ಉದ್ಯೋಗ ಸೃಷ್ಟಿಯ ಹೊಣೆ ಯಾರದು?

- ದಮ್ಮಪ್ರಿಯ, ಬೆಂಗಳೂರು
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ಮಾಣ ಮಾಡಿದ ದಿನದಂದೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್(Dr. Babasaheb Ambedkar) ಅವರು “ರಾಜಕೀಯ ಅಧಿಕಾರವೆಂಬುದು ಎಲ್ಲಾ ಸಮಸ್ಯೆಗಳ ಪರಿಹಾರದ ಕೀಲಿ ಕೈ, ರಾಜಕೀಯ ಅಧಿಕಾರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ” ಎಂದು ಹೇಳುತ್ತಾರೆ.
ಇಂತಹ ಅಭಿವೃದ್ಧಿ ಕಾರ್ಯಗಳನ್ನು ಬದಿಗೊತ್ತಿ, ಇತ್ತೀಚಿನ ಸರ್ಕಾರಗಳು ಜನಪರ ಕಾಳಜಿಗಿಂತ, ಹೆಚ್ಚಾಗಿ ಬಂಡವಾಳ ಶಾಹಿಗಳ ಪರವಾದಂತಹ ಸರ್ಕಾರವಾಗಿ ಕಾರ್ಯನಿರ್ವಹಿಸುತ್ತಿರುವುದು ಬಹಳ ಬೇಸರದ ಸಂಗತಿ. ಯುವ ಜನತೆಯ ಉದ್ಯೋಗ ಸೃಷ್ಟಿಯ ಹೊಣೆಗಾರಿಕೆಯನ್ನು ಹೊತ್ತ ಸರ್ಕಾರಗಳು, ನಿರುದ್ಯೋಗ ವ್ಯವಸ್ಥೆಯನ್ನು ಯಥಾವತ್ತಾಗಿ ಕಾಪಾಡಿಕೊಂಡು ಬರುತ್ತಿವೆಯೇ ಹೊರತು ಉದ್ಯೋಗ ಸೃಷ್ಟಿಯ ಹೊಣೆಯನ್ನು ಯುವಕರ ಮೇಲೇರುತ್ತಿವೆ. ಯುವಕರು ಸ್ವ ಉದ್ಯೋಗ ಕೈಗೊಳ್ಳಲಿ, ಪಕೋಡ ಮಾರುವುದನ್ನು ಕಲಿತುಕೊಳ್ಳಲಿ ಎನ್ನುವ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವಲ್ಲಿ ಮುಂದಾಗಿವೆ.
ಆದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನದ ಅಡಿಯಲ್ಲಿ ಭಾರತೀಯರಿಗೆ ದಕ್ಕಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಕಳೆದ 75 ವರ್ಷಗಳ ಆಳ್ವಿಕೆಯ ಎಲ್ಲಾ ಸರ್ಕಾರಗಳು ಸೋಲನ್ನು ಒಪ್ಪಿಕೊಳ್ಳುವ ಸಂದರ್ಭದಲ್ಲಿ, ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರವು ದೊಡ್ಡ ದೊಡ್ಡ ಬಂಡವಾಳ ಶಾಹಿಗಳ ಕಡೆಗೆ ಮುಖ ಮಾಡುವ ಬದಲು ಮಧ್ಯಮ ವರ್ಗ ಮತ್ತು ಕೆಳವರ್ಗದ ಜನರಿಗೆ ಮತ್ತು ಮಹಿಳೆಯರಿಗೆ, ಯುವ ಜನತೆಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಕಾರ್ಯವನ್ನು ನಿರ್ವಹಿಸುವಲ್ಲಿ ಬಹಳಷ್ಟು ಯಶಸ್ಸನ್ನು ಕಂಡುಕೊಂಡಿದೆ ಎನ್ನುವುದಕ್ಕೆ ರಾಜ್ಯ ಸರ್ಕಾರ ರೂಪಿಸಿರುವ ಐದು ಯೋಜನೆಗಳು ಬಹಳ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ ಎನ್ನಬಹುದೇನೋ !!!.
ಮಧ್ಯಮ ವರ್ಗ ಮತ್ತು ಕೆಳ ವರ್ಗದ, ಮಹಿಳೆಯರು ಹಾಗೂ ಯುವ ಜನರು ತನ್ನ ಬದುಕಿನ ಭವಣೆಗಳನ್ನು ನಿಭಾಯಿಕೊಳ್ಳಲು ಕಷ್ಟವಾಗುವ ಸಂದರ್ಭದಲ್ಲಿ ಸರ್ಕಾರದ 5 ಮೂಲಭೂತ ಯೋಜನೆಗಳು ಈ ವರ್ಗದ ಜನರಿಗೆ ಬಹಳಷ್ಟು ಆತ್ಮ ಬಲ ಮತ್ತು ಸ್ವಾಭಿಮಾನವಾಗಿ ಬದುಕುವ ಛಲವನ್ನು ತಂದುಕೊಟ್ಟವು ಎಂದರೆ ತಪ್ಪಾಗಲಾರದು.
“ಅನ್ನಭಾಗ್ಯ”(Annabhagya) ಒಂದು ಹೊತ್ತಿನ ಊಟಕ್ಕೂ ಕಷ್ಟವಾಗಿರುವ ಸಾಕಷ್ಟು ಕುಟುಂಬಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡಿದ ಮೂಲಭೂತ ಸೌಕರ್ಯಗಳಲ್ಲಿ ಬಹಳ ಪ್ರಮುಖವಾದದ್ದು ಹಸಿದ ಹೊಟ್ಟೆಗೆ ಅನ್ನವನ್ನು ನೀಡುವುದು. ಇದನ್ನ ಉಚಿತ ಅಥವಾ ಬಿಟ್ಟಿ ಭಾಗ್ಯ ಎಂದು ಕರೆಯುವ ಜನರು ಈ ದೇಶದ ಬಡತನದ ನಿವಾರಣೆಯನ್ನು ಹೋಗಲಾಡಿಸಲು ನಿರಾಕರಿಸುವವರು ಹಾಗೂ ಹಸಿವಿನ ದಾಹವನ್ನು ತಿಳಿಯದವರು ಎನ್ನಬಹುದು. ಇವರು ಮಾತ್ರ ಇದು ಉಚಿತ ಅಥವಾ ಬಿಟ್ಟಿ ಭಾಗ್ಯ ಎನ್ನುವರು, ಇವರಿಗೆ ಮೂಲಭೂತ ಸೌಕರ್ಯಗಳು ಅಂದರೆ ಏನು ಎನ್ನುವುದೇ ಗೊತ್ತಿರುವುದಿಲ್ಲ ಎನ್ನಬಹುದು. ಆದರೆ ಹಸಿದವರಿಗೆ ಒಂದು ಒತ್ತಿನ ಊಟಕ್ಕಾಗಿ ದುಡಿಯುವ ಶ್ರಮಜೀವಿಗಳಿಗೆ, ತಮ್ಮ ಬದುಕಿಗೆ ಆಶ್ರಯವೇ ಇಲ್ಲದಂತ ಕುಟುಂಬಗಳಿಗೆ ಈ ಯೋಜನೆ ಅವರ ಬದುಕಿಗೆ ಆಶಾಕಿರಣವಾಗಿದೆ ಎನ್ನಬಹುದು.
“ಗೃಹ ಲಕ್ಷ್ಮಿ ಯೋಜನೆ”(Griha Lakshmi Yojana ): ಈ ನಾಡಿನಲ್ಲಿರುವ ಮಧ್ಯಮ ವರ್ಗ ಮತ್ತು ಕೆಳವರ್ಗದ ಬಹುತೇಕ ಮನೆಯವರು ತನ್ನ ಕುಟುಂಬದ ನಿರ್ವಹಣೆಗಾಗಿ ಕೇವಲ ಹತ್ತು ಸಾವಿರ ರೂಪಾಯಿಗಳಿಗೆ ಗಾರ್ಮೆಂಟ್ಸ್ ಗಳಲ್ಲಿ ಅಥವಾ ಸಣ್ಣ ಪುಟ್ಟ ಅಂಗಡಿಗಳಲ್ಲಿ ತಿಂಗಳು ಪೂರ್ತಿ ದುಡಿದು ತಿಂಗಳ ಕೊನೆಯೆಲ್ಲಿ ಆಹಾರಕ್ಕೆ, ಮನೆ ಬಾಡಿಗೆಗೆ, ಮಕ್ಕಳ ಶಿಕ್ಷಣದ ವೆಚ್ಚಕ್ಕೆ, ಪರದಾಡುವ ಸ್ಥಿತಿಯಲ್ಲಿದ್ದ ಇಂತಹ ಸಂದರ್ಭದಲ್ಲಿ ತಿಂಗಳಿಗೆ 2000 ರೂಪಾಯಿ ನೀಡುವ ಯೋಜನೆಗಳನ್ನು ಜಾರಿ ಮಾಡಿದ್ದು ಹಲವಾರು ಕುಟುಂಬಗಳ ಮಹಿಳೆಯರಿಗೆ ದೊಡ್ಡ ಶಕ್ತಿಯನ್ನು ತುಂಬಿತ್ತು,
“ಉಚಿತ ಸಾರಿಗೆ” (Free transportation): ಕೇವಲ ದಿನಗೂಲಿಯನ್ನು ಪಡೆದ ಪೋಷಕರು, ತಮ್ಮ ಮಕ್ಕಳ ಶಿಕ್ಷಣ ಮತ್ತು ಊಟದ ವ್ಯವಸ್ಥೆಗೆ ಕಷ್ಟವಿದ್ದಂತಹ ಸಂದರ್ಭದಲ್ಲಿ, ಹೆಣ್ಣು ಮಕ್ಕಳಿಗೆ ಬಸ್ ಪಾಸ್ ಹಣಕ್ಕೂ ಕಷ್ಟವಾಗಿದ್ದು, ಪೆಟ್ರೋಲ್ ದರವನ್ನು ಹೆಚ್ಚಿಸಿದ ಸಂದರ್ಭದಲ್ಲಿ ಸ್ವಂತ ವಾಹನವಿರಲಿ, ಬಸ್ ಟಿಕೇಟ್ ಪಡೆಯಲು ಕಷ್ಟವಾಗುತ್ತಿದ್ದ ಮಹಿಳೆಯರಿಗೆ ಉದ್ಯೋಗಕ್ಕೆ ತೆರಳಲು ಮಾಸಿಕ ಪಾಸ್ ಬಹುದೊಡ್ಡ ಹೊರೆಯಾಗಿದ್ದು ಇಂತಹ ಸಮಸ್ಯೆಗಳನ್ನು ಮನಗಂಡಂತಹ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಮಾಡಿದ್ದರಿಂದ ಮಹಿಳೆಯರು ತಮ್ಮ ಪ್ರಯಾಣದ ದರವನ್ನ ಮಕ್ಕಳ ಶಿಕ್ಷಣಕ್ಕೆ, ಸಂಸಾರದ ನಿರ್ವಹಣೆಗೆ ಬಳಸಿಕೊಂಡಿದ್ದು ಕುಟುಂಬವು ಸ್ವಲ್ಪಮಟ್ಟಿನ ಆರ್ಥಿಕ ಸುಧಾರಣೆಯನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಈ ಯೋಜನೆ ಬಳಕೆಯಲ್ಲಿ ಬಡವ,ಶ್ರೀಮಂತ ಎನ್ನುವ ತಾರತಮ್ಯವನ್ನು ಕಾಣದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು ಎನ್ನುವುದನ್ನು ತೋರಿಸಿಕೊಟ್ಟಿತು.
“ಗೃಹ ಜ್ಯೋತಿ”(Griha Joyti): ಬಹುತೇಕ ಮಧ್ಯಮ ವರ್ಗ ಮತ್ತು ಕೆಳವರ್ಗದ ಜನರ ಸಂಪಾದನೆ ಮಕ್ಕಳ ಶುಲ್ಕವನ್ನು ಕಟ್ಟಿದರೆ ಊಟಕ್ಕೆ ಕಷ್ಟವಾಗುತ್ತದೆ, ಊಟದ ವ್ಯವಸ್ಥೆಯನ್ನು ಮಾಡಿದರೆ, ವಿದ್ಯುತ್ ಬಿಲ್ ಕಟ್ಟಲು ಕಷ್ಟವಾಗುತ್ತದೆ, ವಿದ್ಯುತ್ ಬಿಲ್ ಕಟ್ಟಿದರೆ ನಿತ್ಯ ಪ್ರಯಾಣ ಮಾಡಲು ಮಾತಿಕ ಪಾಸ್ ತೆಗೆದುಕೊಳ್ಳಲು ಕಷ್ಟವಾಗುತ್ತದೆ ಇವೆಲ್ಲವೂ ಮೂಲಭೂತ ಸೌಕರ್ಯಗಳೇ!! ಎನ್ನುವುದನ್ನು ಮನ ಗಂಡ ಕರ್ನಾಟಕದ ಜನಪರ ಸರ್ಕಾರ ಉಚಿತ ವಿದ್ಯುತ್ ವ್ಯವಸ್ಥೆಯನ್ನು ಜಾರಿ ಮಾಡಿದ್ದು ಇದು ಹೆಚ್ಚಾಗಿ ಮಧ್ಯಮ ಮತ್ತು ಕೆಳವರ್ಗದ ಜನಸಾಮಾನ್ಯರಿಗೆ ಸುಮಾರು 1000 ದಿಂದ 1500 ವರವಿಗೂ ಉಳಿತಾಯವಾಗಿ ಮತ್ತೊಂದು ಅಗತ್ಯತೆಗೆ ಆ ಹಣವನ್ನು ಬಳಸಿಕೊಳ್ಳಲು ಅನುಕೂಲವಾಯಿತು. ಆಹಾರದಲ್ಲಿ ಹಸಿವಿನ ದಾಹವನ್ನು ನೀಗಿಸಿ, ಸಾರಿಗೆಯಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ವ್ಯವಸ್ಥೆಯನ್ನು ಜಾರಿಮಾಡಿತು, ತಮ್ಮ ನಿತ್ಯ ಜೀವನದಲ್ಲಿ ತಿಂಗಳಿಗೊಮ್ಮೆ 2000 ರೂಪಾಯಿಗಳನ್ನು ಮಹಿಳೆಯ ಸ್ವಾವಲಂಬನೆಯ ಬದುಕಿಗಾಗಿ ನೀಡಿದ, ಮನೆಯ ಬದುಕಿನ ಬೆಳಕಿನ ಕಿರಣವಾಗಿ ಉಚಿತ ವಿದ್ಯುತ್ ವ್ಯವಸ್ಥೆಯನ್ನು ನಿರ್ಮಾಣ ಮಾಡಿದ ಇಂತಹ ಸರ್ಕಾರಗಳು ಹಾಗೂ ಜನಪರ ರಾಜಕಾರಣಿಗಳು ಸದಾ ನಾಡಿನ ಒಳಿತಿಗೆ ದುಡಿಯುತ್ತಿರುವವರನ್ನು ಗೌರವಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಲಿ.
“ಯುವಶಕ್ತಿ”(Yuva Shakti) : ಈ ಯೋಜನೆಯ ಹಿಂದೆ ಬಹುದೊಡ್ಡ ಆತ್ಮವಿಶ್ವಾಸ ಹಾಗೂ ಯುವ ಜನತೆಗೆ ದೊಡ್ಡ ಶಕ್ತಿಯಾಗಿದೆ. ಯುವಕಾರಲ್ಲಿ ಶೇಕಡ 55% ರಷ್ಟು ಇವತ್ತಿಗೂ ಆರ್ಥಿಕ ಅಭದ್ರತೆಯಿಂದ ಬದುಕುವ ಸಮಾಜದೊಳಗೆ ಉದ್ಯೋಗ ಸೃಷ್ಠಿಯ ಬಗ್ಗೆ ಕೇವಲ ಪುಂಕನು ಪುಂಕವಾಗಿ ಪುಕ್ಕಟ್ಟೆ ಭಾಷಣ ಮಾಡಿ, ದುಡಿಯುವ ಕೈಗಳಿಂದ ಉದ್ಯೋಗವನ್ನು ಕಸಿದುಕೊಂಡು, ಪಕೋಡ ಮಾರಲು ಕರೆ ನೀಡಿ, ನಯವಾಗಿ ಸಮಾಜವನ್ನು ವಂಚಿಸಿ ದೇಶದಲ್ಲಿನ ಸುಮಾರು 33 ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರ ಕೈಗೊಪ್ಪಿಸಿ ನಿರುದ್ಯೋಗ ಸೃಷ್ಟಿಯಲ್ಲಿ ಮುಂದಾದ ಜನ ವಿರೋಧಿ ಹಾಗೂ ಯುವ ಜನರ ಬದುಕಿಗೆ ಪೆಟ್ಟು ನೀಡಿದ ಸರ್ಕಾರದ ನೀತಿಯನ್ನು ಖಂಡಿಸಿ ಯುವ ಜನರಿಗೆ ಯುವಶಕ್ತಿ ಯೋಜನೆಯನ್ನು ಜಾರಿ ಮಾಡಿರುವುದು ಬಹಳ ಸ್ವಾಗತರ್ಹ. ಈ ಯೋಜನೆಯಲ್ಲಿ ತಿಂಗಳಿಗೆ 3000 ರೂಪಾಯಿಗಳನ್ನು ನೀಡುವ ಮೂಲಕ ಸ್ವಾಭಿಮಾನದಿಂದ ಬದುಕುವ ಮಾರ್ಗ ತೋರಿದ ಇಂದಿನ ಸರ್ಕಾರ ಯುವ ಜನತೆಯ ಬಗ್ಗೆ ಬಹಳಷ್ಟು ಕಾಳಜಿಯನ್ನು ಹೊಂದಿರುವುದನ್ನು ಕಾಣಬಹುದು.
ಮೇಲಿನ ಈ 5 ಯೋಚನೆಗಳು ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜನಸಾಮಾನ್ಯರಿಗೆ ನೀಡಬೇಕಾದಂತಹ ಮೂಲಭೂತ ಸೌಕರ್ಯಗಳನ್ನು ತಪ್ಪದೇ ನೀಡಲೇಬೇಕೆ ಹೊರತು ಯಾವುದೇ ಉಚಿತ ಅಥವಾ ಪುಕ್ಕಟೆ ಎಂದು ಹೇಳುವಂತಿಲ್ಲ. ಒಂದು ಕುಟುಂಬದ ನಿರ್ವಹಣೆಗೆ ಆಹಾರದ ವೆಚ್ಚ ಸರಾಸರಿ ಬೆಲೆ 12000 ರೂಪಾಯಿ, ಅದನ್ನು ನೀವಾರಿಸಲಾಯಿತು. ವಿದ್ಯುತ್ ಬಿಲ್ಲು ಸರಾಸರಿ 1000 ರೂ. ಪ್ರಯಾಣದರ, 1500 ರೂ, ಮನೆಯ ನಿತ್ಯದ ಹಾಲು ಮೊಸರು ಕಾಫಿ ಟೀ ಖರ್ಚು ಸರಾಸರಿ 2000 ರೂ. ಯುವ ಜನತೆಯ ದುಡಿಯುವ ಕೈಗಳಿಗೆ ಮಾಸಿಕ ಹಣ ನಿರುದ್ಯೋಗ ಭತ್ಯೆ 3000 ರೂ ಒಟ್ಟಾರೆಯಾಗಿ ರಾಜ್ಯ ಸರ್ಕಾರ ರೂಪಿಸಿದ 5 ಯೋಜನೆಗಳಿಂದ ಕೆಳವರ್ಗ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಸರಾಸರಿ ತಿಂಗಳಿಗೆ 15 ರಿಂದ 18 ಸಾವಿರ ರೂಪಾಯಿಯ ಸೌಲಭ್ಯವನ್ನು ಸರ್ಕಾರ ಒದಗಿಸಿಕೊಟ್ಟಿದೆ. ಇದಲ್ಲವೇ ನಿಜವಾದ ಜನಪರ ಸರ್ಕಾರದ ಯೋಜನೆಗಳು!!!!
ಆದರೆ. ಪದವಿ ಪಡೆದ ಯುವಕರಿಗೆ ದುಡಿಯುವ ಕೈಗಳಿಗೆ ಕೇವಲ ಮೂರು ವರ್ಷಗಳ ಕಾಲ ರೂ. 3000 ರೂಪಾಯಿಗಳನ್ನು ಅವರಿಗೆ ನೀಡುವ ಬದಲು ಉದ್ಯೋಗವನ್ನು ಸೃಷ್ಟಿಸುವ ಜವಾಬ್ದಾರಿಯಲ್ಲಿ ಸರ್ಕಾರ ಮುಂದಾದರೆ ಯುವಕರ ಭವಿಷ್ಯ ಮತ್ತಷ್ಟು ಉಜ್ವಲವಾಗುತ್ತದೆ. ಈ ಉದ್ಯೋಗ ಸೃಷ್ಟಿಯ ಹೊಣೆಗಾರಿಕೆಯನ್ನು ಸರ್ಕಾರ ನಿರ್ವಹಿಸಬೇಕೆ, ಖಾಸಗಿ ಕಂಪನಿಯವರು ನಿರ್ವಹಿಸಬೇಕೆ ಎನ್ನುವ ಗೊಂದಲಕ್ಕಿಂತ ಪ್ರತೀ ಖಾಸಗಿ ಕಂಪನಿಗಳು ಯುವ ಜನತೆಗೆ ಆರ್ಥಿಕ ಭದ್ರತೆಯನ್ನು ನೀಡುವಲ್ಲಿ ಮುಂದಾದರೆ ಬಹಳ ಒಳ್ಳೆಯದು ಎನ್ನುವುದು ಜನಸಾಮಾನ್ಯರ ಅಭಿಪ್ರಾಯ.
ಸರ್ಕಾರಗಳು ಉದ್ಯೋಗವನ್ನು ಸೃಷ್ಟಿಸುವ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಬೇಕು. ಎಲ್ಲಾ ಕ್ಷೇತ್ರಗಳಿಗಿಂತ ಬಹಳಷ್ಟು ದೊಡ್ಡ ಕ್ಷೇತ್ರ ಎಂದರೆ ಅದುವೇ ಶಿಕ್ಷಣಕ್ಕೆ ಕ್ಷೇತ್ರ. ಶಿಕ್ಷಣ ಸಂಸ್ಥೆಗಳು ಪ್ರತಿ ಗಲ್ಲಿ ಗಲ್ಲಿಗಳಲ್ಲಿಯೂ ತಲೆಯತ್ತಿರುವುದು ಸಾವಿರಾರು ಶಿಕ್ಷಕರ ಬದುಕಿಗೆ ದಾರಿದೀಪವಾಗಿವೆ. ಆದರೆ ಈ ಎಲ್ಲಾ ಶಿಕ್ಷಣ ಸಂಸ್ಥೆಗಳು ಶಾಶ್ವತ ಶಿಕ್ಷಣ ಸಂಸ್ಥೆಗಳೆ ಹೊರತು 5 — 10 ವರ್ಷಗಳ ಮಟ್ಟಿಗೆ ಇರುವ ಶಿಕ್ಷಣ ಸಂಸ್ಥೆಗಳಲ್ಲ, ಈ ಶಿಕ್ಷಣ ಸಂಸ್ಥೆಗಳು 50 — 60 ವರ್ಷಗಳ ಸುಧೀರ್ವ ಇತಿಹಾಸವನ್ನು ಹೊಂದಿರುವ ಸಂಸ್ಥೆಗಳಾದರೂ, ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ಶಿಕ್ಷಕ ಮತ್ತು ಕಾರ್ಮಿಕರು ಯಾರು ಸಹ ಖಾಯಂ ಉದ್ಯೋಗದಾರರಾಗದೆ, ಕೇವಲ ತಾತ್ಕಾಲಿಕ ಉದ್ಯೋಗಸ್ಥರಾಗಿದ್ದು, ಸಂಸ್ಥೆಯ ಮಾಲೀಕರು ತಮಗಿಷ್ಟ ಬಂದ ರೀತಿಯಲ್ಲಿ ಅವರನ್ನು ನಡೆಸಿಕೊಳ್ಳುವುದು ಉದ್ಯೋಗ ಭದ್ರತೆಯನ್ನು ನೀಡದಿರುವುದು ಬಹಳ ನೋವಿನ ಸಂಗತಿಯಾಗಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ತಮ್ಮ ಶಿಕ್ಷಕರನ್ನು ಸರ್ಕಾರದ ನಿಯಮಗಳ ಮೂಲಕ ಕಾಯಂಗಗೊಳಿಸಿದ್ದೆ ಆದರೆ ನಿರುದ್ಯೋಗ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಸುದಾರಿಸಬಹುದು. ಅಲ್ಲದೆ ಶಿಕ್ಷಕರು ಸಹ ತಮ್ಮ ಆರ್ಥಿಕ ಭದ್ರತೆಯನ್ನು ಕಂಡುಕೊಳ್ಳಬಹುದು.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಂದು ಗಂಭೀರ ಚಿಂತನೆಯನ್ನು ನಡೆಸಿ ಖಾಸಗಿ ಶಾಲೆಗಳಲ್ಲಿಯೂ ದುಡಿಯುವ ಯುವ ಜನತೆಗೆ ಉದ್ಯೋಗದ ಖಾತರಿ ಭರವಸೆಯನ್ನ ನೀಡಿದ್ದೆ ಆದರೆ, ಖಾಸಗಿ ಸಂಸ್ಥೆಗಳು ಸಹ ಸ್ವಲ್ಪ ಮಟ್ಟಿಗೆ ಶಿಕ್ಷಣ ಎನ್ನುವುದು ಒಂದು ವ್ಯಾಪಾರ ಎನ್ನುವ ಮನಸ್ಥಿತಿಯನ್ನು ದೂರ ಮಾಡಿ, ಶಿಕ್ಷಣ ಎನ್ನುವುದು ಎಲ್ಲ ವರ್ಗದ ಜನರಿಗೂ ತಲುಪಬೇಕಾದ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೂಲಭೂತ ಹಕ್ಕು ಎನ್ನುವುದನ್ನು ಅರ್ಥ ಮಾಡಿಸಬಹುದು.
ಘನ ಸರ್ಕಾರ ಈ ನಿಟ್ಟಿನಲ್ಲಿ ಯುವ ಜನತೆಗೆ ಶಾಶ್ವತವಾದ ಆರ್ಥಿಕ ಭದ್ರತೆಯನ್ನು ಒದಗಿಸುವಲ್ಲಿ ಮುಂದಾಗಬೇಕು, “ಉದ್ಯೋಗ ಸೃಷ್ಟಿಯ ಹೊಣೆ ಸರ್ಕಾರದ್ದೇ ಹೊರತು, ಸಮಾಜದ್ದಲ್ಲ ” ಎನ್ನುವ ಸಂದೇಶವನ್ನು ಇತರೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೀಡುವ ಮೂಲಕ, ಇತರೆ ರಾಜ್ಯ ಸರ್ಕಾರಗಳಿಗೆ ಮಾದರಿಯಾಗಲಿ, ಎನ್ನುವುದು ಯುವ ಜನತೆಯ ಮನದಾಳದ ಆಸೆಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: