ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಅಚ್ಚರಿ ಗೆಲುವಿಗೆ ಇವರೇ ಕಾರಣ..! ಸುನೀಲ್ ಎಂಬ ತಂತ್ರಗಾರನ ರಣತಂತ್ರ ಹೇಗೆ ವರ್ಕ್ ಔಟ್ ಆಯಿತು ಗೊತ್ತಾ..? - Mahanayaka
10:31 AM Tuesday 21 - October 2025

ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಅಚ್ಚರಿ ಗೆಲುವಿಗೆ ಇವರೇ ಕಾರಣ..! ಸುನೀಲ್ ಎಂಬ ತಂತ್ರಗಾರನ ರಣತಂತ್ರ ಹೇಗೆ ವರ್ಕ್ ಔಟ್ ಆಯಿತು ಗೊತ್ತಾ..?

04/12/2023

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಅವರ ಕನಸನ್ನು ನನಸಾಗಿಸುವ ಮೂಲಕ ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್​ ಪಕ್ಷವು ಜಯ ಗಳಿಸಿದೆ. ಇದಕ್ಕೆ ಪಕ್ಷ ರೂಪಿಸಿದ ಚುನಾವಣಾ ಕಾರ್ಯತಂತ್ರ, ಗ್ಯಾರಂಟಿಗಳು ಎಷ್ಟು ಕಾರಣವೋ ಅಷ್ಟೇ ಕಾರಣ ತಂತ್ರಗಾರ ಸುನೀಲ್ ಕಾನುಗೋಲು.

ಹೌದು.
ಕಾಂಗ್ರೆಸ್‌ಗೆ ಬರುವ ಮೊದಲು, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ ಪಕ್ಷದೊಂದಿಗೆ ಸುನೀಲ್ ಅವರು ಅನೇಕ ಸುತ್ತಿನ ಸಭೆಗಳನ್ನು ನಡೆಸಿದ್ದರು. ಆದರೆ ನಂತರ ಕಾಂಗ್ರೆಸ್‌ಗೆ ಸೇರುವ ಮೂಲಕ ಎಲ್ಲರನ್ನೂ ಆಶ್ಚರ್ಯಗೊಳಿಸಿದರು. ಅಲ್ಲದೇ ಅತ್ಯಲ್ಪ ಸಮಯದಲ್ಲಿ ಚುನಾವಣಾ ಕಾರ್ಯತಂತ್ರ ಸಮಿತಿಯ ಅಧ್ಯಕ್ಷರಾದರು.

ಕಳೆದ ವರ್ಷ ಮೇ ತಿಂಗಳಲ್ಲಿ ಸುನೀಲ್ ಅವರನ್ನು ಕಾಂಗ್ರೆಸ್ ತೆಕ್ಕೆಗೆ ಕರೆತರಲಾಯಿತು. ಅಂದಿನಿಂದ ಅವರು ಪಕ್ಷದ ಕಾರ್ಯತಂತ್ರಗಾರರಾಗಿ ಕೆಲಸ ಮಾಡಿದ್ದಾರೆ. ಇದೇ ವೇಳೆ ತೆಲಂಗಾಣದಲ್ಲಿ ಸಮೀಕ್ಷೆಗಳನ್ನು ಸಿದ್ಧಪಡಿಸುವುದು, ಪ್ರಚಾರ ಮಾಡುವುದು, ಅಭ್ಯರ್ಥಿಗಳನ್ನು ನಿರ್ಧರಿಸುವುದು ಮತ್ತು ಗೆಲ್ಲುವ ಕಾರ್ಯತಂತ್ರದ ಜವಾಬ್ದಾರಿಯನ್ನು ಹೊಂದಿದ್ದರು. ಹೀಗಾಗಿ ಇವರ ಕೆಲಸವು ನಿರ್ಣಾಯಕ ಪಾತ್ರವನ್ನು ವಹಿಸಿತು.

ಮಧ್ಯಪ್ರದೇಶ ಮತ್ತು ಛತ್ತೀಸ್ ಗಢಕ್ಕೆ ಹೋಲಿಸಿದರೆ ತೆಲಂಗಾಣವನ್ನು ಗೆಲ್ಲುವುದು ಸುಲಭದ ಮಾತಾಗಿರಲಿಲ್ಲ. ತೆಲಂಗಾಣದಲ್ಲಿ ಆಕ್ರಮಣಕಾರಿ ಪ್ರಚಾರಕ್ಕೆ ರಾಹುಲ್ ಗಾಂಧಿ ಅವರಿಂದ ಒಪ್ಪಿಗೆ ಪಡೆದಿದ್ದರು ಎಂದು ಪಕ್ಷದ ಮೂಲವೊಂದು ತಿಳಿಸಿದೆ. ಸುನೀಲ್ ಕಾನುಗೋಲು ಅವರ ಈ ತಂತ್ರದ ಫಲವಾಗಿಯೇ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಜಂಟಿಯಾಗಿ ಆಗಸ್ಟ್ 25 ರಿಂದ ರಾಜ್ಯದಲ್ಲಿ 65 ಸಾರ್ವಜನಿಕ ಸಭೆ ಮತ್ತು ರೋಡ್ ಶೋಗಳನ್ನು ನಡೆಸಿದ್ದರು.

ಪಕ್ಷದ ಮುಖಂಡರ ಪ್ರಕಾರ, ತೆರೆಮರೆಯಲ್ಲಿಯೇ ಉಳಿದಿರುವ ಸುನೀಲ್ ಕಾನುಗೋಲು ದಕ್ಷಿಣ ರಾಜ್ಯದ ಪ್ರತಿ ವಿಧಾನಸಭಾ ಸ್ಥಾನಕ್ಕೂ ರಣತಂತ್ರ ಸಿದ್ಧಪಡಿಸಿದ್ದಾರೆ. ತೆಲಂಗಾಣದ ಸ್ಪರ್ಧೆ ತ್ರಿಕೋನವಾಗದಂತೆ ಆಡಳಿತಾರೂಢ ಬಿಆರ್ ಎಸ್, ಬಿಜೆಪಿ ಮತ್ತು ಎಐಎಂಐಎಂ ಅನ್ನು ಮೂಲೆಗುಂಪು ಮಾಡುವುದು ಅವರ ತಂತ್ರವಾಗಿತ್ತು. ಇದು ಪಕ್ಷದ ಪರವಾಗಿ ಕೆಲಸ ಮಾಡಿತು.

ಇತ್ತೀಚಿನ ಸುದ್ದಿ