ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಸೊಂಡಿಲಿನಿಂದ ಎತ್ತಿ ಎಸೆದ ಕಾಡಾನೆ

ಹಾಸನ: ಕಾಡಾನೆ(Wild elephant) ದಾಳಿಗೆ ಕೂಲಿ ಕಾರ್ಮಿಕರು ಬೆಚ್ಚಿಬಿದ್ದಿದ್ದು, ಕಾರ್ಮಿಕರನ್ನು ಪುಂಡಾನೆಯೊಂದು ಸೊಂಡಿಲಿನಿಂದ ಎತ್ತಿ ಎಸೆದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ, ಹುಲೆಮಕ್ಕಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.
ಮೂಡಿಗೆರೆ ಭಾಗದಿಂದ ಬಂದಿರುವ 2 ಕಾಡಾನೆಗಳು ಉಪಟಳ ಆರಂಭಿಸಿವೆ. ಹಮೀದ್ ಎಂಬವರ ತೋಟದಲ್ಲಿ 15 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಪಕ್ಕದ ಮಾದೇಗೌಡ ಎಂಬವರ ಕಾಫಿ ತೋಟಕ್ಕೆ ನುಗ್ಗಿದ ಒಂಟಿ ಸಲಗ ಏಕಾಏಕಿ ಗಣೇಶ್ ಎಂಬವರನ್ನು ಸೊಂಡಿಲಿನಿಂದ ಹಿಡಿದು ಎತ್ತಿ ಎಸೆದಿದೆ. ಘಟನೆಯಲ್ಲಿ ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರ್ ಎಫ್ ಓ ಶಿಲ್ಪಾ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಪುಂಡಾಟ ಮಿತಿ ಮೀರಿದೆ. ಕಾಡಾನೆಗಳು ಗುಂಪು ಗುಂಪಾಗಿ ಅಲೆದಾಡುತ್ತಾ, ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಮಾಡುತ್ತಿದ್ದು, ಇನ್ನೊಂದೆಡೆ ಕಾರ್ಮಿಕರ ಮೇಲೆ ದಾಳಿ ನಡೆಸುತ್ತಿದೆ. ಇದರಿಂದಾಗಿ ತೋಟದ ಕೆಲಸಗಳಿಗೆ ತೆರಳಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.
ಈಗಾಗಲೇ ಹಲವೆಡೆಗಳಲ್ಲಿ ಜನರ ಮೇಲೆ ಕಾಡಾನೆಗಳು ದಾಳಿ ನಡೆಸಿದರೂ ಅರಣ್ಯ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ಆಕ್ರೋಶ ಕೇಳಿ ಬಂದಿದೆ. ಬಡ ಕೂಲಿ ಕಾರ್ಮಿಕರು ಪ್ರತಿದಿನವೂ ಜೀವ ಭಯದಿಂದ ಕೆಲಸಕ್ಕೆ ತೆರಳುವಂತಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth