆಳೆಸಿತ್ತು.

ಹೆಚ್‌9ಎನ್‌2 ಹಕ್ಕಿ ಜ್ವರ ‘ಎ’ ಮಾದರಿ ವೈರಸ್‌ ಆಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಪ್ರಾಣಿ, ಪಕ್ಷಿಗಳ ನಡುವೆ ಪಸರಿಸುತ್ತಾದರೂ, ಮಾನವರಿಗೂ ಹರಡುತ್ತದೆ. ಈ ವೈರಸ್‌ ಶ್ವಾಸಕೋಶದ ಮೇಲ್ಭಾಗದಿಂದ ಸೌಮ್ಯವಾಗಿ ಹರಡುವುದರ ಜೊತೆ ಗಂಭೀರವಾದ ಕಾಯಿಲೆಗಳನ್ನು ಉಂಟು ಮಾಡುತ್ತದೆ. ಕಣ್ಣುಗಳು ಕೆಂಪಾಗಿ ಉರಿಯುವುದು, ಅತಿಸಾರದಂತಹ ಜೀರ್ಣಾಂಗ ಸಮಸ್ಯೆ, ಅತಿಯಾದ ತಲೆ ನೋವು ಹಾಗೂ ಮೆದುಳಿನ ಮೇಲೆ ಪರಿಣಾಮ ಬೀರುವ ರೋಗಗಳು ಹೆಚ್‌9ಎನ್‌2 ಹಕ್ಕಿ ಜ್ವರದ ಪ್ರಮುಖ ಲಕ್ಷಣಗಳಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಈ ಹಕ್ಕಿಜ್ವರದಿಂದ ಸಾವು ಕೂಡ ಸಂಭವಿಸಬಹುದು. ಮಾನವರಿಗೆ ತಗಲುವ ಈ ವೈರಸ್‌ನ ಗಂಭೀರತೆಯನ್ನು ಪತ್ತೆ ಹಚ್ಚಲು ಮತ್ತಷ್ಟು ಪ್ರಯೋಗಾಲಯಗಳ ಪರೀಕ್ಷೆಯ ಅಗತ್ಯವಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ