ಪತಿಯ ಖಾಸಗಿ ಅಂಗಕ್ಕೆ ಕರೆಂಟ್ ಶಾಕ್ ಕೊಟ್ಟುಕೊಂದ ಪತ್ನಿ: ಕುಕೃತ್ಯಕ್ಕೆ ಸಾಥ್ ನೀಡಿದ ಪ್ರಿಯಕರ
ನವದೆಹಲಿ: ದಕ್ಷಿಣ ದೆಹಲಿಯ ರತಿಯಾ ಮಾರ್ಗದಲ್ಲಿ ಆಗಸ್ಟ್ 10ರಂದು ನಡೆದಿದ್ದ 55 ವರ್ಷದ ಸಣ್ಣ ಪ್ರಮಾಣದ ಬಿಲ್ಡರ್ ಮುನ್ನಾ ಲಾಲ್ ಅವರ ಅನುಮಾನಾಸ್ಪದ ಸಾವು ಪ್ರಕರಣವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ದರೋಡೆಕೋರರ ಕೃತ್ಯದಂತೆ ಬಿಂಬಿಸಲು ಯತ್ನಿಸಿದ್ದ ಈ ಭೀಕರ ಕೊಲೆಯ ಹಿಂದೆ ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನ ಹಸ್ತವಿರುವುದು ತನಿಖೆಯಲ್ಲಿ ಬಯಲಾಗಿದೆ.
ಆಗಸ್ಟ್ 10ರಂದು ಬೆಳಿಗ್ಗೆ 5 ಗಂಟೆಗೆ ಮಂಜು (45) ಎಂಬಾಕೆ ತನ್ನ ಪತಿ ಮುನ್ನಾ ಲಾಲ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ನೆರೆಹೊರೆಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಮನೆಯಲ್ಲಿದ್ದ ಡ್ರಾಯರ್ ಗಳನ್ನು ತೆರೆದು, ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಹಾಕಿ ದರೋಡೆಕೋರರು ಮನೆಗೆ ನುಗ್ಗಿ ಕೊಲೆ ಮಾಡಿದ್ದಾರೆ ಎಂಬಂತೆ ಬಿಂಬಿಸಲು ಯತ್ನಿಸಲಾಗಿತ್ತು. ಮುನ್ನಾ ಲಾಲ್ ಅವರನ್ನು ಏಮ್ಸ್ (AIIMS) ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.
ಘಟನಾ ಸ್ಥಳದ ಪರಿಶೀಲನೆ ನಡೆಸಿದ ಪೊಲೀಸರು ಮತ್ತು ವಿಧಿವಿಜ್ಞಾನ (Forensic) ತಜ್ಞರಿಗೆ ಕೆಲವು ಅನುಮಾನಗಳು ವ್ಯಕ್ತವಾದವು. ರಕ್ತದ ಕಲೆಗಳನ್ನು ತರಾತುರಿಯಲ್ಲಿ ಒರೆಸಿದ ಗುರುತುಗಳು ಹಾಗೂ ಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಧ್ಯರಾತ್ರಿ 1:45 ರಿಂದ 3:15 ರ ನಡುವೆ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಮನೆಗೆ ಬಂದು ಹೋಗಿರುವುದು ಕಂಡುಬಂದಿದೆ.
ಪೊಲೀಸರು ಮಂಜುಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಪತಿ ಹಣ ನೀಡುತ್ತಿರಲಿಲ್ಲ ಎಂಬ ಕೋಪ ಹಾಗೂ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮಂಜು, ತನ್ನ 20 ವರ್ಷದ ಪ್ರಿಯಕರ ಚಮನ್ ನೊಂದಿಗೆ ಸೇರಿ ಈ ಕೊಲೆಗೆ ಸಂಚು ರೂಪಿಸಿದ್ದಳು. ಪತಿಯನ್ನು ಮುಗಿಸಲು ಚಮನ್ ನಿಗೆ 5 ಲಕ್ಷ ರೂಪಾಯಿ ಹಾಗೂ ಭವಿಷ್ಯದಲ್ಲಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಳು.
ಮಂಜು ತನ್ನ ಪತಿಯ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಆತನನ್ನು ಪ್ರಜ್ಞೆ ತಪ್ಪುವಂತೆ ಮಾಡಿದ್ದಳು. ಬಳಿಕ ಪ್ರಿಯಕರ ಚಮನ್ ನೊಂದಿಗೆ ಸೇರಿ, ಮುನ್ನಾ ಲಾಲ್ ಅವರ ಖಾಸಗಿ ಅಂಗಗಳಿಗೆ ವಿದ್ಯುತ್ ತಂತಿಯಿಂದ ಶಾಕ್ ನೀಡಿದ್ದಾರೆ. ನಂತರ ಮರದ ದಪ್ಪನೆಯ ದೊಣ್ಣೆಯಿಂದ ತಲೆಗೆ ಮತ್ತು ಮುಖಕ್ಕೆ ತೀವ್ರವಾಗಿ ಹೊಡೆದು, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ.
ಕೊಲೆಯ ನಂತರ ಮನೆಗೆ ಕನ್ನ ಹಾಕಿದಂತೆ ಬಿಂಬಿಸಲು ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದರು. ಘಟನಾ ಸ್ಥಳದಲ್ಲೇ ಮಂಜು ಪ್ರಿಯಕರನಿಗೆ 20,000 ರೂ. ನಗದು ನೀಡಿದ್ದಳು.
ದಕ್ಷಿಣ ಜಿಲ್ಲಾ ಪೊಲೀಸರು ಪತ್ನಿ ಮಂಜು, ಪ್ರಿಯಕರ ಚಮನ್ ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ್ದ ಕಿಶನ್ ಎಂಬ ಮೂರನೇ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 15,000 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD



























